
ಚಾಮರಾಜನಗರ: ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಗುರುವಾರ ನಗರದ ಹಲವೆಡೆ ಮನುಸ್ಮೃತಿ ಪ್ರತಿಗಳನ್ನು ಹರಿದು ಪ್ರತಿಭಟನೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಮಾತನಾಡಿ, ಶ್ರೇಣೀಕೃತ ಜಾತಿ ವ್ಯವಸ್ಥೆ ಪರವಾಗಿದ್ದ ಹಾಗೂ ಮಹಿಳಾ ಸಮಾನತೆಗೆ ವಿರುದ್ಧವಾಗಿದ್ದ ಮನುಸ್ಮೃತಿಯನ್ನು 1927, ಡಿ.25ರಂದು ಸುಟ್ಟುಹಾಕುವ ಮೂಲಕ ಬಿ.ಆರ್.ಅಂಬೇಡ್ಕರ್ ಐತಿಹಾಸಿಕ ಘಟನೆಗೆ ಕಾರಣರಾದರು.
ಜಾತಿ ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಶೂದ್ರರಿಗೆ ಅಕ್ಷರ ಜ್ಞಾನ ನಿಷಿದ್ಧದಂತಹ ಅನಿಷ್ಠ ಪದ್ಧತಿಗಳು ಶತಮಾನಗಳ ಕಾಲ ಆಚರಣೆಯಲ್ಲಿರಲು ಮನುಸ್ಮೃತಿ ಮೂಲ ಕಾರಣವಾಗಿತ್ತು ಎಂದರು.
ಬ್ರಿಟಿಷಯರ ದಾಸ್ಯದಿಂದ ಮುಕ್ತವಾದ ಭಾರತದಲ್ಲಿ ಸಮಾನತೆ, ಸಹೋದರತೆ, ಭ್ರಾತೃತ್ವ ನೆಲೆಸಬೇಕು ಎಂಬ ಆಶಯದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನೀಡಿದರು. ಆದರೆ, ಸಂವಿಧಾನ ಸಮರ್ಪಣೆಯಾದ ದಿನವೇ ಆರ್‌ಎಸ್‌ಎಸ್ ಮುಖವಾಣಿಯಾಗಿದ್ದ ಆರ್ಗನೈಸರ್ ಪತ್ರಿಕೆಯು ‘ಸಂವಿಧಾನದಲ್ಲಿ ಭಾರತೀಯತೆ ಇಲ್ಲ’ ಎಂಬ ನಿಲುವು ಪ್ರಕಟಿಸಿ ಸಂವಿಧಾನದ ಮೇಲೆ ಅಸಹನೆ ಹೊರಹಾಕಿತ್ತು. ಸಂವಿಧಾನ ರಚನೆಯಲ್ಲಿ ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಅದರ ಉದ್ದೇಶವಾಗಿತ್ತು ಎಂದು ಟೀಕಿಸಿದರು.
ದೇಶದಲ್ಲಿ ಸಂವಿಧಾನ ರಚನೆಯಾಗಿದ್ದರೂ ಪರಿಸ್ಥಿತಿ ಸಂಪೂರ್ಣ ಬದಲಾಗಿಲ್ಲ. ಆರ್.ಎಸ್.ಎಸ್ ಮತ್ತು ಅದರ ರಾಜಕೀಯ ಪಕ್ಷ ಬಿಜೆಪಿ ನಿರಂತರವಾಗಿ ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಅಸಹಿಷ್ಣುತೆ ಹೊರಹಾಕುತ್ತಲೇ ಬಂದಿದೆ. ಮನು ಪ್ರಣೀತ ಭಾರತದ ಪರವಾದ ಒಲವು ಹೊಂದಿರುವ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕೆರೆಹಳ್ಳಿ ಬಸವರಾಜು, ಮಹಿಳಾ ಸಂಯೋಜಕಿ ಎಂ.ಆರ್.ಪ್ರಭಾವತಿ, ಜನಶಕ್ತಿ ಸುರೇಶ್, ಮುಖಂಡರಾದ ಶಿವಕುಮಾರ್, ಸಿ.ರಂಗಸ್ವಾಮಿ, ನಂಜುಂಡಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ಶಾಂತರಾಜು, ಇದಾಯತ್ ಷರೀಫ್, ಸಿದ್ದರಾಜು, ಆಟೋ ಉಮೇಶ್ ಭಾಗವಹಿಸಿದ್ದರು.
