
ಸಂತೇಮರಹಳ್ಳಿ: ಕುದೇರು ಗ್ರಾಮಪಂಚಾಯಿತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ ಗ್ರಾಮಸಭೆ ಗುರುವಾರ ನಡೆಯಿತು.
ಪಿಡಿಒ ಗೋವಿಂದಯ್ಯ ಮಾತನಾಡಿ, 2024–25 ಸಾಲಿನಲ್ಲಿ 94 ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು ನಡೆದಿವೆ. ತೋಟಗಾರಿಕೆ ಇಲಾಖೆಯಿಂದ 6 ಹಾಗೂ ಪಿಆರ್‌ಡಿಎಲ್ 13 ಕಾಮಗಾರಿಗಳು ನಡೆದಿವೆ. ಪಂಚಾಯಿತಿ ವ್ಯಾಪ್ತಿಯ ಲಕ್ಕೂರು, ಹೆಗ್ಗವಾಡಿ, ತೆಂಕಲಮೋಳೆ, ಬಡಗಲ ಮೋಳೆ ಹಾಗೂ ವಿವೇಕಾನಂದ ಕಾಲೊನಿಗಳಲ್ಲಿ ಮೂಲ ಸೌಕರ್ಯ ಸಮಸ್ಯೆಗಳು ಬಾರದಂತೆ ಕ್ರಮ ಕೈಗೊಳ್ಳಲಾಗುವುದು. ಬೀದಿದೀಪ, ರಸ್ತೆ ಚರಂಡಿ ಸಮಸ್ಯೆಗಳನ್ನು ಪರಿಹರಿಲಾಗುವುದು. ಗ್ರಾಮಸ್ಥರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಪಂಚಾಯಿತಿಯಲ್ಲಿ ಕ್ರಿಯಾ ಯೋಜನೆಗೆ ಸೇರಿಸಬೇಕು. ಜಮೀನು ಸಮತಟ್ಟು, ಬದು ನಿರ್ಮಾಣ, ಕೊಟ್ಟಿಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ಸುನೀಲ್, ನೋಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಮೇಘ, ಆಡಿಟರ್ ಪ್ರಸನ್ನ ಕುಮಾರ್, ಸದಸ್ಯರಾದ ಶಕುಂತಲ, ಅಶೋಕ್ ಭಾಗವಹಿಸಿದ್ದರು.