ADVERTISEMENT

ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 3:34 IST
Last Updated 16 ಏಪ್ರಿಲ್ 2024, 3:34 IST
ಹನೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಸಿ ಮಹದೇವಪ್ಪ ಮಾತನಾಡಿದರು. ಮಾಜಿ ಶಾಸಕ ಆರ್.ನರೇಂದ್ರ ಇತರರು ಭಾಗವಹಿಸಿದ್ದರು
ಹನೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಸಿ ಮಹದೇವಪ್ಪ ಮಾತನಾಡಿದರು. ಮಾಜಿ ಶಾಸಕ ಆರ್.ನರೇಂದ್ರ ಇತರರು ಭಾಗವಹಿಸಿದ್ದರು   

ಹನೂರು: ‘ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊನೆಯ ಚುನಾವಣೆಯಾಗಲಿದೆ ಎಂಬುದನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ‌ ಮಹಾದೇವಪ್ಪ ಸೋಮವಾರ ತಿಳಿಸಿದರು.

ಹನೂರು ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾದ ಮಹತ್ವದ ಜವಾಬ್ದಾರಿ ದೇಶದ ಜನತೆ ಮೇಲಿದೆ’ ಎಂದರು.

‘ಸಿದ್ಧಾಂತ, ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಇದುವರೆಗೆ ನಾನು ರಾಜಿಯಾದವನಲ್ಲ, ಮುಂದೆಯೂ ಆಗುವುದಿಲ್ಲ.  ಆದರೆ, ಸಿದ್ಧಾಂತ, ಬದ್ಧತೆ ಇಲ್ಲದ ಎಚ್. ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯ ಮಂತ್ರಿ ಆಗಿದ್ದಾಗ ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳುತ್ತಿದ್ದವರು, ಈಗ ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರಿಗೆ ರಾಜಕೀಯದಲ್ಲಿ ಸಿದ್ಧಾಂತ ಮತ್ತು ಬದ್ಧತೆ ಇಲ್ಲ. ನಿಜವಾಗಿಯೂ ಅವರಿಗೆ ಜನರ ಅಭಿವೃದ್ಧಿ ಮುಖ್ಯವಾಗಿದೆಯೋ ಅಥವಾ ಕುಟುಂಬದ ಅಭಿವೃದ್ಧಿ ಮುಖ್ಯವಾಗಿದೆಯೋ ಎಂಬುದನ್ನು ನೀವೇ ತೀರ್ಮಾನಿಸಬೇಕು’ ಎಂದರು.  

ADVERTISEMENT

'ಬಿಜೆಪಿಯು ಒಂದು ದೇಶ ಒಂದು ಚುನಾವಣೆ ಎಂದು ಹೇಳಿಕೊಂಡು ಸುತ್ತುತ್ತಿದ್ದಾರೆ. ಇದರಲ್ಲಿ ಪ್ರಜಾಪ್ರಭುತ್ವ ನಾಶ ಮಾಡುವ ಹುನ್ನಾರ ಅಡಗಿದೆ.  ಪ್ರಜಾಪ್ರಭುತ್ವದಲ್ಲಿ ಜನರ ರಾಜಕೀಯ ಹಕ್ಕನ್ನು ದಮನಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಾತ್ಯತೀತ ಭಾರತ ರಾಷ್ಟ್ರವನ್ನು ಒಂದು ಧರ್ಮದ ದೇಶವನ್ನಾಗಿ ಮಾಡುವ ಕೆಲಸಕ್ಕೆ ಬಿಜೆಪಿ ತಯಾರು ಮಾಡುತ್ತಿದೆ. ಆದರೆ, ಕೋಮು ಸೌಹಾರ್ದತೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ದೇಶದಲ್ಲಿ ಅನಿವಾರ್ಯವಾಗಿ ಬೇಕಾಗಿದೆ’ ಎಂದರು. 

ಮಾಜಿ ಶಾಸಕ ಆರ್ ನರೇಂದ್ರ, ಮಾಜಿ ಸಚಿವ ಕೋಟೆ ಶಿವಣ್ಣ, ಕೆಪಿಸಿಸಿ ಉಪಾಧ್ಯಕ್ಷ ಜಿ.ಎನ್‌. ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಕುಂದ ವರ್ಮಾ, ಈಶ್ವರ್ ಇತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.