ADVERTISEMENT

ಚಾಮರಾಜನಗರ: ಜನರ ಜೀವಕ್ಕೆ ಕಂಟಕವಾದ ಮ್ಯಾನ್‌ಹೋಲ್‌

ರಸ್ತೆ ಮೇಲ್ಮೈಗಿಂತ ಎತ್ತರದಲ್ಲಿರುವ ಯುಜಿಡಿ; ಅಪಾಯಕ್ಕೆ ಆಹ್ವಾನ

ಬಾಲಚಂದ್ರ ಎಚ್.
ಅವಿನ್ ಪ್ರಕಾಶ್
Published 10 ಫೆಬ್ರುವರಿ 2025, 7:37 IST
Last Updated 10 ಫೆಬ್ರುವರಿ 2025, 7:37 IST
ಚಾಮರಾಜನಗರದ ಪಿಡಬ್ಲ್ಯುಡಿ ವಸತಿ ನಿಲಯಗಳು ಇರುವ ರಸ್ತೆಯ ಮಧ್ಯೆ ಇರುವ ಅಪಾಯಕಾರಿ ಮ್ಯಾನ್‌ಹೋಲ್
ಪ್ರಜಾವಾಣಿ ಚಿತ್ರ: ವೆಂಕಟರಾಮು
ಚಾಮರಾಜನಗರದ ಪಿಡಬ್ಲ್ಯುಡಿ ವಸತಿ ನಿಲಯಗಳು ಇರುವ ರಸ್ತೆಯ ಮಧ್ಯೆ ಇರುವ ಅಪಾಯಕಾರಿ ಮ್ಯಾನ್‌ಹೋಲ್ ಪ್ರಜಾವಾಣಿ ಚಿತ್ರ: ವೆಂಕಟರಾಮು   

ಚಾಮರಾಜನಗರ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ಅಪಾಯಕಾರಿ ಮ್ಯಾನ್‌ಹೋಲ್‌ಗಳು ತಲೆಎತ್ತಿದ್ದು ವಾಹನ ಸವಾರರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ. ರಸ್ತೆಯ ಮೇಲ್ಮೈಗೆ ಸರಿಸಮನಾಗಿ ಇರಬೇಕಾದ ಮ್ಯಾನ್‌ಹೋಲ್‌ ಚೇಂಬರ್‌ಗಳು ಕೆಲವು ಕಡೆಗಳಲ್ಲಿ ರಸ್ತೆಗಿಂತ 1 ಅಡಿ ಎತ್ತರದಲ್ಲಿದ್ದರೆ ಕೆಲವು ಕಡೆ ಒಂದು ಅಡಿ ಗುಂಡಿಯಲ್ಲಿದ್ದು ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದೊಡ್ಡಿವೆ.

ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಹೋಗುವಾಗ ದೈತ್ಯ ಮ್ಯಾನ್‌ಹೋಲ್‌ಗಳ ಮೇಲೆ ವಾಹನಗಳನ್ನು ಹತ್ತಿಸಿ ನಿಯಂತ್ರಣ ಕಳೆದುಕೊಂಡು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ನಾಲ್ಕು ಚಕ್ರದ ವಾಹನಗಳು ರಸ್ತೆಗಳಲ್ಲಿ ಸಾಗುವಾಗ ಮೇಲ್ಮಟ್ಟದಲ್ಲಿರುವ ಮ್ಯಾನ್‌ಹೋಲ್‌ಗಳು ಚಾಸಿಸ್‌ಗೆ ಬಡಿದು ವಾಹನಗಳಿಗೆ ಗಂಭೀರ ಸ್ವರೂಪದ ಹಾನಿಗಳಾಗುತ್ತಿವೆ. ಇಷ್ಟಾದರೂ ರಸ್ತೆಗಳ ಹಾಗೂ ಒಲಚರಂಡಿಗಳ ನಿರ್ವಹಣೆ ಹೊಣೆ ಹೊತ್ತುಕೊಂಡಿರುವ ಸ್ಥಳೀಯಾಡಳಿತ, ಲೋಕೋಪಯೋಗಿ ಇಲಾಖೆ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಗೊಳಪಡುವ ಬಹುತೇಕ ಬಡಾವಣೆಗಳಲ್ಲಿ ಅಪಾಯಕಾರಿ ಮ್ಯಾನ್‌ಹೋಲ್‌ಗಳು ಕಾಣಸಿಗುತ್ತವೆ. ನಗರದ ಹೊಸ ಬಡಾವಣೆಗಳಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಚ್ಚಾರಸ್ತೆಗಳ ಮಧ್ಯೆ ಮ್ಯಾನ್‌ಹೋಲ್‌ಗಳು ಬಲಿಗಾಗಿ ಬಾಯ್ತೆರೆದುಕೊಂಡು ನಿಂತಿವೆ.

