ADVERTISEMENT

ಸರ್ಕಾರಿ ಜಮೀನಲ್ಲಿ ಅಕ್ರಮ ಗಣಿ: ತೆರವು

ಗ್ರಾಮಸ್ಥರ ಸಮ್ಮುಖದಲ್ಲೇ ಗಣಿ, ಕಂದಾಯ ಹಾಗೂ ಪೊಲೀಸ್‌ ಇಲಾಖೆಯ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 15:36 IST
Last Updated 29 ಫೆಬ್ರುವರಿ 2020, 15:36 IST
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಯಿತು
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಯಿತು   

ಚಾಮರಾಜನಗರ:ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕರಿಕಲ್ಲು ಗಣಿಯನ್ನು ತೆರವುಗೊಳಿಸಿವೆ.

ಗ್ರಾಮದ ಸರ್ವೆ ನಂಬರ್‌ 272ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. 12 ಮಂದಿ ಒಟ್ಟಾಗಿ ಸೇರಿ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮವಾಗಿ ಕರಿಕಲ್ಲು ಗಣಿ ನಡೆಯುತ್ತಿರುವ ಬಗ್ಗೆ ಕೆಲವರು ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಗೆ ದೂರು ನೀಡಿದ್ದರು. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗಣಿ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರಿಗೆ ಸೂಚಿಸಿದ್ದರು.

ADVERTISEMENT

ಅದರಂತೆ ಇಲಾಖೆಯ ಭೂವಿಜ್ಞಾನಿಗಳು, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

‘ಇದೇ ಸರ್ವೆ ನಂಬರ್‌ನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನವೆಂಬರ್‌ನಲ್ಲೇ ನಮಗೆ ದೂರು ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ನಾಲ್ಕು ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು, ಗಣಿಗಾರಿಕೆಯನ್ನು ತೆರವುಗೊಳಿಸಿದ್ದೆವು. ವಾರದ ಹಿಂದಿನಿಂದ ಮತ್ತೆ ಗಣಿ ಚಟುವಟಿಕೆ ಆರಂಭವಾಗಿರುವ ಬಗ್ಗೆ ದೂರು ಬಂದಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದೆವು. ಶನಿವಾರ ಪೊಲೀಸ್‌ ಹಾಗೂ ಕಂದಾಯ ಇಲಾಖೆಯ ನೆರವು ಪಡೆದು ಮೂರು ಜೆಸಿಬಿಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಡಾ.ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಯಾರೂ ತೆರಳದಂತೆ, ಸುತ್ತಲೂಜೆಸಿಬಿಗಳ ನೆರವಿನಿಂದ ಕಂದಕ ನಿರ್ಮಿಸಲಾಗಿದೆ. ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಅಧಿಕಾರಿಗಳು ಮುಚ್ಚಿದ್ದಾರೆ. ಕಾರ್ಮಿಕರಿಗೆ ಉಳಿದುಕೊಳ್ಳುವುದಕ್ಕಾಗಿ ನಿರ್ಮಿಸಲಾಗಿದ್ದ ಆರು ಶೆಡ್‌ಗಳನ್ನೂ ತೆರವುಗೊಳಿಸಲಾಗಿದೆ. ಗ್ರಾಮಸ್ಥರ ಸಮ್ಮುಖದಲ್ಲೇ ಈ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘12 ಮಂದಿ ಆ ಗಣಿಯನ್ನು ನಡೆಸುತ್ತಿದ್ದರು. ಅವರ ವಿರುದ್ಧ ನವೆಂಬರ್‌ನಲ್ಲೇ ಪ್ರಕರಣ ದಾಖಲಿಸಲಾಗಿತ್ತು. ಅದೇ ಪ್ರಕರಣವನ್ನು ಮತ್ತೆ ಪರಿಷ್ಕರಿಸಲಾಗುವುದು’ ಎಂದು ಅವರು ಹೇಳಿದರು.

ಕಾರ್ಯಾಚರಣೆಯಲ್ಲಿ ಗಣಿ ವಿಜ್ಞಾನಿಗಳಾದ ಸುಬ್ರಹ್ಮಣ್ಯ, ನಾಗರಾಜು, ಪುಷ್ಪ, ಕಂದಾಯ ನಿರೀಕ್ಷಕ ಚಿಕ್ಕಣ್ಣ ಶೆಟ್ಟಿ, ಗ್ರಾಮ ಲೆಕ್ಕಿಗ ಮಹೇಶ್‌, ರಾಮಸಮುದ್ರ ಪೊಲೀಸ್‌ ಠಾಣೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.