ADVERTISEMENT

ಹಣದ ವಿಚಾರಕ್ಕೆ ಮಹಿಳೆ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 17:02 IST
Last Updated 26 ನವೆಂಬರ್ 2020, 17:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ಆದೇಶ ಹೊರಡಿಸಿದೆ.

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಆನಂದಕುಮಾರ ಶಿಕ್ಷೆಗೊಳಗಾದ ವ್ಯಕ್ತಿ. 2016ರ ಫೆಬ್ರುವರಿ 13ರಂದು ಕೊಲೆ ನಡೆದಿತ್ತು.

ತೆರಕಣಾಂಬಿ ಗ್ರಾಮದ ರತ್ನಮ್ಮ ಎಂಬ ಮಹಿಳೆಯ ಗಂಡ ರಾಮಚಂದ್ರ ಅವರಿಂದ ಆನಂದಕುಮಾರ ₹10 ಸಾವಿರ ಸಾಲ ಪಡೆದಿದ್ದ. ಅದನ್ನು ಮರುಪಾವತಿಗೆ ಹೋಗಿದ್ದ ಸಂದರ್ಭದಲ್ಲಿ, ಇದಕ್ಕೆ ಬಡ್ಡಿ ಸೇರಿಸಿ ಹೆಚ್ಚಿನ ಮೊತ್ತ ನೀಡಬೇಕು ಎಂದು ರತ್ನಮ್ಮ ಪಟ್ಟು ಹಿಡಿದಿದ್ದರು. ಆಗ ಇಬ್ಬರಿಗೂ ಜಗಳವಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು.

ADVERTISEMENT

ಇದೇ ದ್ವೇಷದಿಂದ 2016ರ ಫೆ.13ರಂದು ಸಂಜೆ 4.30ರಲ್ಲಿ ರತ್ನಮ್ಮ ಅವರು ಚಿನ್ನಮ್ಮ ಎಂಬುವವರೊಡನೆ ತೆರಕಣಾಂಬಿಯ ರಾಮಮಂದಿರದ ಬಳಿನಡೆದು ಹೋಗುತ್ತಿದ್ದಾಗ, ಸೈಕಲ್‌ನಲ್ಲಿ ಬಂದ ಆನಂದಕುಮಾರ, ‘ಸಾಲದ ಹಣ ಪಾವತಿ ಮಾಡಲು ಬಂದರೆ ಹೆಚ್ಚು ಹಣ ಕೇಳುತ್ತೀರಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು ರತ್ನಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು.

ಕೊಲೆ ಮಾಡಿರುವುದು ಸಾಬೀತು ಆಗಿರುವುದರಿಂದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌. ಸುಲ್ತಾನ್‌ಪುರಿ ಅವರು ಆನಂದನಿಗೆ ಜೀವಾವಧಿ ಶಿಕ್ಷೆ ಹಾಗೂ ₹6,500 ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.