ಮಹದೆಶ್ವರ ಬೆಟ್ಟ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ತಮಿಳುನಾಡಿನ ಮೆಟ್ಟೂರು ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, 16 ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗಿದೆ.
ಸೇಲಂ ಜಿಲ್ಲಾ ವ್ಯಾಪ್ತಿಯಲ್ಲಿರುವ ಮೆಟ್ಟೂರು ಜಲಾಶಯ ಈ ವರ್ಷ ಜುಲೈನಲ್ಲಿಯೇ ಭರ್ತಿಯಾಗಿದ್ದು ಅಣೆಕಟ್ಟೆಯ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಹಾಗೂ ತಮಿಳುನಾಡಿನಿಂದ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
ಮೆಟ್ಟರೂರು ಜಲಾಶಯದ ಗರಿಷ್ಠ ಮಟ್ಟ 120 ಅಡಿಯಾಗಿದ್ದು, ನೀರಿನ ಸಂಗ್ರಹಣಾ ಸಾಮರ್ಥ್ಯ 95.6 ಟಿಎಂಸಿ ಅಡಿಯಾಗಿದೆ. 120 ಅಡಿ ಎತ್ತರ ಇರುವ ಜಲಾಶಯ 1,700 ಮೀಟರ್ ಉದ್ದ (5,600 ಚದರಡಿ) ವಿಸ್ತೀರ್ಣವನ್ನು ಹೊಂದಿದೆ.
ಜಲಾಶಯದ ನೀರಿನ ಮಟ್ಟ 120 ಅಡಿ ತಲುಪಿದ್ದು, 93.4 ಟಿಎಂಸಿ ಅಡಿ ಮುಟ್ಟಿದೆ. ಮಂಗಳವಾರ ನೀರಿನ ಒಳ ಹರಿವು 1,10,500 ಕ್ಯೂಸೆಕ್ ಇದ್ದು, ಜಲಾಶಯದ 16 ಗೇಟ್‌ಗಳ ಮೂಲಕ 1 ಲಕ್ಷ ಕ್ಯೂಸೆಕ್ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತಿದ್ದು, ಕೃಷಿಯ ಉದ್ದೇಶಕ್ಕೆ ನಾಲೆಗಳ ಮೂಲಕ 500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹರಿಬಿಡಲಾಗಿದೆ. ಅತಿ ಹೆಚ್ಚು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಮೆಟ್ಟೂರು ಜಲಾಶಯ ತಮಿಳುನಾಡಿನ ಅತಿ ದೊಡ್ಡ ಜಲಾಶಯ ಎಂಬ ಹಿರಿಮೆಗೆ ಪಾತ್ರವಾಗಿದೆ.
1925ರಲ್ಲಿ ಪ್ರಾರಂಭವಾದ ಅಣೆಕಟ್ಟೆಯ ಕಾಮಗಾರಿ ಸತತವಾಗಿ 10 ವರ್ಷಗಳ ಕಾಲ ನಡೆಯಿತು. 17,000 ಕಾರ್ಮಿಕರನ್ನು ಜಲಾಶಯದ ನಿರ್ಮಾಣ ಕಾಮಗಾರಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.
ಮೆಟ್ಟೂರು ಜಲಾಶಯವು ತಮಿಳುನಾಡಿನ ಸೇಲಂ ಜಿಲ್ಲೆ ಸೇರಿದಂತೆ 12 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. 16.4 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುತ್ತಿದ್ದು ತಮಿಳುನಾಡಿನ ರೈತರ ಜೀವನಾಡಿ ಎಂದೇ ಕರೆಯಲಾಗುತ್ತದೆ.
6ನೇ ಬಾರಿ ಭರ್ತಿ
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೆಚ್ಚುವರಿ ನೀರು ಮೆಟ್ಟೂರು ಜಲಾಶಯಕ್ಕೆ ಹರಿಯುತ್ತಿದೆ. ಜುಲೈ ತಿಂಗಳಿನಲ್ಲೇ ಅಣೆಕಟ್ಟೆ ಸತತ 6ನೇ ಬಾರಿ ಭರ್ತಿಯಾಗಿದೆ. ಜಲಾಶಯದ ಹಿನ್ನೀರು ಪಾಲಾರ್ ಸಮೀಪವಿರುವ ಸೋರೆಕಾಯಿ ಮಡುವಿನಿಂದ ಗೋಪಿನಾಥಂ ಆಸುಪಾಸು ಹಾಗೂ ಹೋಗೆನಕಲ್ ಜಲಾಶಯದವರೆಗೂ ವ್ಯಾಪ್ತಿಸಿಕೊಂಡಿದ್ದು ನಯನ ಮನೋಹರ ದೃಶ್ಯಗಳನ್ನು ಕಾಣಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.