ADVERTISEMENT

ಚಾಮರಾಜನಗರ: ಕ್ಯಾನ್ಸರ್‌ ಚಿಕಿತ್ಸಾ ವಿಭಾಗಕ್ಕೆ ಬೇಡಿಕೆ

ವೈದ್ಯಕೀಯ ಕಾಲೇಜಿನಲ್ಲಿ ಹೊಸ ಕೋರ್ಸ್‌ಗಳಿಗೆ ಅನುಮತಿ, ಸೂಪರ್‌ ಸ್ಪೆಷಾಲಿಟಿ ಸೇವೆಗೂ ಲಭ್ಯ

ಸೂರ್ಯನಾರಾಯಣ ವಿ
Published 20 ಜನವರಿ 2021, 16:38 IST
Last Updated 20 ಜನವರಿ 2021, 16:38 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ಚಾಮರಾಜನಗರ: ಸರ್ಕಾರಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಕ್ಯಾನ್ಸರ್‌ ಚಿಕಿತ್ಸೆಯಾಗಿ ಪ್ರತ್ಯೇಕ ವಿಭಾಗ ಆರಂಭಿಸಲು ಆಡಳಿತ ಮಂಡಳಿ ಪ್ರಯತ್ನ ಆರಂಭಿಸಿದೆ.

ಕ್ಯಾನ್ಸರ್‌ ಚಿಕಿತ್ಸಾ ಘಟಕಕ್ಕೆ ಅನುಮತಿ ನೀಡಬೇಕು ಎಂದು ಅದು ಸರ್ಕಾರಕ್ಕೆ ಮನವಿ ಮಾಡಿದೆ. ಕಾಲೇಜಿನ ಡೀನ್‌ ಡಾ.ಸಂಜೀವ್‌ ಅವರು ಇದನ್ನು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

‘ಸದ್ಯ ನಮ್ಮಲ್ಲಿ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುವ ಸೌಲಭ್ಯ ಇಲ್ಲ. ಜಿಲ್ಲೆಯ ಜನರು ಚಿಕಿತ್ಸೆಗಾಗಿ ಮೈಸೂರು ಅಥವಾ ಬೇರೆ ಕಡೆಗಳಿಗೆ ಹೋಗುತ್ತಿದ್ದಾರೆ. ಸರ್ಕಾರ, ಇತ್ತೀಚೆಗೆ ಮಂಡ್ಯ ವೈದ್ಯಕೀಯ ಕಾಲೇಜಿಗೆ ವಿಭಾಗ ತೆರೆಯಲು ಅವಕಾಶ ನೀಡಿದ್ದು, ಅದೇ ರೀತಿಯಲ್ಲಿ ನಮ್ಮಲ್ಲೂ ಆರಂಭಿಸಲು ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ಡಾ.ಸಂಜೀವ್‌ ಅವರು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಈಗ ವರ್ಷಕ್ಕೆ 350ರಿಂದ 400 ಜನರಲ್ಲಿ ಕ್ಯಾನ್ಸರ್‌ ರೋಗ ಕಂಡು ಬರುತ್ತಿದೆ. ಅಂದರೆ ಪ್ರತಿ ದಿನ ಸರಾಸರಿ ಒಬ್ಬರಲ್ಲಿ ರೋಗ ಪತ್ತೆಯಾಗುತ್ತಿದೆ. ನಮ್ಮಲ್ಲೇ ಚಿಕಿತ್ಸೆಗೆ ಅವಕಾಶ ಇದ್ದರೆ, ಜನರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ಸೂಪರ್‌ ಸ್ಪೆಷಾಲಿಟಿ ಸೇವೆ ಆರಂಭ: ಈ ಮಧ್ಯೆ, ಜಿಲ್ಲಾಸ್ಪತ್ರೆಯಲ್ಲಿ ವಿವಿಧ ರೋಗಗಳ ಸೂಪರ್‌ ಸ್ಪೆಷಾಲಿಟಿ ಸೇವೆ ಆರಂಭಗೊಂಡಿದೆ. ಯೂರಾಲಜಿ, ಹೃದ್ರೋಗ, ಮುಖ ಮತ್ತು ದವಡೆ ಚಿಕಿತ್ಸೆಗಾಗಿ ವಾರದಲ್ಲಿ ಮೂರು ದಿನ ಮೈಸೂರಿನಿಂದ ತಜ್ಞ ವೈದ್ಯರು ನಗರಕ್ಕೆ ಬರುತ್ತಿದ್ದಾರೆ.