ADVERTISEMENT

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರಸಭೆಯ ಪೌರಾಯುಕ್ತರು ಸಹಿತ ಹಿರಿಯ ಅಧಿಕಾರಿಗಳ ನಿವಾಸಗಳ ಸಮೀಪದಲ್ಲಿರುವ ಪಿಡಬ್ಲ್ಯುಡಿ ವಸತಿಗೃಹಗಳ ರಸ್ತೆಗಳಲ್ಲಿ ಹತ್ತಕ್ಕೂ ಹೆಚ್ಚು ಅಪಾಯಕಾರಿ ಮ್ಯಾನ್‌ಹೋಲ್‌ಗಳು ಇವೆ. ಜಿಲ್ಲಾ ನ್ಯಾಯಾಲಯದಿಂದ ನಿಜಗುಣ ರೆಸಾರ್ಟ್‌ವರೆಗೂ ಚಾಚಿಕೊಂಡಿರುವ ಅರೆ ಬರೆ ಕಾಮಗಾರಿಯ ‌ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳವನ್ನೂ ಹಾಕಲಾಗಿಲ್ಲ.

ರಸ್ತೆಯ ಮಧ್ಯೆಯಲ್ಲಿರುವ ಚೇಂಬರ್‌ಗಳು ರಾತ್ರಿಯ ಹೊತ್ತು ವಾಹನ ಸವಾರರಿಗೆ ಕಾಣದೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಕನಿಷ್ಠ  ಮ್ಯಾನ್‌ಹೋಲ್‌ಗಳ ಮುಚ್ಚಳ ಮುಚ್ಚುವ ಕೆಲಸಕ್ಕೂ ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ನಗರದ ಸೇಂಟ್‌ ಜೋಸೆಫ್‌ ಶಾಲೆಯ ಎದುರು, ಬ್ರಹ್ಮಕುಮಾರಿ ಸಂಸ್ಥೆಯ ಹಿಂಭಾಗದ ರಸ್ತೆಯಲ್ಲಿ ಸಮಸ್ಯೆ ಗಂಭೀರವಾಗಿದೆ. 

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳು ರಸ್ತೆಯ ಮೇಲ್ಮೈಗಿಂತ ಕೆಳಮಟ್ಟದಲ್ಲಿವೆ ವೇಗವಾಗಿ ಸಾಗುವ ವಾಹನಗಳು ದಿಢೀರ್  ಗುಂಡಿಗಳಿಗೆ ಇಳಿದು ನಿಯಂತ್ರಣ ತಪ್ಪಿ ಡಿವೈಡರ್‌ಗಳಿಗೆ ಡಿಕ್ಕಿಹೊಡೆಯುತ್ತಿವೆ. ಭುವನೇಶ್ವರಿ ವೃತ್ತದಿಂದ ನಂಜನಗೂರು, ಮೈಸೂರು, ಕೊಳ್ಳೇಗಾಲ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗುಂಡ್ಲುಪೇಟೆ ಹಾಗೂ ಸತ್ತಿ ರಸ್ತೆಯಲ್ಲೂ ಹಲವು ಅಪಾಯಕಾರಿ ಚೇಂಬರ್‌ಗಳಿವೆ.

