ADVERTISEMENT

ತರಕಾರಿಗಳ ಬೆಲೆ ಏರಿಳಿತ: ಸೇಬು ದುಬಾರಿ

ಹೂವಿಗೆ ಕೊಂಚ ಬೇಡಿಕೆ ಹೆಚ್ಚಳ, ಸೇಬು ದುಬಾರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:36 IST
Last Updated 7 ಫೆಬ್ರುವರಿ 2022, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಈ ವಾರ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಹೂವಿಗೆ ಬೇಡಿಕೆ ಕೊಂಚ ಹೆಚ್ಚಾಗಿದೆ. ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಮಾಂಸ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ತರಕಾರಿಗಳ ಪೈಕಿ ಟೊಮೆಟೊ, ಬೀಟ್‌ರೂಟ್‌, ಹಸಿಮೆಣಸಿನಕಾಯಿ, ಗೆಡ್ಡೆಕೋಸು, ಅವರೆಕಾಯಿ, ತೊಗರಿಕಾಯಿಗಳ ಬೆಲೆ ಹೆಚ್ಚಾಗಿದೆ.

ಟೊಮೆಟೊ ಬೆಲೆ ಕೆಜಿಗೆ ₹5 ಹೆಚ್ಚಾಗಿ ₹15 ಆಗಿದೆ. ಕಳೆದವಾರ ₹20 ಕಡಿಮೆಯಾಗಿದ್ದ ಬೀಟ್‌ರೂಟ್‌ ಬೆಲೆ ಈ ವಾರ ಮತ್ತೆ ಅಷ್ಟೇ ಜಾಸ್ತಿಯಾಗಿ ₹60 ತಲುಪಿದೆ. ಹಸಿಮೆಣಸಿನಕಾಯಿ ₹20 ತುಟ್ಟಿಯಾಗಿದೆ. ಗೆಡ್ಡಕೋಸಿನ ಬೆಲೆ ₹10 ಜಾಸ್ತಿಯಾಗಿ ₹30 ಆಗಿದೆ. ಅವರೆಕಾಯಿ ಹಾಗೂ ತೊಗರಿಕಾಯಿಗಳ ಬೆಲೆ ತಲಾ ₹10 ಜಾಸ್ತಿಯಾಗಿದೆ.

ADVERTISEMENT

ಹಣ್ಣುಗಳ ಪೈಕಿ ಸೇಬು ಕೆಜಿಗೆ ₹20 ದುಬಾರಿಯಾಗಿದೆ. ಸದ್ಯ ಹಾಪ್‌ಕಾಮ್ಸ್‌ನಲ್ಲಿ ₹140 ಇದೆ. ಕಲ್ಲಂಗಡಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರಲು ಆರಂಭವಾಗಿದ್ದು, ಕೆಜಿಗೆ ₹20ರಂತೆ ಮಾರಾಟವಾಗುತ್ತಿದೆ.

ಮೂಸಂಬಿ, ಕಿತ್ತಳೆ (₹80), ದಾಳಿಂಬೆ (₹140), ಏಲಕ್ಕಿ ಬಾಳೆ (₹40), ಪಪ್ಪಾಯಿ (₹25), ಕಪ್ಪು ಸೀಡ್‌ಲೆಸ್‌ ದ್ರಾಕ್ಷಿ (₹160) ಸೇರಿದಂತೆ ಉಳಿದ ಹಣ್ಣುಗಳ ಧಾರಣೆ ಬದಲಾಗಿಲ್ಲ.

ಚಿಲ್ಲರೆ ಮಾಂಸ ಮಾರುಕಟ್ಟೆಯಲ್ಲಿ ಕೆಜಿ ಚಿಕನ್‌ಗೆ ₹160ರಿಂದ ₹180ರವರೆಗೆ ಬೆಲೆ ಇದೆ. ಹಲವು ತಿಂಗಳುಗಳಿಂದ ಮಟನ್‌ ಬೆಲೆ (₹560) ಸ್ಥಿರವಾಗಿದೆ.

’ವಾರದ ಆರಂಭದಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಹಸಿ ಮೆಣಸು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಬೀಟ್‌ರೂಟ್‌ ಆವಕ ಇಳಿಕೆಯಾಗಿದೆ. ಅವರೆಕಾಯಿ ಹಾಗೂ ತೊಗರಿಕಾಯಿಗಳಿಗೆ ಬೇಡಿಕೆ ಏರಿದೆ‘ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ತಿಳಿಸಿದರು.

ಹೂವಿನ ಬೆಲೆ ಸ್ವಲ್ಪ ಹೆಚ್ಚಳ

ಶಿವರಾತ್ರಿ ಹತ್ತಿರ ಬರುತ್ತಿದ್ದಂತೆಯೇ, ಹೂವುಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದ್ದು ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ನಗರಕ್ಕೆ ಸಮೀಪದ ಚೆನ್ನೀಪುರಮೋಳೆಯ ಬಿಡಿಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹400 ಇದೆ. ಕಾಕಡಕ್ಕೆ ₹100ರಿಂದ ₹120ರವರೆಗೆ ಇದೆ. ಕಳೆದ ವಾರ ₹60ರಿಂದ ₹80 ಇತ್ತು.

ಸೇವಂತಿಗೆ ಹೂವಿಗೂ ಬೇಡಿಕೆ ಹೆಚ್ಚಾಗಿದ್ದು, ಕೆಜಿಗೆ ₹150ರಿಂದ ₹160ರವರೆಗೆ ವ್ಯಾಪಾರಿಗಳು ಹೇಳುತ್ತಿದ್ದಾರೆ. ಸುಗಂಧರಾಜ ಹೂವಿಗೆ ₹80ರಿಂದ ₹100 ಇದೆ. ಚೆಂಡು ಹೂವಿನ ಬೆಲೆಯಲ್ಲಿ (₹20ರಿಂದ ₹30) ವ್ಯತ್ಯಾಸವಾಗಿಲ್ಲ.

’ಶಿವರಾತ್ರಿ ಹತ್ತಿರದಲ್ಲೇ ಇರುವುದರಿಂದ ಹೂವಿನ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಬೆಲೆ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ‘ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.