ADVERTISEMENT

ಸಿಮ್ಸ್‌ಗೆ 45 ಹೆಚ್ಚುವರಿ ಪಿಜಿ ಸೀಟು ಮಂಜೂರು: ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿ

ಬಾಲಚಂದ್ರ ಎಚ್.
Published 26 ಅಕ್ಟೋಬರ್ 2025, 2:35 IST
Last Updated 26 ಅಕ್ಟೋಬರ್ 2025, 2:35 IST
ಚಾಮರಾಜನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆಸ್ಪತ್ರೆ
ಚಾಮರಾಜನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆಸ್ಪತ್ರೆ   

ಚಾಮರಾಜನಗರ: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಸಿಮ್ಸ್‌) ಹೆಚ್ಚುವರಿಯಾಗಿ 45 ಸ್ನಾತಕೋತ್ತರ ಸೀಟುಗಳನ್ನು ಮಂಜೂರು ಮಾಡಿದೆ. ಈ ಮೂಲಕ ಎಂಬಿಬಿಎಸ್‌ ನಂತರ ಉನ್ನತ ಶಿಕ್ಷಣ ಪಡೆಯಬೇಕು ಎಂಬ ವಿದ್ಯಾರ್ಥಿಗಳಿಗೆ ಕನಸಿಗೆ ನೀರೆರದಂತಾಗಿದೆ. 

ಸಿಮ್ಸ್‌ನಲ್ಲಿ ಇದುವರೆಗೂ 37 ಸ್ನಾತಕೋತ್ತರ ಸೀಟುಗಳು ಮಾತ್ರ ಲಭ್ಯವಿದ್ದವು. ಇದೀಗ ಎನ್‌ಎಂಸಿ ಹೆಚ್ಚುವರಿ ಸೀಟುಗಳ ಭರ್ತಿಗೆ ಅನುಮತಿ ನೀಡಿರುವುದರಿಂದ ಸ್ನಾತಕೋತ್ತರ ಸೀಟುಗಳ ಪ್ರಮಾಣ 82ಕ್ಕೆ ಏರಿಕೆಯಾದಂತಾಗಿದೆ.

ಹೆಚ್ಚುವರಿ ಸೀಟುಗಳ ವಿವರ:

ADVERTISEMENT

ಇಎನ್‌ಟಿ ಎಂಎಸ್‌ 1, ಎಂಡಿ ಪೆಥಾಲಜಿ 4, ಎಂಡಿ ಅನಸ್ತೇಷಿಯಾಲಜಿ 4, ಎಂಡಿ ಕಮ್ಯುನಿಟಿ ಮೆಡಿಸಿನ್ 4, ಎಂಎಸ್‌ ಜನರಲ್‌ ಸರ್ಜರಿ 4, ಎಂಎಸ್ ಆರ್ಥೋಪೆಡಿಕ್‌ 4, ಎಂಡಿ ಪಿಡಿಯಾಟ್ರಿಕ್ಸ್‌ 4, ಎಂಡಿ ಎಮರ್ಜೆನ್ಸಿ ಮೆಡಿಸನ್‌ 4, ಎಂಡಿ ಫೊರೆನ್ಸಿಕ್ ಮೆಡಿಸನ್‌ 4, ಎಂಡಿ/ಎಂಎಸ್‌ ಅನಾಟಮಿ 4, ಎಂಡಿ ಸೈಕಾಲಜಿ ವಿಭಾಗಕ್ಕೆ ನಾಲ್ಕು ಹೆಚ್ಚುವರಿ ಪಿಜಿ ಸೀಟುಗಳು ಸಿಕ್ಕಿವೆ.