ರಾಮಸಮುದ್ರ, ಹಳೆಯ ಹಾಗೂ ಹೊಸ ಹೌಸಿಂಗ್ ಬಡಾವಣೆಗಳು, ಬುದ್ಧನಗರ, ಕರಿನಂಜನಪುರ ಬಡಾವಣೆ, ಪ್ರಗತಿ ನಗರ, ಎಲ್‌ಐಸಿ ಕಾಲೊನಿ ಸಹಿತ ಬಹುತೇಕ ಬಡಾವಣೆಗಳಲ್ಲಿ ಅಪಾಯಕಾರಿ ಮ್ಯಾನ್‌ಹೋಲ್‌ಗಳು ರಸ್ತೆಯ ಮಧ್ಯೆ ಇವೆ. 

ಸಮಸ್ಯೆಗೆ ಕಾರಣ: ರಸ್ತೆ ನಿರ್ಮಾಣ ಮಾಡುವಾಗ ಮ್ಯಾನ್‌ಹೋಲ್‌ಗಳ ಸಮನಾಗಿ ಕಾಂಕ್ರೀಟ್‌ ಅಥವಾ ಡಾಂಬರ್‌ ಹಾಕದೆ ಕಾಮಗಾರಿ ನಡೆಸುತ್ತಿರುವುದು,  ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರು ಕಾಲಕಾಲಕ್ಕೆ ಮ್ಯಾನ್‌ಹೋಲ್‌ಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಒಡೆದ ಮುಚ್ಚಳಗಳನ್ನೂ ಬದಲಿಸುತ್ತಿಲ್ಲ. ಪರಿಣಾಮ ಸಾರ್ವಜನಿಕರು ಶಿಕ್ಷೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಮಹೇಶ್‌.

ಕೊಳ್ಳೇಗಾಲದಲ್ಲಿ ಅಪಾಯಕಾರಿ ಯುಜಿಡಿ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಬಡಾವಣೆಗಳ ನಡುರಸ್ತೆಯಲ್ಲಿ ಅಪಾಯಕಾರಿ ಯುಜಿಡಿ ಮ್ಯಾನ್ ಹೋಲ್‌ಗಳು ತಲೆಎತ್ತಿದೆ. ರಸ್ತೆಯ ಮೇಲೆ ಅರ್ಧ ಅಡಿ ಎತ್ತರದಲ್ಲಿ ಹಾಗೂ ಅರ್ಧ ಅಡಿಯಷ್ಟು ಆಳವಾದ ಚೇಂಬರ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಪರಿಣಾಮ ಬೈಕ್ ಸವಾರರು ಹಾಗೂ ಇತರ ವಾಹನಗಳ ಸವಾರರು ಜೀವ ಕೈಲಿಡಿದುಕೊಂಡು ಸಂಚರಿಸಬೇಕಾದ ಪರರಿಸ್ಥಿತಿ ಎದುರಾಗಿದೆ.

ಬಹುತೇಕ ಕಡೆಗಳಲ್ಲಿ ಕಳಪೆ ಕಾಮಗಾರಿಯಿಂದ ಮ್ಯಾನ್ ಹೋಲ್‌ಗಳು ಒಡೆದುಹೋಗಿವೆ. ಕೆಲವು ಚೇಂಬರ್‌ಗಳ ಮುಚ್ಚಳಳ ಹಾಳಾಗಿದ್ದು ಅಪಾಯಕ್ಕೆ ಬಾಯ್ತೆರೆದು ನಿಂತಿವೆ. ರಸ್ತೆಗಿಂತ ಎತ್ತರದ ಹಾಗೂ ರಸ್ತೆಗಿಂತ ಕೆಳರಿರುವ ಮ್ಯಾನ್‌ಹೋಲ್‌ಗಳು ದ್ವಿಚಕ್ರ ವಾಹನ ಸವಾರರ ಬೆನ್ನುಹುರಿಗೆ ಗಂಭೀರ ಪೆಟ್ಟು ನೀಡುತ್ತಿವೆ.

