ADVERTISEMENT

ಚಾಮರಾಜನಗರ: ಪತ್ನಿ ಕೊಲೆ- ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 16:09 IST
Last Updated 10 ನವೆಂಬರ್ 2021, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಗಿರವಿ ಇಟ್ಟಿದ್ದ ಚಿನ್ನದ ನೆಕ್‌ಲೆಸ್‌ ಬಿಡಿಸಿಕೊಡುವ ವಿಚಾರದಲ್ಲಿ ಗಲಾಟೆಯಾಗಿ ಪತ್ನಿಯನ್ನೇ ಕೊಲೆ ಮಾಡಿದ್ದ ಪತಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವುಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

ತಾಲ್ಲೂಕಿನ ಕೋಳಿಪಾಳ್ಯದ ತೊಳಚನಾಯಕ ಅಲಿಯಾಸ್‌ ಚಾಂಪ್ಲಾ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2017ರ ಮಾರ್ಚ್‌ 27ರಂದು ಪ‍ತ್ನಿ ಪುಷ್ಪಬಾಯಿಯನ್ನು ಕೊಡಲಿಯಿಂದ ಹತ್ಯೆ ಮಾಡಿದ್ದ.

ಪ್ರಕರಣದ ವಿವರ: ಪುಷ್ಪಬಾಯಿ ಅವರನ್ನು ತೊಳಚನಾಯಕಗೆ ಮದುವೆ ಮಾಡಿ ಕೊಡುವ ಸಂದರ್ಭದಲ್ಲಿ ಆಕೆಯ ಮಾವಂದಿರು 20 ಗ್ರಾಂ ತೂಕದ ಚಿನ್ನದ ನೆಕ್‌ಲೆಸ್‌ ನೀಡಿದ್ದರು. ತೊಳಚನಾಯಕನ ಸಹೋದರನೊಬ್ಬ ಬೈಕ್‌ನನ್ನು ಆಟೊರಿಕ್ಷಾವೊಂದಕ್ಕೆ ಗುದ್ದಿಸಿದ್ದ ಪ್ರಕರಣದಲ್ಲಿ ನ್ಯಾಯ ತೀರ್ಮಾನ ಮಾಡಿದ್ದ ಗ್ರಾಮದ ಯಜಮಾನರು, ಆಟೊ ದುರಸ್ತಿಗೆ ದಂಡಕಟ್ಟುವಂತೆ ಹೇಳಿದ್ದರು. ದಂಡದ ಹಣಕ್ಕಾಗಿ ತೊಳಚನಾಯಕ ತನ್ನ ಪತ್ನಿಯ ಬಳಿಯಿದ್ದ ನೆಕ್‌ಲೆಸ್‌ ಅಡವಿಟ್ಟು ದುಡ್ಡು ತಂದಿದ್ದ.

ADVERTISEMENT

ಅಡವಿಟ್ಟ ನೆಕ್‌ಲೆಸ್‌ ಬಿಡಿಸಿ ಕೊಡುವಂತೆ ಪುಷ್ಪಬಾಯಿ ಪದೇ ಪದೇ ಹೇಳುತ್ತಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ತೊಳಚನಾಯಕ ಹಾಗೂ ಮನೆಯವರು, ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಈ ವಿಚಾರಕ್ಕೆ ತೊಳಚನಾಯಕ ಹಾಗೂ ಪುಷ್ಪಬಾಯಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

2017ರ ಮಾರ್ಚ್‌ 27ರ ರಾತ್ರಿಯೂ ಗಲಾಟೆಯಾಗಿತ್ತು. ಅಂದು ರಾತ್ರಿ ಮನೆಗೆ ಊಟಕ್ಕೆ ಬಂದಿದ್ದ ಪುಷ್ಪಬಾಯಿ ಪೋಷಕರು ಸಮಾಧಾನ ಮಾಡಿದ್ದರು. ಮಧ್ಯರಾತ್ರಿ 2.30ರ ಸುಮಾರಿಗೆ ಇದೇ ವಿಷಯವಾಗಿ ಮತ್ತೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ನೆಕ್‌ಲೆಸ್‌ ಬಿಡಿಸಿಕೊಡುವಂತೆ ಪುಷ್ಪಬಾಯಿ ಪಟ್ಟು ಹಿಡಿದ್ದರಿಂದ ಕೋಪಗೊಂಡ ತೊಳಚನಾಯಕ, ಕೊಡಲಿಯಿಂದ ಆಕೆಯ ಮುಖ, ಕಣ್ಣು, ಮೂಗು ತಲೆಗೆ ಹೊಡೆದು ಕೊಲೆ ಮಾಡಿದ್ದ.

ಚಾಮರಾಜನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಸ್ವಾಮಿ, ಸಬ್‌ ಇನ್‌ಸ್ಪೆಕ್ಟರ್‌ ಆನಂದೇಗೌಡ ಮತ್ತು ಸಿಬ್ಬಂದಿ ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ತೊಳಚನಾಯಕನ ವಿರುದ್ಧದ ಆರೋಪ ಸಾಬೀತಾಗಿರುವುದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಲೋಕಪ್ಪ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹1.20 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಂ.ಎಸ್‌.ಉಷಾ ಅವರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.