ADVERTISEMENT

ಗುಂಡ್ಲುಪೇಟೆ | ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ತಂದೆ, ತಮ್ಮನಿಂದ ವ್ಯಕ್ತಿಯ ಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 14:39 IST
Last Updated 28 ಜೂನ್ 2020, 14:39 IST
   

ಗುಂಡ್ಲುಪೇಟೆ: ಜಮೀನಿನಲ್ಲಿರುವ ಮರಕಡಿಯುವ ವಿಚಾರದಲ್ಲಿ ಉಂಟಾದ ಜಗಳದಲ್ಲಿ ತಂದೆಯೇ ಮಗನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಹೊನ್ನೇಗೌಡಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಮಲ್ಲಿಕಾರ್ಜುನಪ್ಪ (48) ಕೊಲೆಯಾದವರು. ಆರೋಪಿ ಮಹದೇವಪ್ಪ ಅವರು ಪೊಲೀಸರಿಗೆ ಶರಣಾಗಿದ್ದಾರೆ.

ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಮರ ಕಡಿಯುವ ವಿಚಾರದಲ್ಲಿ ತಂದೆಹಾಗೂ ಮಗನ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ತಂದೆ ಮಹದೇವಪ್ಪ ಮಗ ಮಲ್ಲಿಕಾರ್ಜುನಪ್ಪ ಅವರನ್ನು ಕೊಡಲಿಯಿಂದ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮಲ್ಲಿಕಾರ್ಜುನಪ್ಪ ಅವರು ಹಲವು ವರ್ಷಗಳಿಂದ ಕುಟುಂಬದಿಂದ ದೂರ ಇದ್ದರು. ಆಸ್ತಿ ವಿಚಾರವಾಗಿ ತಂದೆ ಹಾಗೂ ಇತರ ಸಹೋದದರ ನಡುವೆ ಭಿನ್ನಾಭಿಪ್ರಾಯ ಇತ್ತು. ಹಲವು ಬಾರಿ ಜಗಳವೂ ನಡೆದಿತ್ತು.

ಕುಟುಂಬಕ್ಕೆ ಸೇರಿದ ಜಮೀನಿನಲ್ಲಿದ್ದ ಮರವನ್ನು ಕಡಿಯಲು ಮಲ್ಲಿಕಾರ್ಜುನಪ್ಪ ಮುಂದಾಗಿದ್ದರು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದುದರಿಂದ ರಾಜಿ ಪಂಚಾಯತಿ ನಡೆಸಿ ತಿರ್ಮಾನ ಮಾಡುವುದಾಗಿ ಗ್ರಾಮಸ್ಥರು ಇಬ್ಬರಿಗೂ ಬುದ್ದಿ ಮಾತು ಹೇಳಿದ್ದರು.

ತೀರ್ಮಾನವಾಗುವುದಕ್ಕಿಂತಲೂ ಮೊದಲೇ ಭಾನುವಾರ ಮಲ್ಲಿಕಾರ್ಜುನಪ್ಪ ಅವರುಜಮೀನಿನಲ್ಲಿ ಮರ ಕಡಿಯಲು ಮುಂದಾಗಿದ್ದರು. ಅಲ್ಲೇ ಇದ್ದ ತಂದೆ ಮಹಾದೇವಪ್ಪ ಅವರು ತಡೆಯಲು ಮುಂದಾದಾಗ, ಪರಸ್ಪರ ಗಲಾಟೆ ನಡೆದು ತಂದೆ ಕೊಡಲಿಯಿಂದ ಮಗನಿಗೆ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೃತಪಟ್ಟಿರುವ ಮಲ್ಲಿಕಾರ್ಜುನಪ್ಪ ಅವರ ಪತ್ನಿ ಸವಿತ ಅವರು ಮಹದೇವಪ್ಪ ಹಾಗೂ ಅವರ ಮಕ್ಕಳಾದ ಮಹದೇವಪ‍್ಪ, ಇಂದಿರಾ, ಶಿವಶಂಕರಪ್ಪ, ವೀರಭದ್ರಪ್ಪ ಹಾಗೂ ಸುಭಾಷ್‌ ಎಂಬುವವರ ವಿರುದ್ಧ ದೂರು ನೀಡಿದ್ದು, ಗುಂಡ್ಲುಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಸಬ್‌ ಇನ್‌ಸ್ಪೆಕ್ಟರ್‌ ಭೇಟಿ ಮಾಡಿ ಪರಿಶೀಲಿಸಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.