ನಗರದ ಮಾನಸ ಕಾಲೇಜು ಮುಖ್ಯ ರಸ್ತೆಯಲ್ಲಿ ಮ್ಯಾನ್ ಹೋಲ್‌ಗಳು ರಸ್ತೆಯೇ ಮೇಲ್ಮೈಗಿಂತ  ಕೆಳಭಾಗದಲ್ಲಿ ಇದ್ದು ನಿತ್ಯವೂ ಬೈಕ್ ಸವಾರರು ಗೆ ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕ ಮ್ಯಾನ್ ಹೋಲ್‌ಗೆ ಬೈಕ್‌ ಇಳಿಸಿ ಇಬ್ಬರು ಯುವಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಶಿವಕುಮಾರ ಸ್ವಾಮೀಜಿ ಬಡಾವಣೆ ಸೇರಿದಂತೆ ಹಲವು ಜನವಸತಿ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕ ಮ್ಯಾನ್ ಹೋಲ್‌ಗಳನ್ನು ಕಾಣಬಹುದಾಗಿದೆ. ರಾತ್ರಿಯ ಹೊತ್ತು ಬೀದಿದೀಪಗಳು ಇಲ್ಲದ ಕಡೆಗಳಲ್ಲಿ ವೇಗವಾಗಿ ಸಾಗುವ ದ್ವಿಚಕ್ರ ವಾಹನ ಸವಾರರು ಮ್ಯಾನ್‌ಹೋಲ್‌ಗಳಿಗೆ ಡಿಕ್ಕಿ ಹೊಡೆದುಕೊಂಡು ಅಪಘಾತ ಮಾಡಿಕೊಳ್ಳುತ್ತಿದ್ದಾರೆ. 

ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆಗೆ ಮಧ್ಯೆ ಬಾಯ್ತೆರೆದು ನಿಂತಿರುವ ಮ್ಯಾನ್‌ಹೋಲ್
ಮ್ಯಾನ್‌ಹೋಲ್‌ ಚೇಂಬರ್‌ ಕೆಲವೆಡೆ ರಸ್ತೆಗಿಂತ 1 ಅಡಿ ಎತ್ತರ ಮ್ಯಾನ್‌ಹೋಲ್‌ಗಳಿಗೆ ಡಿಕ್ಕಿ ಹೊಡೆದು ಸವಾರರಿಗೆ ಅಪಘಾತ ರಸ್ತೆ ನಿರ್ಮಿಸುವ ಗುತ್ತಿಗೆದಾರರು ಮ್ಯಾನ್‌ಹೋಲ್‌ ನಿರ್ವಹಣೆ ಮಾಡುತ್ತಿಲ್ಲ

ಯಾರು ಏನಂತಾರೆ ?

‘ರಸ್ತೆ ಮೇಲ್ಮೈಗಿಂತ ಮೇಲಿವೆ’ ನಗರಸಭೆ ವ್ಯಾಪ್ತಿಯಲ್ಲಿ ಕಚ್ಛಾರಸ್ತೆಗಳು ಇರುವ ಕಡೆಗಳಲ್ಲಿ ಮಾತ್ರ ಮ್ಯಾನ್‌ಹೋಲ್‌ಗಳು ರಸ್ತೆ ಮೇಲ್ಮೈಗಿಂತ ಮೇಲಿವೆ. ರಸ್ತೆಗೆ ಕಾಂಕ್ರೀಟ್ ಅಥವಾ ಡಾಂಬರ್‌ ಹಾಕುವಾಗ ಮ್ಯಾನ್‌ಹೋಲ್‌ ಸಮನಾಗಿ ಹಾಕಲು ಹಾಗೆಯೇ ಬಿಡಲಾಗಿದೆ. ಸಮಸ್ಯೆ ಹೆಚ್ಚಾಗಿರುವ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಚೇಂಬರ್‌ಗಳನ್ನು ದುರಸ್ತಿಗೊಳಿಸಲಾಗುವುದು.

