ಮಹದೇಶ್ವರ ಬೆಟ್ಟ: ಮಲೆ ಮಾದಪ್ಪನ ಸನ್ನಿಧಿಯಾಗಿರುವ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಜರುಗಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 93 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದವು.
ಬೆಳಿಗ್ಗೆ 9.20ರಿಂದ 10.10ರವರೆಗೆ ಶುಭ ತುಲಾ ಲಗ್ನದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾಂಗಲ್ಯ ಧಾರಣೆ ನೆರವೇರಿತು.
ಸುತ್ತೂರು ಮಠದ ಶ್ರೀಗಳು ವಧು–ವರರ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಆಶಿಸಿ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಾಹವಾದರೆ ಜೀವನದಲ್ಲಿ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿದೆ. ನವ ಜೋಡಿಗಳು ರಾಗ, ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಅನ್ಯೋನ್ಯತೆಯಿಂದ ಸುಖ–ಶಾಂತಿಯೊಂದಿಗೆ ಸಹಬಾಳ್ವೆ ಮಾಡಬೇಕು ಎಂದು ಹರಸಿದರು.
ಮಲೆ ಮಾದೇಶ್ವರರು ಉತ್ತರದ ನಾಡಿನಿಂದ ಕ್ಷೇತ್ರಕ್ಕೆ ಬಂದು ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತಿದ್ದ ಜನರ ಜೀವನವನ್ನು ಹಸನು ಮಾಡಿ ಬದುಕು ಕಟ್ಟಿಕೊಟ್ಟಿದ್ದಾರೆ. ಮಹದೇಶ್ವರರ ನಡೆದಾಡಿದ ಪುಣ್ಯಸ್ಥಳದಲ್ಲಿ ವಿವಾಹವಾಗಿರುವುದು ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದು ಎಂದು ಭಾವಿಸಬೇಕು ಎಂದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿದ್ದು ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ನಡೆಯುತ್ತಿರುವುದರಿಂದ ಈ ಭಾಗದಲ್ಲಿರುವ ಆರ್ಥಿಕವಾಗಿ ಅಶಕ್ತರಿಗೆ, ಹಿಂದುಳಿದವರಿಗೆ ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟವರು ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ವಿವಾಹ ಪವಿತ್ರ ಬಂಧವಾಗಿದ್ದು, ದಂಪತಿಗಳು ಉತ್ತಮವಾಗಿ ಬದುಕಬೇಕು, ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಬೆನ್ನುಮಾಡದೆ ಎದುರಿಸಿ ಜಯಿಸಬೇಕು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆರ್ಥಿಕ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಸರಳವಾಗಿ ವಿವಾಹ ಮಾಡಿಕೊಂಡರೆ ಜೀವನ ಸುಖಮಯವಾಗಿರರಲಿದೆ ಎಂದರು.
1989 ರಿಂದ ಇಲ್ಲಿಯವರೆಗೂ ಕ್ಷೇತ್ರದಲ್ಲಿ 2024 ಜೋಡಿಗಳು ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರದ ವತಿಯಿಂದ ಅಭಿವೃದ್ದಿ ಕೆಲಸಗಳು ಭರದಿಂದ ಸಾಗಿವೆ. ಜಾತ್ರೆ, ಉತ್ಸವ, ಅಮಾವಾಸ್ಯೆ ಪೂಜೆಯ ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು.
ಮೆಟ್ಟೂರು ಶಾಸಕ ಸದಾಶಿವಂ ಮಾತನಾಡಿ, ಕರ್ನಾಟಕ ಮಾದರಿಯಲ್ಲಿ ತಮಿಳುನಾಡಿನಲ್ಲೂ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ಸರ್ಕಾರದ ಮುಂದೆ ಪ್ರಸ್ತಾವ ಇರಿಸಲಾಗುವುದು. ಕ್ಷೇತ್ರದಲ್ಲಿ ವಿವಾಹವಾಗುವ ಜೋಡಿಗಳಿಗೆ ತಲಾ ₹ 5 ಸಾವಿರ ಹಾಗೂ ತವರು ಮನೆಯ ಉಡುಗುರೆಯಾಗಿ ಪಾತ್ರೆ, ಧವಸ–ಧಾನ್ಯ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಎಸ್‌ಪಿ ಬಿ.ಟಿ.ಕವಿತಾ, ಸಿಇಒ ಮೋನಾ ರೋತ್, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ, ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಅಶೋಕ್, ಡಿವೈಎಸ್‌ಪಿ ಧರ್ಮೇಂದ್ರ, ತಹಶೀಲ್ದಾರ್ ಚೈತ್ರಾ, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಗಂಗನ ತಿಮ್ಮಯ್ಯ, ಭಾಗ್ಯಮ್ಮ, ಬಿ. ಮಹದೇವಪ್ಪ, ಮರಿಸ್ವಾಮಿ, ಆರ್.ಎಸ್. ಕುಮಾರವಿಜಯ, ಮುಖ್ಯ ಅರ್ಚಕರಾದ ಕೆ.ವಿ. ಮಾದೇಶ್ ಇದ್ದರು.
ತಾಳಿ ಕಾಲುಂಗುರ ಉಡುಗೊರೆ:
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂತರ್‌ಜಾತಿಯ 16 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟವು. ಅಂತರ ರಾಜ್ಯದ ನಾಲ್ಕು ಜೋಡಿಗಳು ಹಸೆಮಣೆ ಏರಿದವು. ಅಂಗವೈಕಲ್ಯತೆ ಹೊಂದಿದ ಜೋಡಿಯೊಂದು ಮದುವೆಯಾಯಿತು. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಮಧುವಿಗೆ 4 ಗ್ರಾಂ ಚಿನ್ನದ ತಾಳಿ ಬೆಳ್ಳಿ ಕಾಲುಂಗುರ ಸೀರೆ ರವಿಕೆ ವರನಿಗೆ ಪಂಚೆ ಶರ್ಟ್ ಟವಲ್ ಪೇಟ ನೀಡಲಾಯಿತು.
ಹಾಡಿಗಳಿಗೆ ಸೌಲಭ್ಯ: ಶಾಸಕ
ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹಾಡಿಗಳಿಗೆ ಮೂಲಸೌಲಭ್ಯ ಒದಗಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಉಳಿದ ಹಾಡಿಗಳಿಗೂ ವಿದ್ಯುತ್ ಸಂಪರ್ಕ ದೊರೆಯಲಿದೆ. ₹ 20 ಕೋಟಿ ಅನುದಾನಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುವುದು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿರುವುದು ಸಂತಸ ತಂದಿದೆ ಎಂದು ಶಾಸಕ ಮಂಜುನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.