ADVERTISEMENT

ಮಹಿಳಾ ಸಬಲೀಕರಣಕ್ಕೆ ಮತ್ಸ್ಯಸಂಜೀವಿನಿ ಪೂರಕ

ಹೆಬ್ಬಸೂರು, ಅಯ್ಯನಪುರ ಗ್ರಾಮದಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:10 IST
Last Updated 10 ಡಿಸೆಂಬರ್ 2025, 3:10 IST
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮೀನುಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯ ಸಂಜೀವಿನಿ ಯೋಜನೆಗೆ ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಚಾಲನೆ ನೀಡಿದರು
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮೀನುಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯ ಸಂಜೀವಿನಿ ಯೋಜನೆಗೆ ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಚಾಲನೆ ನೀಡಿದರು   

ಚಾಮರಾಜನಗರ: ಗ್ರಾಮೀಣ ಪ್ರದೇಶದ ಮಹಿಳಾ ಒಕ್ಕೂಟಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಮತ್ಸ್ಯ ಸಂಜೀವಿನಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲೀಕರಣ  ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.

ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮೀನುಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯ ಸಂಜೀವಿನಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಕುಟುಂಬ ನಿರ್ವಹಣೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೀನು ಕೃಷಿ ಉಪಕಸುಬಾಗಿದ್ದು, ಅಗ್ಗದ ದರದಲ್ಲಿ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತಿದ್ದು, ಈಗಾಗಲೇ ಗುರುತಿಸಿರುವ ಕೆರೆಗಳಲ್ಲಿ ವ್ಯವಸ್ಥಿತವಾಗಿ ಮೀನು ಕೃಷಿ ಮತ್ತು ಮಾರಾಟ ಚಟುವಟಿಕೆಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದರು.

ADVERTISEMENT

ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನ‌ಗೊಳಿಸಿದೆ. ಇದರ ಜೊತೆಗೆ ಮತ್ಸ್ಯ ಸಂಜೀವಿನಿ ಯೋಜನೆಯನ್ನೂ ಜಾರಿಗೊಳಿಸುವ ಮೂಲಕ ಮಹಿಳಾ ಒಕ್ಕೂಟಗಳನ್ನು ಸದೃಢಗೊಳಿಸಲು ಮುಂದಾಗಿದೆ. ಮೀನು ಸಾಕಾಣಿಕೆಯಿಂದ ಅಧಿಕ ಲಾಭ ಪಡೆಯಬಹುದು. ಮಹಿಳಾ ಸ್ವ-ಸಹಾಯ ಗುಂಪುಗಳು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಯ್ಯನಪುರ ಗ್ರಾಮದಲ್ಲೂ ಮತ್ಸ್ಯ ಸಂಜೀವಿನಿ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಚಾಲನೆ ನೀಡಿದರು. ಗ್ರಾಮದ ಅಯ್ಯನ ಕಟ್ಟೆ ಕೆರೆಗೆ ಮೀನು ಮರಿಗಳನ್ನು ಬೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲೆಯಲ್ಲಿ ಒಟ್ಟು 160 ಮಂದಿ ಮಹಿಳಾ ಸದಸ್ಯರನ್ನೊಳಗೊಂಡ 26 ಸ್ವ-ಸಹಾಯ ಗುಂಪುಗಳು ಮತ್ತು 26 ಕೆರೆಗಳನ್ನು ಮತ್ಸ್ಯ ಸಂಜೀವಿನಿ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು 2 ಲಕ್ಷ ಮೀನು ಮರಿಗಳನ್ನು ಬಿಟ್ಟು ಸಾಕವು ಗುರಿ ಹೊಂದಲಾಗಿದೆ ಎಂದರು.

ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅನುಷ್ಠಾನನಗೊಳಿಸಲಾಗುತ್ತಿರುವ ಜಲ ಜೀವನ್ ಮಿಷನ್ ಯೋಜನೆಯ ನಳ ಸಂಪರ್ಕ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

ಮೀನುಗಾರಿಕೆ ಉಪನಿರ್ದೇಶಕರಾದ ಮಂಜೇಶ್, ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಜಿತಾ, ಗ್ರಾಮ ಪಂಚಾಯತಿ ಅಧ್ಯ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ಇತರರು ಇದ್ದರು.

ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯ ಸಂಜೀವಿನಿ ಯೋಜನೆಗೆ ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಚಾಲನೆ ನೀಡಿದರು

ಶಾಲೆಗಳಿಗೆ ಭೇಟಿ: ಬಿಸಿಯೂಟ ಗುಣಮಟ್ಟ ಪರೀಕ್ಷೆ ಅಯ್ಯನಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಿಇಒ ಮೋನಾ ರೋತ್ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶಾಲೆಯ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ನಂತರ ದಡದಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರದಾಸೋಹ ಕೊಠಡಿಗೆ ಭೇಟಿನೀಡಿ ಮಕ್ಕಳಿಗೆ ತಯಾರಿಸಲಾಗಿದ್ದ ಬಿಸಿಯೂಟದ ಗುಣಮಟ್ಟ ಪರೀಕ್ಷಿಸಿದರು. ಮಕ್ಕಳ ಜೊತೆಯೇ ಬಿಸಿಯೂಟ ಸೇವನೆ ಮಾಡಿದರು. ನಂತರ ಅಂಗನವಾಡಿ ಕೂಸಿನ ಮನೆಗೆ ಭೇಟಿನೀಡಿ ಮಕ್ಕಳಿಗೆ ವಿತರಿಸುವ ಆಹಾರದ ಗುಣಮಟ್ಟ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.