-ಸುರೇಶ್ ಚಾ.ನಗರ ನಗರಸಭೆ ಅಧ್ಯಕ್ಷ

ಜನರ ಜೀವದ ಜೊತೆ ಚೆಲ್ಲಾಟ ಗುತ್ತಿಗೆದಾರರು ಹಾಗೂ ನಗರಸಭೆಯವರು ಶಾಮೀಲಾಗಿದ್ದು ಅವೈಜ್ಞಾನಿಕ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರ ಜೀವದ ಜೊತೆಗೆ ಚೆಲ್ಲಾಟ ಆಡುವುದನ್ನು ಬಿಟ್ಟು ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು.

-ಡಾ‌.ಗುರುಮೂರ್ತಿ ಕೊಳ್ಳೇಗಾಲ

ಗುತ್ತಿಗೆದಾರರಿಗೆ ಸೂಚನೆ ನಗರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಅವೈಜ್ಞಾನಿಕ ಮ್ಯಾನ್ ಹೋಲ್‌ಗಳು ಇರುವ ವಿಚಾರ ಗಮನಕ್ಕೆ ಬಂದಿದ್ದು ಶೀಘ್ರ ಗುತ್ತಿಗೆದಾರರಿಂದ ಮ್ಯಾನ್ ಹೋಲ್‌ಗಳ ದುರಸ್ತಿ ಮಾಡಿಸಲಾಗುವುದು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

-ರೇಖಾ ನಗರಸಭೆ ಅಧ್ಯಕ್ಷೆ

ಯುಜಿಡಿ ಕಾಮಗಾರಿ ಮಾಡುವಾಗ ರಸ್ತೆಯ ಬದಿಗೆ ಮ್ಯಾನ್‌ಹೋಲ್‌ಗಳನ್ನು ಮಾಡಿದ್ದರೆ ಅನಾಹುತಗಳು ತಪ್ಪುತ್ತಿತ್ತು. ಆದರೆ ರಸ್ತೆಯ ಮಧ್ಯೆ ನಿರ್ಮಾಣ ಮಾಡಿರುವುದರಿಂದ ವಾಹನ ಸವಾರರು ಬಿದ್ದು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಸಮಸ್ಯೆ ಸರಿಪಡಿಸುವಂತೆ ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮ್ಯಾನ್‌ಹೋಲ್‌ಗಳು ದುರಸ್ತಿಯಲ್ಲಿವೆ ಎಂಬ ಎಚ್ಚರಿಕೆ ಫಲಕಗಳನ್ನು ಹಾಕುವ ಕಾಳಜಿಯನ್ನೂ ನಗರಸಭೆ ತೋರುತ್ತಿಲ್ಲ.

-ಭಾನುಪ್ರಕಾಶ್ ಸಾಮಾಜಿಕ ಹೋರಾಟಗಾರ

ತೆರಿಗೆ ಹಣ ಪೋಲು ಜನಸಾಮಾನ್ಯರಿಂದ ತೆರಿಗೆ ಸಂಗ್ರಹಣೆ ಮಾಡುವ ನಗರಸಭೆ ಜನರಿಗೆ ಅಗತ್ಯವಾಗಿರುವಂತಹ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ವ್ಯವಸ್ಥೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸುವ ಮೂಲಕ ತೆರಿಗೆ ಹಣವನ್ನು ವ್ಯಯ ಮಾಡುತ್ತಿದೆ. ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಇನ್ನಾದರೂ ರಸ್ತೆ ಮಧ್ಯೆ ಉಬ್ಬುತಗ್ಗುಗಳೊಂದಿಗೆ ನಿರ್ಮಾಣ ಮಾಡಿರುವ ಯುಜಿಡಿಗಳನ್ನು ನಗರಸಭೆ ಹಾಗೂ ಜಿಲ್ಲಾಡಳಿತ ವೈಜ್ಞಾನಿಕ ರೀತಿಯಲ್ಲಿ ದುರಸ್ತಿಗೊಳಿಸಬೇಕು.

-ಪ್ರಿಯಾಂಕ ಚಾಮರಾಜನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.