
ಹನೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಹಾಲು ಕರೆಯುವ ಸರ್ಧೆಯಲ್ಲಿ ತಾಲ್ಲೂಕಿನ ತೊಮಿಯರಪಾಳ್ಯ ಗ್ರಾಮದ ಪತ್ತಿನಾಥನ್ 33.65 ಲೀ. ಹಾಲು ಕರೆಯುವುದರ ಮೂಲಕ ಪ್ರಥಮ ಸ್ಥಾನ ಗಳಿಸಿದರು.
ಪಶು ಸಂಗೋಪನಾ ಇಲಾಖೆಗೆಯಿಂದ ಹೈನುಗಾರಿಕೆ ಮಾಡುವ ರೈತರಿಗಾಗಿ ತಾಲ್ಲೂಕುಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಗ್ರಾಮಗಳಿಂದ ಹಸುಗಳೊಂದಿಗೆ ಆಗಮಿಸಿದ್ದ ರೈತರು ಹುರುಪಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬೆಳಿಗ್ಗೆ ಹಾಗೂ ಸಂಜೆ ಸೇರಿ ಎರಡೂ ಸಮಯದಲ್ಲಿ ಹಾಲು ಕರೆಯ ಸ್ಪರ್ಧೆಯಲ್ಲಿ ತೊಮಿಯರಪಾಳ್ಯ ಗ್ರಾಮದ ಪತ್ತಿನಾಥನ್ ಬೆಳಿಗ್ಗೆ 18.03 ಲೀ. ಸಂಜೆ 15.62 ಲೀ. ಸೇರಿ ಒಟ್ಟು 33.65 ಲೀ. ಕರೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದರು.
ನಂಜೆ ಹೊಡೆಯರದೊಡ್ಡಿ ಗ್ರಾಮದ ಶಿವಮೂರ್ತಿ ಅವರು ಬೆಳಿಗ್ಗೆ 18.69 ಲೀ, ಸಂಜೆ 13.89 ಲೀ. ಸೇರಿ ಒಟ್ಟು 32.58 ಲೀ. ಹಾಲು ಕರೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡರು. ಗುಂಡಪುರ ಗ್ರಾಮದ ಆನಂದ್ ಕುಮಾರ್ ಬೆಳಿಗ್ಗೆ 14.83 ಲೀ., ಸಂಜೆ 15.15 ಲೀ. ಸೇರಿ 29.98 ಲೀ. ಹಾಲು ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿದರು. ಪ್ರಥಮ ಸ್ಥಾನಕ್ಕೆ ₹25 ಸಾವಿರ, ದ್ವಿತೀಯ ₹19 ಸಾವಿರ ಮತ್ತು ತೃತೀಯ ₹14 ಸಾವಿರ ನಗದು ಬಹುಮಾನವನ್ನು ನೀಡಲಾಯಿತು.
ಬಹುಮಾನ ವಿತರಣೆ ಮಾಡಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್, ‘ತಾಲ್ಲೂಕಿನಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಿ ರೈತರು ಕೃಷಿ ಜೊತೆಗೆ ಇದನ್ನು ಅನುಸರಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ತಾಲ್ಲೂಕಿನಲ್ಲಿ ಪ್ರತಿನಿತ್ಯ 88 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಇದು ತಾಲ್ಲೂಕಿನಲ್ಲಿ ಹೈನುಗಾರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಸೂಚಿಸುತ್ತದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಇಂದಿನ ಮಳೆ ದಿನಗಳಲ್ಲಿ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮಾಡಬೇಕು. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.