ಸಂತೇಮರಹಳ್ಳಿ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಉತ್ಪಾದಕರಿಗೆ ನೀಡುವ ಹಾಲಿನ ದರಕ್ಕೆ ₹ 4 ಹೆಚ್ಚುವರಿಯಾಗಿ ಏ. 1ರಿಂದ ನೀಡಲು ನಿರ್ಧರಿಸಿದೆ.
ಕುದೇರು ಹಾಲು ಒಕ್ಕೂಟದಲ್ಲಿ ಆಡಳಿತ ಮಂಡಳಿಯವರು ಶನಿವಾರ ಸಭೆ ಸೇರಿ ₹ 4 ಹೆಚ್ಚಳ ಮಾಡಲು ನಿರ್ಣಯ ಕೈಗೊಂಡಿದ್ದು, ರೈತರಿಗೆ ಯಗಾದಿಯ ವಿಶೇಷ ಕೊಡುಗೆಯಾಗಿದೆ.
ಕಳೆದ 4 ತಿಂಗಳ ಹಿಂದೆ ಪ್ರತಿ ಲೀಟರ್ ಹಾಲಿಗೆ ಚಾಮುಲ್ ವತಿಯಿಂದ ₹ 1 ಕಡಿತಗೊಳಿಸಲಾಗಿತ್ತು. ಇದರಿಂದ ಒಕ್ಕೂಟಕ್ಕೆ ರೈತರಿಂದ ಹಾಗೂ ವಿವಿಧ ಸಂಘಟನೆಗಳಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಒತ್ತಡದಿಂದ ₹ 1 ಹೆಚ್ಚಿಸಲಾಗಿತ್ತು. ಇದೀಗ ಯುಗಾದಿ ಹಬ್ಬದ ವಿಶೇಷವಾಗಿ ₹ 4 ಹೆಚ್ಚಿಸಲಾಗಿದೆ.
ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು 461 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ ಸರಾಸರಿ 2.61 ಲಕ್ಷ ಕೆ.ಜಿ ಹಾಲು ಸಂಗ್ರಹಿಸುತ್ತಿದ್ದು, ಪ್ರತಿದಿನ ಚಾಮರಾಜನಗರ ಒಕ್ಕೂಟದ ವ್ಯಾಪ್ತಿ ಹಾಗೂ ತಮಿಳುನಾಡು, ಕೇರಳ ಮಾರುಕಟ್ಟೆ ಸೇರಿದಂತೆ ಪ್ರತಿದಿನ ಸರಾಸರಿ 65 ಸಾವಿರ ಲೀಟರ್ ಹಾಲು. 16,845 ಕೆ.ಜಿ ಮೊಸರು ಹಾಗೂ ದೇಶದ ವಿವಿಧ ಭಾಗಗಳಿಗೆ 64,789 ಲೀಟರ್ ಯುಎಚ್‌ಟಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಗೆ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ.
‘ಜಿಲ್ಲೆಯಲ್ಲಿ ಹೈನೋದ್ಯಮ ಸರ್ವತೋಮುಖ ಬೆಳವಣಿಗೆ ಹಾಗೂ ರೈತರ ಹಿತದೃಷ್ಟಿಯಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಜಿಲ್ಲಾ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹ 4 ಹೆಚ್ಚಿಸಲು ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯುಗಾದಿ ಹಬ್ಬದ ಉಡುಗೊರೆಯಾಗಿದೆ’ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಹೇಳುತ್ತಾರೆ.
ಚಾಮುಲ್ ವತಿಯಿಂದ ರೈತರಿಗೆ ಈವಾಗ ಪ್ರತಿ ಲೀಟರ್‌ಗೆ ₹ 31.20 ನೀಡಲಾಗುತ್ತಿದೆ. ಹೆಚ್ಚಿಸಿರುವ ₹ 4 ರ ಜತೆಗೆ ಸರ್ಕಾರದ ಪ್ರೋತ್ಸಾಹ ಧನ ₹ 5 ಸೇರಿದಂತೆ ರೈತರು ನೀಡುವ ಪ್ರತಿ ಲೀಟರ್‌ಗೆ ₹ 40.20 ಸಿಗಲಿದೆ.
‘ಈಚಿನ ದಿನಗಳಲ್ಲಿ ರೈತರು ಖಾಸಗಿ ಕಂಪನಿಗಳಿಗೆ ಹಾಲು ನೀಡಲು ಮುಂದಾಗುತ್ತಿದ್ದರು. ಇದರಿಂದ ಒಕ್ಕೂಟಕ್ಕೆ ಹಾಲು ಕಡಿಮೆಯಾಗುವ ಸಂಭವವಿತ್ತು. ಇದನ್ನು ಮನಗಂಡು ರೈತರ ಹಾಲಿಗೆ ದರ ಹೆಚ್ಚಿಸಲಾಗಿದೆ’ ಎಂದು ಹಾಲು ಉತ್ಪಾದಕ ರೈತರು ಹೇಳುತ್ತಾರೆ.
‘ಚಾಮುಲ್ ವತಿಯಿಂದ ರೈತರಿಗೆ ರಾಸು ವಿಮೆ, ಪಶುವೈದ್ಯಕೀಯ ಸೇವೆ, ಸದಸ್ಯರಿಗೆ ₹ 1 ಲಕ್ಷ ವಿಮೆ, ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ₹ 15 ಸಾವಿರ ಪರಿಹಾರ, ಒಕ್ಕೂಟದ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ₹ 3 ಲಕ್ಷ ಅನುದಾನ, ಕರ್ನಾಟಕ ಹಾಲು ಮಹಾ ಮಂಡಳಿಯಿಂದ ₹ 4.5 ಲಕ್ಷ ಅನುದಾನ, ರೈತ ಸದಸ್ಯರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಚಾಮುಲ್ ವತಿಯಿಂದ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು’ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.
‘ಹಾಲಿನ ದರವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವರು ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರತಿ ಲೀಟರ್ ಹಾಲಿಗೆ ₹ 4 ಹೆಚ್ಚಿಸುವಂತೆ ಆದೇಶ ನೀಡಿದ್ದಾರೆ. ಅದರ ಜತೆಗೆ ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ ₹ 5 ಸೇರಿದಂತೆ ₹ 40.20 ದೊರೆಯಲಿದೆ’ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.
‘ಸದ್ಯ ಚಾಮುಲ್ ಆಡಳಿತ ಮಂಡಳಿ ಹೆಚ್ಚಿಸಿರುವ ಹಣ ಸಾಲುವುದಿಲ್ಲ. ಕನಿಷ್ಠ ಪ್ರತಿ ಲೀಟರ್‌ಗೆ ₹ 45 ರಿಂದ ₹50 ನೀಡಬೇಕು ಆವಾಗ ರೈತರಿಗೆ ಅನುಕೂಲವಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.