ADVERTISEMENT

ಮಾದಪ್ಪನ ಶಿವರಾತ್ರಿ ಜಾತ್ರೆ ಸರಳ; ಸ್ಥಳೀಯರಿಗಷ್ಟೇ ಅವಕಾಶ

ಜಾತ್ರೆಗೆ ಜಿಲ್ಲೆಯ, ಹೊರ ಜಿಲ್ಲೆಯ, ಹೊರ ರಾಜ್ಯಗಳ ಭಕ್ತರಿಗೆ ಅವಕಾಶ, ಗ್ರಾಮಸ್ಥರ ಸಮ್ಮುಖದಲ್ಲಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 15:56 IST
Last Updated 3 ಮಾರ್ಚ್ 2021, 15:56 IST
ಮಲೆಮಹದೇಶ್ವರ ಸ್ವಾಮಿ ದೇವಾಲಯದ ಸಂಗ್ರಹ ಚಿತ್ರ
ಮಲೆಮಹದೇಶ್ವರ ಸ್ವಾಮಿ ದೇವಾಲಯದ ಸಂಗ್ರಹ ಚಿತ್ರ   

ಹನೂರು: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದ್ದ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿಯ ಶಿವರಾತ್ರಿ ಜಾತ್ರೋತ್ಸವ ಈ ಬಾರಿ ಕೋವಿಡ್‌ನಿಂದಾಗಿ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಯಲಿದೆ.

ರಥೋತ್ಸವ ಸೇರಿದಂತೆ ಜಾತ್ರೆ ಸಮಯದಲ್ಲಿ ನಡೆಯಲಿರುವ ಎಲ್ಲ ಉತ್ಸವಗಳು ಯಥಾ ಪ್ರಕಾರ ನಡೆಯಲಿದ್ದು, ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಕೋವಿಡ್‌ಗೆ ಸಂಬಂಧಿಸಿದ ರಾಜ್ಯ ಮಟ್ಟದ ಉನ್ನತ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದೇ 10ರಿಂದ 14ರವರೆಗೆ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ನಡೆಯಲಿದೆ. ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಶಿವರಾತ್ರಿ ಹಾಗೂ ಯುಗಾದಿ ಜಾತ್ರೆಯ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆದಿತ್ತು. ಜಾತ್ರೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಅವರು ಸೂಚಿಸಿದ್ದರು. ಹಾಗಾಗಿ, ಎಂದಿನಂತೆ ಜಾತ್ರೆ ನಡೆಯಲಿದೆ ಎಂದು ಹೇಳಲಾಗಿತ್ತು.

ADVERTISEMENT

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ಬುಧವಾರ ‌ಮಹದೇಶ್ವರ ಬೆಟ್ಟದಲ್ಲಿ ಜಾತ್ರೆಗೆ ಸಂಬಂಧಿಸಿದಂತೆ ಸಭೆ ನಡೆದಿದ್ದು, ಜಾತ್ರೆಯನ್ನು ಸಾಂಪ್ರದಾಯಿಕವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತವಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘10ರಿಂದ ಆರಂಭವಾಗುತ್ತಿರುವ ಮಹಾಶಿವರಾತ್ರಿ ಜಾತ್ರೆ ಈ ಬಾರಿ ಕೋವಿಡ್ ಕಾರಣದಿಂದ ಸೀಮಿತ ಪ್ರಮಾಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಟ್ಟದ ಸ್ಥಳೀಯರಿಗೆ ಮಾತ್ರ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಬೇರೆ ಊರುಗಳಿಂದ ಹಾಗೂ ಹೊರ ಜಿಲ್ಲೆಗಳ ಭಕ್ತರ ಭೇಟಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಾರ್ಯನಿಮಿತ್ತ ಬರುವ ಅಧಿಕಾರಿಗಳು ಹಾಗೂ ಅತಿಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ನಡೆಯುತ್ತಿದ್ದಂತೆ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನಡೆಯಲಿವೆ. ರಾತ್ರಿ ವೇಳೆ ತಂಗುವುದು, ಅಡುಗೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಕೋವಿಡ್ ನಿರ್ಬಂಧ ಇದೇ 31 ರವರೆಗೂ ಇರುವುದರಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರು ಇದಕ್ಕೆ ಸಹರಿಕಸಬೇಕು’ ಎಂದರು.

ತಂಗುವ ವ್ಯವಸ್ಥೆ ಇಲ್ಲ: ‘ಸ್ಥಳೀಯರಿಗೆ ಅವಕಾಶ ಕಲ್ಪಿಸಿರುವುದರಿಂದ ಅವರು ಸಹ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಇದೇ 8ರವರೆಗೆ ಯಾವುದೇ ನಿರ್ಭಂಧ ಇರುವುದಿಲ್ಲ. ಜಾತ್ರೆಯ ಸಮಯದಲ್ಲಿ ಅಂದರೆ 10 ರಿಂದ 14ರವರೆಗೆ ನಿರ್ಬಂಧವಿರುವುದರಿಂದ ಮಾರ್ಚ್‌ 9ರಿಂದ ರಾತ್ರಿ ತಂಗುವ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಹೊರಗಡೆಯಿಂದ ಬರುವ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ. 15ರಿಂದ ಎಂದಿನಂತೆ ದರ್ಶನದ ವ್ಯವಸ್ಥೆ ಇರಲಿದೆ’ ಎಂದುಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದರು.

ಸಭೆಯಲ್ಲಿ ಸಾಲೂರು ಬೃಹನ್ಮಠದ ಅಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಡಿವೈಎಸ್‌ಪಿ ನಾಗರಾಜು, ಹನೂರು ತಹಶೀಲ್ದಾರ್ ಜಿ.ಎಚ್. ನಾಗರಾಜು, ಪ್ರಾಧಿಕಾರದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.