ADVERTISEMENT

ಕಾವೇರಿ ಕೃಪೆ: ದಾಖಲೆ ಬರೆದ ಮೆಟ್ಟೂರು ಜಲಾಶಯ

ಸತತ 20 ದಿನಗಳಿಂದ ನೀರು ಹೊರಬಿಡಲಾಗುತ್ತಿದೆ, ಹೆಚ್ಚಿದ ಅಂತರ್ಜಲ, ರೈತರಲ್ಲಿ ಸಂತಸ

ಜಿ.ಪ್ರದೀಪ್ ಕುಮಾರ್
Published 3 ಡಿಸೆಂಬರ್ 2019, 11:00 IST
Last Updated 3 ಡಿಸೆಂಬರ್ 2019, 11:00 IST
ಭರ್ತಿಯಾಗಿರುವ ಮೆಟ್ಟೂರು ಜಲಾಶಯದ ನೋಟ
ಭರ್ತಿಯಾಗಿರುವ ಮೆಟ್ಟೂರು ಜಲಾಶಯದ ನೋಟ   

ಮಹದೇಶ್ವರಬೆಟ್ಟ (ಚಾಮರಾಜನಗರ ಜಿಲ್ಲೆ): ತಮಿಳುನಾಡಿನ ಮೆಟ್ಟೂರು ಜಲಾಶಯದಿಂದಸತತ 20 ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ. ಇದುಹೊಸ ದಾಖಲೆ ಎನಿಸಿದೆ.

ಇದಕ್ಕೂ ಮೊದಲು, 21 ವರ್ಷಗಳ ಹಿಂದೆ 1998ರ ನವೆಂಬರ್‌ನಲ್ಲಿ ಜಲಾಶಯವು ಸತತ ಎಂಟು ದಿನಗಳ ಕಾಲ ಭರ್ತಿಯಾಗಿತ್ತು. ಕರ್ನಾಟಕದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹರಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಈ ಅಣೆಕಟ್ಟು, 93.47 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:ಮೆಟ್ಟೂರು ಜಲಾಶಯ ಭರ್ತಿ

ADVERTISEMENT

ಸದ್ಯ ಜಲಾಶಯದಿಂದ 7,400 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಷ್ಟೇ ಒಳಹರಿವು ಇದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನ ಸೇಲಂ ಸೇರಿದಂತೆ ಸುತ್ತಮುತ್ತಲಿನ 12 ಜಿಲ್ಲೆಗಳ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಮೆಟ್ಟೂರು ಜಲಾಶಯ ಏಕೈಕ ಜಲಮೂಲವಾಗಿದೆ. ಇದರಿಂದಾಗಿ 16.4 ಲಕ್ಷ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗುತ್ತಿದೆ.

ಹೆಚ್ಚಿದ ಅಂತರ್ಜಲ:ಜಲಾಶಯದಿಂದ ಎರಡು ಮೂರು ತಿಂಗಳಿಂದ ಉತ್ತಮ ನೀರಿನ ಸಂಗ್ರಹ ಇರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಳ್ಳಲು ಆರಂಭವಾಗಿದೆ.

‘ನೀರಿಲ್ಲದೇ, ವಾರ್ಷಿಕವಾಗಿ ಎರಡು ಬೆಳೆ ತೆಗೆಯುವುದೇ ಕಷ್ಟವಾಗಿತ್ತು. ಈಗ ನೀರಿನ ಸಂಗ್ರಹ ಉತ್ತಮವಾಗಿರುವುದರಿಂದ ಅಂತರ್ಜಲ ಹೆಚ್ಚಾಗಿದೆ. ನಾಲ್ಕು ಬೆಳೆ ತೆಗೆಯಬಹುದು. ಕೆಲವು ದಿನಗಳಿಂದ ಮಳೆಯೂ ಬೀಳುತ್ತಿರುವುದರಿಂದ ಜಾನುವಾರುಗಳ ನಿರ್ವಹಣೆಗೂ ಅನುಕೂಲವಾಗಿದೆ’ ಎಂದು ಮೆಟ್ಟೂರಿನ ರೈತ ಗೋವಿಂದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿನ್ನೀರು ವ್ಯಾಪ್ತಿ ವಿಸ್ತಾರ:ಈ ಮಧ್ಯೆ,ಮೆಟ್ಟೂರು ಜಲಾಶಯದ ಹಿನ್ನೀರು ಗಡಿಭಾಗ, ರಾಜ್ಯದ ಪಾಲಾರ್ ಬಳಿ ಇರುವ ಸೋರೆಕಾಯಿ ಮಡು ಹಾಗೂ ಗೋಪಿನಾಥಂನ ಆಸುಪಾಸಿನ ಗ್ರಾಮದವರೆಗೂ ವಿಸ್ತಾರಗೊಂಡಿದೆ. ಹಿನ್ನೀರು ವಿಸ್ತಾರಗೊಂಡಿರುವುದರಿಂದ ಮೀನುಗಾರರ ಮೊಗದಲ್ಲಿ ಮಂದಹಾಸ ಎದ್ದು ಕಾಣುತ್ತಿದೆ.

ಇನ್ನೂ ಒಂದು ವಾರ ಇದೇ ರೀತಿ ನೀರಿನ ಒಳಹರಿವಿದ್ದರೆ, ಹಿನ್ನೀರು ಗೋಪಿನಾಥಂವರೆಗೂ ತಲುಪಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.