ಎಂಡಿ ಪಿಡಿಯಾಟ್ರಿಕ್ಸ್‌, ಎಂಡಿ ಎಮರ್ಜೆನ್ಸಿ ಮೆಡಿಸನ್‌, ಎಂಡಿ ಫೊರೆನ್ಸಿಕ್‌ ಮೆಡಿಸನ್‌, ಎಂಡಿ/ಎಂಎಸ್‌ ಅನಾಟಮಿ, ಎಂಡಿ ಸೈಕಾಲಜಿ, ಎಂಡಿ ಫಾರ್ಮಕಾಲಜಿಯಲ್ಲಿ ಪಿಜಿ ಪದವಿ ಪಡೆಯಲು ಸಿಮ್ಸ್‌ನಲ್ಲಿ ಇದುವರೆಗೂ ಅವಕಾಶ ಇರಲಿಲ್ಲ. ಹೆಚ್ಚುವರಿ ಸೀಟುಗಳ ಮಂಜೂರಾತಿಯಿಂದ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೆ ಅನುಕೂಲವಾದಂತಾಗಿದೆ.

ರಾಜ್ಯದಲ್ಲೇ ಮೊದಲು:

ರಾಜ್ಯದಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಗಳ ಪೈಕಿ ಎಮರ್ಜೆನ್ಸಿ ಮೆಡಿಸನ್‌ಗೆ ಪ್ರತ್ಯೇಕ ವಿಭಾಗ ಇರುವುದು ಚಾಮರಾಜನಗರದ ಸಿಮ್ಸ್‌ನಲ್ಲಿ ಮಾತ್ರ. ಎಮರ್ಜೆನ್ಸಿ ಮೆಡಿಸನ್ ವಿಷಯದಲ್ಲಿ ಎಂಡಿ ಮಾಡಲು ಅವಕಾಶ ಇರುವುದು ಕೂಡ ಸಿಮ್ಸ್‌ನಲ್ಲಿ ಮಾತ್ರ ಎಂಬುದು ವಿಶೇಷ.

ಸಿಮ್ಸ್‌ ಎಮೆರ್ಜಿನಿ ವಿಭಾಗ 40 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು ಇದರಲ್ಲಿ 12 ಬೆಡ್‌ಗಳ ಐಸಿಯು ವಿಭಾಗ, 6 ಬೆಡ್‌ಗಳ ವೆಂಟಿಲೇಟರ್‌ ವಿಭಾಗ ಇದೆ. ರೋಗಿಗಳ ಆರೋಗ್ಯ ಸ್ಥಿತಿ ಆಧರಿಸಿ ಕೆಂಪು, ಹಳದಿ ಹಾಗೂ ಹಸಿರು ವಲಯಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಒಂದು ಮೇಜರ್ ಟ್ರಾಮಾ ಒಟಿ (ಶಸ್ತ್ರಚಿಕಿತ್ಸಾ ಕೊಠಡಿ), ಎರಡು ಮೈನರ್ ಒಟಿ ಇವೆ. 

ಎಮರ್ಜೆನ್ಸಿ ಮೆಡಿಸನ್‌ನಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ದೊರೆತಿರುವುದರಿಂದ ಸಿಮ್ಸ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಇಲ್ಲಿಯೇ ವೈದ್ಯರಾಗಿ ಸೇವೆ ಸಲ್ಲಿಸಬಹುದು. ಇದರಿಂದ ಜಿಲ್ಲೆಯ ರೋಗಿಗಳಿಗೆ ತುರ್ತು ವೈದ್ಯಕೀಯ ಸೌಲಭ್ಯ ದೊರೆಯಲಿದೆ, ಹಾವು ಕಡಿತ, ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಸಹಾಯವಾಗಲಿದೆ. ವೈದ್ಯರ ಮೇಲಿನ ಕಾರ್ಯಭಾರ ತಗ್ಗಲಿದೆ.

ಜಿಲ್ಲೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದ್ದು ಇಲ್ಲಿನ ಬಹುಪಾಲು ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಬೆಂಗಳೂರು ಸೇರಿದಂತೆ ನೆರೆ ಜಿಲ್ಲೆಗಳ ಮೇಲೆ ಅವಲಂಬಿತವಾಗಿದ್ದಾರೆ. ಜಿಲ್ಲೆಯ ಆರೋಗ್ಯ ಕ್ಷೇತ್ರ ಬಲಗೊಂಡರೆ ಇಲ್ಲಿಯೇ ತುರ್ತು ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ ಎನ್ನುತ್ತಾರೆ ಸಿಮ್ಸ್ ಡೀನ್‌ ಡಾ.ಎಚ್‌.ಜಿ.ಮಂಜುನಾಥ್‌.

