ಚಾಮರಾಜನಗರ: ಮನುಷ್ಯನ ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಆರೋಗ್ಯವಾಗಿರಲು, ದಿನನಿತ್ಯದ ಕೆಲಸಗಳನ್ನು ಉತ್ಸಾಹದಿಂದ ಮಾಡಲು ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು. ಮಾನಸಿಕ ಆರೋಫಗ್ಯ ಹದಗೆಟ್ಟರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಬೇಕು, ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಿತ ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಪ್ರತಿನಿತ್ಯ 8 ಗಂಟೆ ನಿದ್ರಿಸಬೇಕು, ಒತ್ತಡದ ಪರಿಸ್ಥಿತಿ ಎದುರಾದರೂ ಮಾನಸಿಕ ಸ್ಥಿರತೆ ಕಳೆದುಕೊಳ್ಳದೆ ಸವಾಲುಗಳನ್ನು ಎದುರಿಸಬೇಕು, ಕಲೆ, ಕ್ರೀಡೆ ಮನರಂಜನೆ, ಯೋಗ, ವ್ಯಾಯಮದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಆಪ್ತರೊಂದಿಗೆ ಸಮಾಲೋಚಿಸಿ ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಈಶ್ವರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ ಮಾತನಾಡಿ ಮನಸ್ಸಿನ ಭಾವನೆಗಳನ್ನು ಸ್ಥೀಮಿತದಲ್ಲಿಟ್ಟುಕೊಳ್ಳಬೇಕು. ಉತ್ತಮ ಆಹಾರ ಸೇವನೆ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಾನಸಿಕ ಖಿನ್ನತೆಗೆ ಒಳಗಾದಾಗ ಕುಟುಂಬದವರು, ಆಪ್ತರೊಂದಿಗೆ ಚರ್ಚಿಸಿ ಮಾನಸಿಕ ಒತ್ತಡ ನಿವಾರಿಸಿಕೊಳ್ಳಬೇಕು, ಮಾನಸಿಕ ಆರೋಗ್ಯಕ್ಕಾಗಿ ಮನೋಚೈತನ್ಯ ಕ್ಲಿನಿಕ್ ಸಂಪರ್ಕಿಸಿ ಔಷಧ ಹಾಗೂ ಉಚಿತವಾಗಿ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಯಿತು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞೆ ಡಾ.ಕೆ.ವಿ ಮೇರಿ ಅಂಜಲಾ, ಸಿಮ್ಸ್ ಆಸ್ಪತ್ರೆ ಮನೋರೋಗ ತಜ್ಞ ಡಾ.ಜೆ.ಎನ್.ರಘು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ, ಆರೋಗ್ಯ ನಿರೀಕ್ಷಣಾಧಿಕಾರಿ ಗಿರಿಜಾ ಶಂಕರ್, ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲೆ ಕಮಲಾ, ಬೋಧಕರಾದ ಸೌಮ್ಯಾ, ಗಗನ್, ಸುಪ್ರೀತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.