ADVERTISEMENT

ಚಾಮರಾಜನಗರ | ಮಾಂಸ ಮಾರಾಟಕ್ಕೂ ಸಂಚಾರ ಮಳಿಗೆ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಯೋಜನೆ, ಐವರು ಫಲಾನುಭವಿಗಳ ಆಯ್ಕೆ

ಸೂರ್ಯನಾರಾಯಣ ವಿ
Published 21 ಏಪ್ರಿಲ್ 2020, 19:43 IST
Last Updated 21 ಏಪ್ರಿಲ್ 2020, 19:43 IST
ಮಾಂಸ ಮತ್ತು ಮಾಂಸ ಖಾದ್ಯಗಳ ಸಂಚಾರಿ ಮಾರಾಟ ಮಳಿಗೆ
ಮಾಂಸ ಮತ್ತು ಮಾಂಸ ಖಾದ್ಯಗಳ ಸಂಚಾರಿ ಮಾರಾಟ ಮಳಿಗೆ   

ಚಾಮರಾಜನಗರ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿಶೇಷ ಘಟಕದ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಐವರು ನಿರುದ್ಯೋಗಿ ಯುವಕರಿಗೆಮಾಂಸ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುವ ಸಂಚಾರಿ ಮಾರಾಟ ಮಳಿಗೆ (ಮೊಬೈಲ್‌ ಶಾಪ್‌) ಮಂಜೂರಾಗಿದೆ.

2018–19ನೇ ಸಾಲಿನ ಯೋಜನೆ ಇದಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ ಮತ್ತು ಹನೂರಿನ ತಲಾ ಒಬ್ಬರು, ಯಳಂದೂರು ತಾಲ್ಲೂಕಿನ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸಂಚಾರಿ ಮಾರಾಟ ಮಳಿಗೆಳಿಗೆ ಬುಧವಾರ ಚಾಲನೆ ನೀಡಲಿದ್ದಾರೆ ಎಂದುಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ‍ ನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಯೋಜನೆ?: 2018–19ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ವಿಶೇಷ ಘಟಕ ಯೋಜನೆ ಅಡಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಗೆ ವೆಚ್ಚವಾಗಿ ಉಳಿದ ಹಣದಲ್ಲಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ರಾಜ್ಯದಾದ್ಯಂತ 175 ಮಂದಿ ನಿರುದ್ಯೋಗಿ ಯುವಕರಿಗೆ ಮಾಂಸ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವ ಸಂಚಾರಿ ಮಾರಾಟ ಮಳಿಗೆಯನ್ನು ಸಬ್ಸಿಡಿಯಲ್ಲಿ ನೀಡಲು ತೀರ್ಮಾನಿಸಿತ್ತು.

ADVERTISEMENT

‘ಅದರಂತೆ ಜಿಲ್ಲೆಗೆ ಐದು ಸಂಚಾರಿ ಮಾರಾಟ ಮಳಿಗೆಗಳು ಮಂಜೂರಾಗಿದ್ದವು. ಫಲಾನುಭವಿಗಳ ಆಯ್ಕೆ 2018–19ರಲ್ಲೇ ನಡೆದಿತ್ತು. ವಾಹನಗಳು ಈಗ ಬಂದಿವೆ’ ಎಂದು ಡಾ.ಸಿ.ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿ: ‘ಸಂಚಾರ ಮಾರಾಟ ಮಳಿಗೆಯನ್ನು ಬಳಸುವ ವಿಧಾನದ ಬಗ್ಗೆ ಈಗಾಗಲೇ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ. ಈ ಮಳಿಗೆಯಲ್ಲಿ ಮಾಂಸವನ್ನು ಇಡಲು ಶೀತಲೀಕರಣ ವ್ಯವಸ್ಥೆ, ಖಾದ್ಯಗಳನ್ನು ತಯಾರಿಸಲು ಬೇಕಾದ ಸಲಕರಣೆಗಳು, ನೀರಿನ ಸಂಗ್ರಹಿಸುವ ತೊಟ್ಟಿ ಸೇರಿದಂತೆ ಅಗತ್ಯವಾದ ಎಲ್ಲ ವ್ಯವಸ್ಥೆಗಳೂ ಇವೆ’ ಎಂದು ಅವರು ಮಾಹಿತಿ ನೀಡಿದರು.

ಕೋಳಿ ಮಾಂಸ, ಮಟನ್‌ಗಳನ್ನು ಇದರಲ್ಲಿ ಮಾರಾಟ ಮಾಡಬಹುದು. ಖಾದ್ಯಗಳನ್ನು ತಯಾರಿಸುವುದಕ್ಕೂ ಅವಕಾಶ ಇದೆ. ಸಂಚಾರಿ ಮಳಿಗೆ ಆಗಿರುವುದರಿಂದ ಫಲಾನುಭವಿಗಳು ರಸ್ತೆ ಬದಿ ಸೇರಿದಂತೆ ಎಲ್ಲಿ ಬೇಕಾದರೂ ವಾಹನ ನಿಲ್ಲಿಸಿ ವ್ಯವಹಾರ ನಡೆಸುವುದಕ್ಕೆ ತೊಂದರೆ ಇಲ್ಲ’ ಎಂದು ಹೇಳಿದರು.

ಒಂದು ಮಾಳಿಗೆ ₹11 ಲಕ್ಷ
ಹೈದರಾಬಾದ್‌ನ ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದ (ಎನ್‌ಆರ್‌ಸಿಎಂ) ತಾಂತ್ರಿಕ ನೆರವಿನಿಂದಪಿಕ್‌ ಅಪ್‌ ವಾಹನಗಳನ್ನು ಮಾಂಸ ಮಾರಾಟ ಮಳಿಗೆ ಪರಿವರ್ತಿಸಲಾಗಿದೆ.

ಪ್ರತಿಯೊಂದು ವಾಹನಕ್ಕೂ ₹ 11 ಲಕ್ಷ ವೆಚ್ಚವಾಗಿದೆ. ಈ ಪೈಕಿ ₹ 8.5 ಲಕ್ಷ ಹಣವನ್ನು ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ ಬರುವ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಸಹಾಯಧನದ (ಸಬ್ಸಿಡಿ) ರೂಪದಲ್ಲಿ ನೀಡಲಿದೆ. ಉಳಿದ ₹ 2.5 ಲಕ್ಷವನ್ನು ಫಲಾನುಭವಿಗಳು ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.