‘ವೈದ್ಯರು ಮೂರು ದಿನ ಮೈಸೂರಿನಲ್ಲಿ ಚಿಕಿತ್ಸೆ ನೀಡಿದರೆ, ಉಳಿದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಲಭ್ಯವಿರುತ್ತಾರೆ. ದಿನ ಬಿಟ್ಟು ದಿನ ಬರುತ್ತಿದ್ದಾರೆ. ಇದರಿಂದಾಗಿ ಜನರ ಗಂಭೀರ ಸಮಸ್ಯೆಗೂ ಇಲ್ಲಿಯೇ ಚಿಕಿತ್ಸೆ ಸಿಗುವಂತಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಂಜೀವ್‌ ಅವರು ವಿವರಿಸಿದರು.

ವೈದ್ಯಕೀಯ ಪಿಜಿ ಕೋರ್ಸ್‌ಗಳಿಗೆ ಅನುಮತಿ

ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಈ ವರ್ಷದಿಂದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲು ಭಾರತೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದೆ.

‘ಸರ್ಕಾರವೇ ಸೀಟು ಹಂಚಿಕೆ ಮಾಡಲಿದೆ. ನಮ್ಮಲ್ಲಿ ಎಷ್ಟು ಸೀಟುಗಳು ಲಭ್ಯವಾಗಬಹುದು ಎಂಬುದು ಇನ್ನೂ ನಿಗದಿಯಾಗಿಲ್ಲ. ಹಂಚಿಕೆ ಮಾಡಿದ ನಂತರವೇ ತಿಳಿಯಲಿದೆ. ಕೋರ್ಸ್‌ ಆರಂಭಿಸಲು ಬೇಕಾದ ಸೌಕರ್ಯಗಳು ನಮ್ಮಲ್ಲಿವೆ’ ಎಂದು ಸಂಜೀವ್‌ ಅವರು ಮಾಹಿತಿ ನೀಡಿದರು.

ಬಿಎಸ್‌ಸಿ ನರ್ಸಿಂಗ್‌: ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್‌ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. 100 ಸೀಟುಗಳು ಲಭ್ಯವಿವೆ. ಇದರ ಜೊತೆಗೆ, ಆರೋಗ್ಯ ವಿಜ್ಞಾನಗಳಿಗೆ ಪೂರಕವಾದ (ಅಲ್ಲೀಡ್‌ ಹೆಲ್ತ್‌ ಸೈನ್ಸಸ್‌) ಮೂರು ಕೋರ್ಸ್‌ಗಳಿಗೂ ಅನುಮತಿ ಸಿಕ್ಕಿದ್ದು, ಅದು ಕೂಡ ಆರಂಭವಾಗಲಿದೆ.

‘ಒಟಿ (ಆಪರೇಷನ್‌ ಥಿಯೇಟರ್‌) ತಂತ್ರಜ್ಞಾನ, ಇಮೇಜಿಂಗ್‌ ತಂತ್ರಜ್ಞಾನ ಹಾಗೂ ಮೆಡಿಸಿನ್‌ ಲ್ಯಾಬ್‌ ಕೋರ್ಸ್‌ಗಳಿಗೆ ತಲಾ 20 ಸೀಟುಗಳನ್ನು ನಿಗದಿ ಪಡಿಸಲಾಗಿದೆ’ ಎಂದು ಡಾ.ಸಂಜೀವ್‌ ಅವರು ಹೇಳಿದರು.

‘ಬಿಎಸ್‌ಸಿ ನರ್ಸಿಂಗ್‌ಗೆ ಕೂಡ ನಮ್ಮ ವೈದ್ಯರೇ ಬೋಧನೆ ಮಾಡಲಿದ್ದಾರೆ. ಮೊದಲ ವರ್ಷಕ್ಕೆ ಸರ್ಕಾರದಿಂದ ಏನೂ ಮೂಲಸೌಕರ್ಯ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಕೊರತೆ ನೀಗಿಸಲು ಜೆಎಸ್‌ಎಸ್‌ ಜೊತೆ ಜೊತೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.