ADVERTISEMENT

ಮಹದೇಶ್ವರ ಬೆಟ್ಟಕ್ಕೆ ಭಕ್ತರನ್ನು ನಿರ್ಬಂಧಿಸಲು ಆಗ್ರಹಿಸಿ ಸಂಘಟನೆಗಳ ಪ್ರತಿಭಟನೆ

ಕೋವಿಡ್‌–19 ಹರಡುವ ಭಯ; ಸ್ಥಳೀಯರಿಂದ ವಿರೋಧ, ಎಲ್ಲ ಮುಂಜಾಗ್ರತಾ ಕ್ರಮಗಳ ಪಾಲನೆ–ಕಾರ್ಯದರ್ಶಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 10:31 IST
Last Updated 9 ಜುಲೈ 2020, 10:31 IST
   

ಮಹದೇಶ್ವರಬೆಟ್ಟ: ಕೋವಿಡ್‌ –19 ಹರಡುವ ಸಾಧ್ಯತೆ ಇರುವುದರಿಂದ ಇಲ್ಲಿನ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು, ಮಹಿಳಾ ಸಂಘಟನೆ ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಸಾಲೂರು ಮಠದ ಶಾಲಾ ಆವರಣದಲ್ಲಿ ಸೇರಿದ್ದ ನೂರಾರು ಪ್ರತಿಭಟನಕಾರರು ಕೊಳ್ಳೇಗಾಲ ಚೆಕ್ ಪೋಸ್ಟ್ ಬಳಿಯವರೆಗೆ ಜಾಥಾ ಹೊರಟು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಬೆಟ್ಟವು ಪ್ರಸಿದ್ಧ ಯಾತ್ರಾ ಸ್ಥಳವಾಗಿರುವುದರಿಂದ ಕೋವಿಡ್‌–19 ಸಂದರ್ಭದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಜಿಲ್ಲೆಯಲ್ಲೂ ಕೋವಿಡ್‌–19 ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸ್ಥಳೀಯ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಪ್ರತಿಭಟನನಿರತರು ಹೇಳಿದರು.

ADVERTISEMENT

‘ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಭಕ್ತರಲ್ಲಿ ಬಹುತೇಕರು ಹೊರ ಜಿಲ್ಲೆಗಳಿಂದ ಬರುತ್ತಿದ್ದಾರೆ. ಬಂದವರು ದೇವಾಲಯದ ಸುತ್ತ ಮುತ್ತ, ಅಂಗಡಿ ಮುಂಗಟ್ಟುಗಳು ಇರುವಲ್ಲಿ ವಿಶ್ರಾಂತಿ ಪಡೆದು ಸುತ್ತಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್‌ ಹರಡುವ ಭೀತಿ ಎದುರಾಗಿದೆ. ಸ್ಥಳೀಯರು ದಿನಂಪ್ರತಿ ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ದೇವಾಲಯಕ್ಕೆ ಬರುವ ಭಕ್ತರನ್ನು ತಾಳಬೆಟ್ಟದಲ್ಲೇ ತಡೆದು ವಾಪಸ್‌ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂಬಂಧ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕೋವಿಡ್‌–19 ಹರಡಂತೆ ಪ್ರಾಧಿಕಾರ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅವರು ವಿವರಿಸಿದರು. ಬೇಡಿಕೆಗಳನ್ನು ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುವುದಾಗಿ ಭರವಸೆಯನ್ನೂ ನೀಡಿದರು.

ಸ್ಥಳದಲ್ಲಿ ತಹಸಿಲ್ದಾರ್ ಬಸವರಾಜು, ಇನ್‌ಸ್ಪೆಕ್ಟರ್‌ ಬಿ.ಮಹೇಶ್, ಸಬ್‌ ಇನ್‌ಸ್ಪೆಕ್ಟರ್‌ ವೀರಣ್ಣಾರಾಧ್ಯ, ಪಿಡಿಒ ರಾಜಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ರೈತ ಸಂಘದ ಪುಟ್ಟಪ್ಪ, ಆಶಾ ಕಾರ್ಯಕರ್ತೆಯರು ಇದ್ದರು.

ಎಲ್ಲ ಮುಂಜಾಗ್ರತಾ ಕ್ರಮಗಳ ಪಾಲನೆ

ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು, ‘ದೇವಸ್ಥಾನಕ್ಕೆ ದಿನಕ್ಕೆ ಸರಾಸರಿ 4,000 ಜನ ಬರುತ್ತಾರೆ. 20 ಸಾವಿರ ಜನರು ಬಂದರೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ನಿರ್ವಹಿಸುವ ವ್ಯವಸ್ಥೆ ನಮ್ಮಲ್ಲಿದೆ. ಕೋವಿಡ್‌–19 ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ಹೊರಗಡೆಯಿಂದ ಬರುವ ಭಕ್ತರಿಂದ ಕೋವಿಡ್‌–19 ಹರಡುತ್ತದೆ ಎಂಬುದನ್ನು ಪ್ರಾಧಿಕಾರ ಒಪ್ಪುವುದಿಲ್ಲ.ದೇವರ ದರ್ಶನಕ್ಕೆ ಬರುವ ಎಲ್ಲರೂಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದೇವೆ. ಮಾಸ್ಕ್‌ ಧರಿಸದವರರಿಗೆ ನಾವೇ ಮಾಸ್ಕ್‌ ನೀಡುತ್ತಿದ್ದೇವೆ. ಭಕ್ತರನ್ನು ರಂಗ ಮಂದಿರದಲ್ಲಿ ಕೂರಿಸಿ, ಥರ್ಮಲ್‌ ಸ್ಕ್ರೀನಿಂಗ್‌ ಮಾಡಿಸಿ, ಎಲ್ಲ ತಿಳಿವಳಿಕೆ ಹೇಳಿ, ಸ್ಯಾನಿಟೈಸ‌ರ್‌ ನೀಡಿ, ಮಾಡಿ, ಸರತಿಯಲ್ಲೂ ಅಂತರ ಕಾಯ್ದುಕೊಂಡು ದರ್ಶನ ಆದ ತಕ್ಷಣಕ್ಕೆ ನೇರವಾಗಿ ಅವರ ವಾಹನದ ಬಳಿಗೆ ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ಸದ್ಯ ಕೊಳ್ಳೇಗಾಲ ಗೇಟ್‌ ಬಳಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತಿದ್ದೇವೆ. ಇನ್ನುಮುಂದೆ ತಾಳಬೆಟ್ಟದಲ್ಲೇ ಸ್ಕ್ರೀನಿಂಗ್‌ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.