ADVERTISEMENT

ಕೋವಿಡ್‌19: ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರ ತಪಾಸಣೆಗೆ ಸೂಚನೆ

ಕೋವಿಡ್‌19: ಪಿಡಿಒಗಳ ಜೊತೆ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 10:52 IST
Last Updated 28 ಜುಲೈ 2020, 10:52 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪಿಡಿಒಗಳೊಂದಿಗೆ ಸಭೆ ನಡೆಸಿದರು ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್ ಇದ್ದರು
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪಿಡಿಒಗಳೊಂದಿಗೆ ಸಭೆ ನಡೆಸಿದರು ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್ ಇದ್ದರು   

ಚಾಮರಾಜನಗರ: ‘ತಾಲ್ಲೂಕಿನಲ್ಲಿ ಕೊರೊನಾ ವೈರಸ್‌ ಸ್ಥಳೀಯವಾಗಿ ಹರಡಿಲ್ಲ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರಿಂದ ಸ್ಥಳೀಯರಿಗೆ ಸೋಂಕು ತಗುಲಿದೆ. ಹಾಗಾಗಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೊರಗಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಟ್ಟು ಅವರನ್ನು ತಪಾಸಣೆಗೆ ಒಳಪಡಿಸಬೇಕು' ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆ ನಡೆಸಿದ ಅವರು, ‘ಕೋವಿಡ್‌ ಪ್ರಕರಣಗಳು ವರದಿಯಾದ ಕೂಡಲೇ ಪಿಡಿಒಗಳು ಆ ಗ್ರಾಮದಲ್ಲಿ ಕಂಟೈನ್‌ಮೆಂಟ್ ವಲಯ ನಿರ್ಮಾಣ ಮಾಡಿ, ಪರಿಣಾಮಕಾರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು. ಕಂಟೈನ್‌ಮೆಂಟ್ ವ‌ಲಯಗಳಲ್ಲಿ ಸಮಸ್ಯೆಗಳಿದ್ದರೆ, ಜನರಿಗೆ ಆಹಾರ್ ಕಿಟ್‌ಗಳ ಅಗತ್ಯವಿದ್ದರೆ ಗಮನಕ್ಕೆ ತರಬೇಕು’ ಎಂದು ಹೇಳಿದರು.

‘ಕೆಲವು ಕಂಟೈನ್‌ಮೆಂಟ್ ವಲಯಗಳಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ತಹಶೀಲ್ದಾರ್ ಅವರು ತಕ್ಷಣ ಕ್ರಮವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳ ಜತೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ತಮಿಳುನಾಡಿಗೆ ಹೊಂದಿಕೊಂಡಿರುವ ಪುಣಜನೂರು, ಬಿಸಲವಾಡಿ, ತಾಳವಾಡಿ, ಮಾದಲವಾಡಿ, ಯರಗನಹಳ್ಳಿಯ ಕಡೆಯಿಂದಲೂ ಜನರು ಬರುವ ಸಾಧ್ಯತೆ ಇದೆ. ಇಲ್ಲಿ ಗಡಿಯನ್ನು ಬಂದ್‌ ಮಾಡಬೇಕು ಹಾಗೂ ನೆರೆ ರಾಜ್ಯದಿಂದ ಬರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒಗಳು ಮಾತನಾಡಿ, ‘ಗ್ರಾಮಗಳಿಗೆ ಹೊರಜಿಲ್ಲೆ, ಬೇರೆ ರಾಜ್ಯಗಳಿಂದ ಬಂದಿರುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಯಾರದಾದರು ಬಂದಿದ್ದರೆ, ಅವರ ಮನೆ ಮನೆಗೆ ತೆರಳಿ, ಆಸ್ಪತ್ರೆಗಳಲ್ಲಿ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆಶಾಕಾರ್ಯಕರ್ತೆಯರಿಂದ ವರದಿ ತರಿಸಿಕೊಂಡು ಕ್ರಮವಹಿಸಲಾಗುತ್ತಿದೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಬೇಕು, ಕುಡಿಯುವ ನೀರು ಸಮಸ್ಯೆ ಇದ್ದ ಕಡೆ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಶಾಸಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.