ADVERTISEMENT

ಮಹದೇಶ್ವರ ಬೆಟ್ಟ: 150 ಟ್ರ್ಯಾಕ್ಟರ್‌ ಲೋಡುಗಳಷ್ಟು ತ್ಯಾಜ್ಯ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
<div class="paragraphs"><p>ಸ್ವಚ್ಛತಾ ಕಾರ್ಯದ ನಡುವೆ ವಿಶ್ರಾಂತಿ ಪಡೆದ ನೌಕರರನ್ನು ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಮಾತನಾಡಿಸಿದರು</p></div>

ಸ್ವಚ್ಛತಾ ಕಾರ್ಯದ ನಡುವೆ ವಿಶ್ರಾಂತಿ ಪಡೆದ ನೌಕರರನ್ನು ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಮಾತನಾಡಿಸಿದರು

   

ಮಹದೇಶ್ವರ ಬೆಟ್ಟ: ಶಿವರಾತ್ರಿ ಜಾತ್ರೆ ಮುಕ್ತಾಯದ ನಂತರ ಮಹದೇಶ್ವರ ಬೆಟ್ಟ ವ್ಯಾಪ್ತಿ ಹಾಗೂ ಬೆಟ್ಟದ ಸಂಪರ್ಕ ರಸ್ತೆಗಳಲ್ಲಿ ಬಿದ್ದಿದ್ದ ಕಸ ತೆರವು ಕಾರ್ಯ ಪೂರ್ಣಗೊಂಡಿದ್ದು, 150 ಟ್ರ್ಯಾಕ್ಟರ್‌ ಲೋಡು ಕಸವನ್ನು ವಿಲೇವಾರಿ ಮಾಡಲಾಗಿದೆ. 

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ದಿನಗೂಲಿ ನೌಕರರು ಸೇರಿದಂತೆ 190 ಮಂದಿ ಮೂರು ದಿನಗಳ ಕಾಲ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.  ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟ ರಸ್ತೆ, ಪಾಲಾರ್‌ ರಸ್ತೆ ಮತ್ತು ಬೆಟ್ಟದಲ್ಲಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ. 

ADVERTISEMENT

ಇದೇ 7ರಿಂದ 11ರವರೆಗೆ ನಡೆದಿದ್ದ ಶಿವರಾತ್ರಿ ಜಾತ್ರೆ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಪಾದಯಾತ್ರೆ ಮೂಲಕ ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದರು. ದಾರಿ ಮಧ್ಯೆ ನೀರಿನ ಬಾಟಲಿ, ಆಹಾರ ಪೊಟ್ಟಣ, ಪಾದರಕ್ಷೆ ಸೇರಿದಂತೆ ಇನ್ನಿತರ ತ್ಯಾಜ್ಯ ಎಸೆಯಲಾಗಿತ್ತು. ಜಾತ್ರೆಯ ಸಂದರ್ಭದಲ್ಲೇ ಹಲವೆಡೆ ಪ್ರಾಧಿಕಾರದ ಸಿಬ್ಬಂದಿ ಕಸ ತೆರವು ಗೊಳಿಸಿದ್ದರು. 

ಜಾತ್ರೆ ಬಳಿಕ ಉಳಿದ ಕಸ ತೆರವುಗೊಳಿಸಲಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಖುದ್ದಾಗಿ ಮೇಲ್ವಿಚಾರಣೆ ನಡೆಸಿದ್ದಾರೆ. 

ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ನೌಕರರಿಗೆ ರಸ್ತೆಯ ಮಧ್ಯೆಯೇ ಅಲ್ಲಲ್ಲಿ ಊಟ ಹಾಗೂ ಚಹಾದ ವ್ಯವಸ್ಥೆ ಮಾಡಲಾಗಿತ್ತು. 

ಕಡಿಮೆಯಾದ ಕಾಡು ಹಂದಿಗಳ ಹಾವಳಿ: ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿರುವುದರಿಂದ, ಭಕ್ತರು ಹಾಗೂ ಸ್ಥಳೀಯರು ಬಿಸಾಡುತಿದ್ದ ಕಸ ಕಡ್ಡಿಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಕಾಡುಹಂದಿಗಳು ದೇವಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಲಗ್ಗೆ ಇಟ್ಟು ತ್ಯಾಜ್ಯದ ರಾಶಿ ಇದ್ದ ಪ್ರದೇಶಗಳನ್ನು ಮತ್ತಷ್ಟು ಹದಗೆಡಿಸುತಿದ್ದವು.

ದೇವಾಲಯಲ್ಲಿ ರಾತ್ರಿ ವೇಳೆ ತಂದಿದ್ದ ಭಕ್ತರ ಮೇಲೆ ದಾಳಿ ಮಾಡಿದ ನಿದರ್ಶನಗಳೂ ಈ ಹಿಂದೆ ನಡೆದಿದ್ದವು.

‘ಬೆಟ್ಟದ ಸುತ್ತಮುತ್ತ ಕೆಲವು ದಿನಗಳಿಂದ ಸ್ವಚ್ಛತೆಗೆ ಒತ್ತು ನೀಡುತ್ತಿರುವುದರಿಂದ ಹಂದಿಗಳ ಹಾವಳಿ ಕಡಿಮೆಯಾಗಿದೆ. ಇದೇ ರೀತಿ ಸ್ವಚ್ಛತೆ ಕಾಪಾಡಿದರೆ ಹಂದಿಗಳ ಹಾವಳಿಯನ್ನು ಸಂಪೂರ್ಣವಾಗಿ ತಪ್ಪಿಸಬಹುದು’ ಎಂದು ಸ್ಥಳೀಯ ನಿವಾಸಿ ಮುರುಗೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಕ್ತರ ಸಹಕಾರ ಬೇಕು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ರಘು, ‘ಕ್ಷೇತ್ರಕ್ಕೆ ಮಹಿಳೆಯರು, ಮಕ್ಕಳು ತಾಯಂದಿರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದ ಭಕ್ತರು ಭೇಟಿ ನೀಡುತ್ತಾರೆ. ಕ್ಷೇತ್ರದ ಆವರಣ ಸ್ವಚ್ಛವಾಗಿದ್ದರೆ ದೂರದ ಊರುಗಳಿಂದ ಬರುವ ಭಕ್ತರಿಗೆ ಮುಜುಗರವಾಗುವುದಿಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು ಎಂಬ ಮನೋಭಾವನೆಯೂ ಬರುತ್ತದೆ. ನೈರ್ಮಲ್ಯ ವಾತಾವರಣದಿಂದ ಕಾಯಿಲೆಗಳು ಬರುವುದನ್ನೂ ತಡೆಯಬಹುದು’ ಎಂದರು. 

‘ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಭಕ್ತರು ಕೂಡ ಸಹಕರಿಸಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಹಾಗೂ ಕಸ ಎಲ್ಲೆಂದರಲ್ಲಿ ಎಸೆಯದೆ ಬುಟ್ಟಿಗಳಲ್ಲಿ ಹಾಕಬೇಕು. ಎಲ್ಲರೂ ಸಹಕರಿಸಿದರೆ, ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಧಾರ್ಮಿಕ ಯಾತ್ರಾ ಸ್ಥಳವನ್ನಾಗಿ ಮಾಡಬಹುದು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.