ಬಹುಸಂಖ್ಯಾತರ ಹಕ್ಕು ಕಸಿದ ಮನುಸ್ಮೃತಿ: ದೇಶದ ಬಹುಸಂಖ್ಯಾತರ ಹಕ್ಕು ಹಾಗೂ ಅಧಿಕಾರಗಳನ್ನು ಕಿತ್ತುಕೊಂಡಿದ್ದ ಮನುಸ್ಮೃತಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಸಿ.ಎನ್.ರೇಣುಕಾದೇವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಮಹಿಳಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕ ಮಹಿಳೆಯರಿಗೆ ಸಮಾನತೆ ದೊರೆಯಿತು. ಅಲ್ಲಿಯವರೆಗೂ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು.
ಹಿಂದೆ ಮನುಸ್ಮೃತಿಯ ಆಧಾರದಲ್ಲಿ ರಚನೆಯಾಗಿದ್ದ ಪುರುಷ ಪ್ರಧಾನ ವ್ಯವಸ್ಥೆಯು ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಪರಿಣಾಮ ಮಹಿಳೆಯರು ಹಾಗೂ ತಳ ಸಮುದಾಯಗಳ ಹಕ್ಕು ಹಾಗೂ ಅಧಿಕಾರಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿತ್ತು ಎಂದರು.
ಈಚೆಗೆ ಕೆಲವರು ಸಂವಿಧಾನವನ್ನೇ ಬದಲಿಸುವ ಮಾತುಗಳನ್ನಾಡುತ್ತಿರುವುದು ಖಂಡನೀಯ. ಮನುಕುಲಕ್ಕೆ ಆಧಾರವಾಗಿರುವ ಸಂವಿಧಾನ ಎಂಬ ಶ್ರೇಷ್ಠ ಗ್ರಂಥವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗಶಿಲ್ಪ ಉಮೇಶ್ ಮಾತನಾಡಿ, ಅಂಬೇಡ್ಕರ್ ರಚಿತ ಸಂವಿಧಾನದ ಫಲವಾಗಿ ಪ್ರತಿ ಮಹಿಳೆಗೂ ಹಕ್ಕು ಅಧಿಕಾರ ದೊರೆತಿದೆ. ಪರಿಣಾಮ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಸಮಾನತೆ, ಸಬಲತೆಗೆ ಕಾರಣರಾಗಿರುವ ಅಂಬೇಡ್ಕರ್ ಸದಾಕಾಲ ಸ್ಮರಣೀಯರು ಎಂದರು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ.ದಾನೇಶ್ವರಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಉಮೇಶ್ ಕುದರ್, ರಮಾಬಾಯಿ ಪೌಂಡೇಶನ್ ಅಧ್ಯಕ್ಷೆ ಪುಷ್ಪಾ ಮರಿಸ್ವಾಮಿ, ನಗರಸಭಾ ಮಾಜಿ ಸದಸ್ಯರಾದ ಚಿನ್ನಮ್ಮ, ಕಲಾವತಿ ರವಿಕುಮಾರ್, ಸಮತಾ ಸೈನಿಕ ದಳದ ಉಪಾಧ್ಯ ಯಲಕ್ಕೂರು ಮಲ್ಲಿಕ್, ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷೆ ಭವಾನಿ ದೇವಿ, ಗೌರವಾಧ್ಯಕ್ಷೆ ಮಂಜುಳಮ್ಮ, ಯಶೋಧರಾ, ಶಾಂತಮ್ಮ ಇದ್ದರು.