ಹೆಚ್ಚುವರಿ ಎಂಬಿಬಿಎಸ್‌ ಸೀಟು ಇಲ್ಲ:

ಹೆಚ್ಚುವರಿಯಾಗಿ ಎಂಬಿಬಿಎಸ್‌ ಸೀಟುಗಳ ಮಂಜೂರಾತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತಾದರೂ ಎನ್‌ಎಂಸಿ ಅನುಮೋದನೆ ನೀಡಿಲ್ಲ. ಸದ್ಯ ಸಿಮ್ಸ್‌ನಲ್ಲಿ 150 ಎಂಬಿಬಿಎಸ್‌ ಸೀಟುಗಳು ಲಭ್ಯವಿದೆ. 

ಪ್ರಸ್ತಾವಕ್ಕೆ ಮನ್ನಣೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೆಚ್ಚುವರಿಯಾಗಿ ಪಿಜಿ ಹಾಗೂ ಎಂಬಿಬಿಎಸ್‌ ಸೀಟುಗಳನ್ನು ಮಂಜೂರು ಮಾಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಂತೆ 45 ಹೆಚ್ಚುವರಿ ಪಿಜಿ ಸೀಟುಗಳು ಸಿಮ್ಸ್‌ಗೆ ಮಂಜೂರಾಗಿದ್ದು ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಕಲಿಕೆಗೆ ಅನುಕೂಲವಾಗಲಿದೆ. 
ಡಾ.ಎಚ್‌.ಜಿ.ಮಂಜುನಾಥ್‌ ಸಿಮ್ಸ್‌ ಡೀನ್‌

‘ಬಡ ರೋಗಿಗಳ ಆಶಾಕಿರಣ’

ಅತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸಿಮ್ಸ್‌ ಆಸ್ಪತ್ರೆ ಬಡ ರೋಗಿಗಳಿಗೆ ಅನುಕೂಲವಾಗಿದೆ. ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 450 ಬೆಡ್‌ಗಳ ಸಾಮರ್ಥ ಹೊಂದಿರುವ ಸಿಮ್ಸ್‌ನಲ್ಲಿ ತುರ್ತು ಚಿಕಿತ್ಸಾ ವಿಭಾಗ ಅನಾಟಮಿ ಪೆಥಾಲಜಿ ಮೈಕ್ರೋ ಬಯಾಲಜಿ ಕಮ್ಯುನಿಟಿ ಮೆಡಿಸನ್‌ ಇಎನ್‌ಟಿ ಆಪ್ತಮಾಲಜಿ ಜನರಲ್ ಮೆಡಿಸನ್‌ ಜನರಲ್ ಸರ್ಜರಿ ಆರ್ಥೊಪೆಡಿಕ್ಸ್‌ ರೇಡಿಯಾಲಜಿ ಸೈಕಿಯಾಟ್ರಿ ಡರ್ಮಟಾಲಜಿ ದಂತ ಅನಸ್ತೇಶಿಯಾ ಸೇರಿದಂತೆ 21 ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ವೈದ್ಯರು ಶುಶ್ರೂಷಕರು ಸಿಬ್ಬಂದಿ ಸೇರಿ 1000ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಸಿಮ್ಸ್‌ ವ್ಯಾಪ್ತಿಗೆ ‌ಚಾಮರಾಜನಗರದಲ್ಲಿರುವ 300 ಬೆಡ್‌ಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯೂ ಒಳಪಟ್ಟಿದ್ದು ಮಹಿಳೆಯರ ಮಕ್ಕಳ ವಿಭಾಗ ಹಾಗೂ ಹೆರಿಗೆ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.