ADVERTISEMENT

ಜಿಲ್ಲಾ ಕಸಾಪ: ಮಲೆಯೂರು ಗುರುಸ್ವಾಮಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 5:34 IST
Last Updated 1 ಏಪ್ರಿಲ್ 2021, 5:34 IST
ಮಲೆಯೂರು ಗುರುಸ್ವಾಮಿ
ಮಲೆಯೂರು ಗುರುಸ್ವಾಮಿ   

ಚಾಮರಾಜನಗರ: ದಿಢೀರ್‌ ಬೆಳವಣಿಗೆಯೊಂದರಲ್ಲಿ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗುರುಸ್ವಾಮಿ ಅವರು ಮೊದಲ ಮೂರು ಅವಧಿಗೆ, ಅಂದರೆ ಒಂಬತ್ತು ವರ್ಷಗಳ ಜಿಲ್ಲಾ ಕಸಾಪದ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳಿಂದ ಅವರು ಪರಿಷತ್ತಿನ ಚಟುವಟಿಕೆಗಳಿಂದ ದೂರ ಉಳಿದಿದ್ದರು.

ADVERTISEMENT

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಗುರುಸ್ವಾಮಿ ಅವರ ಹೆಸರು ಇದುವರೆಗೂ ಕೇಳಿ ಬಂದಿರಲಿಲ್ಲ. ದಿಢೀರ್ ಆಗಿ ಅವರು ಸ್ಪರ್ಧಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕಸಾಪದ ಮಾಜಿ ಅಧ್ಯಕ್ಷರಾದ ನಾಗಮಲ್ಲಪ್ಪ ಹಾಗೂ ಸೋಮಶೇಖರ ಬಿಸಲ್ವಾಡಿ ಅವರು ಗುರುಸ್ವಾಮಿ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು ಗೊತ್ತಾಗಿದೆ.

ಎರಡು ಮೂರು ದಿನಗಳಿಂದ ಕಸಪಾದ ಹಿರಿಯ ಸದಸ್ಯರು, ಆತ್ಮೀಯರೊಂದಿಗೆ ಚರ್ಚಿಸಿದ ಬಳಿಕ ಸ್ಪರ್ಧಿಸಲು ಅವರು ಒಲವು ತೋರಿದರು ಎಂದು ತಿಳಿದು ಬಂದಿದೆ. ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಆಯೋಜಿಸಬೇಕು ಮತ್ತು ಕನ್ನಡ ಸಾಹಿತ್ಯ ಭವನವನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಸಲ್ವಾಡಿ ಕಣದಿಂದ ಹಿಂದಕ್ಕೆ?

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಬಯಸಿರುವವರ ಪಟ್ಟಿಯಲ್ಲಿ ಸೋಮಶೇಖರ ಬಿಸಲ್ವಾಡಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಪ್ರೊ.ಗುರುಸ್ವಾಮಿ ಅವರು ಕಣಕ್ಕಿಳಿಯಲು ನಿರ್ಧರಿಸಿರುವುದರಿಂದ, ಇವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ.

‘ಪ್ರೊ.ಮಲೆಯೂರು ಗುರುಸ್ವಾಮಿ ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿರುವುದು ನಿಜ. ನನಗೆ ಅವರು ಗುರುಗಳು. ಅವರು ಸ್ಪರ್ಧಿಸುತ್ತಾರೆ ಎಂದರೆ ನಾನು ಸ್ಪರ್ಧಿಸುವುದು ಸರಿಯಾಗುವುದಿಲ್ಲ’ ಎಂದು ಸೋಮಶೇಖರ ಬಿಸಲ್ವಾಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.