ADVERTISEMENT

ಗಡಿಜಿಲ್ಲೆಗೆ ಮುಂಗಾರು ಮಳೆಯ ಸಿಂಚನ

ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ, ಚಾಮರಾಜನಗರ, ಯಳಂದೂರಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 14:37 IST
Last Updated 5 ಜೂನ್ 2021, 14:37 IST
ಚಾಮರಾಜನಗರ ತಾಲ್ಲೂಕಿನ ಗೂಳಿಪುರದ ಬಳಿ ರೈತರು ಕೃಷಿ ಚಟುವಟಿಕೆ ಮುಗಿಸಿ ಮಳೆಯಲ್ಲೇ ಮನೆಯತ್ತ ಸಾಗಿದರು
ಚಾಮರಾಜನಗರ ತಾಲ್ಲೂಕಿನ ಗೂಳಿಪುರದ ಬಳಿ ರೈತರು ಕೃಷಿ ಚಟುವಟಿಕೆ ಮುಗಿಸಿ ಮಳೆಯಲ್ಲೇ ಮನೆಯತ್ತ ಸಾಗಿದರು   

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೂ ಮುಂಗಾರು ಕಾಲಿಟ್ಟಿದೆ. ಮೂರು ದಿನಗಳಿಂದ ಜಿಲ್ಲೆ ಮಲೆನಾಡಿನಂತೆ ಭಾಸವಾಗುತ್ತಿದೆ.

ಜಿಲ್ಲೆಯ ಎಲ್ಲ ಭಾಗಗಳಲ್ಲೂ ಮಳೆಯಾಗದಿದ್ದರೂ, ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಎರಡು ದಿನಗಳಿಂದ ಚಾಮರಾಜನಗರ, ಹನೂರು ಮತ್ತು ಯಳಂದೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ.

ಮುಂಗಾರು ಪೂರ್ವ ಮಳೆ ಕೊರತೆ ಹಾಗೂ ಕೋವಿಡ್‌ ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಳೆಯಾಶ್ರಿತ ರೈತರಲ್ಲಿ ಮುಂಗಾರು ಮಳೆ ಹೊಸ ಆಶಾ ಭಾವನೆ ಮೂಡಿಸಿದೆ. ಕೆಲವು ರೈತರು ಈಗಾಗಲೇ ನೆಲವನ್ನು ಹದ ಮಾಡಿ ಬಿತ್ತನೆಗಾಗಿ ಕಾದು ಕುಳಿತಿದ್ದಾರೆ. ಒಂದೆರಡು ಮಳೆಯಾಗಿ, ಸ್ವಲ್ಪ ಬಿಸಿಲು ಕಾದ ನಂತರ ಬಿತ್ತನೆ ಆರಂಭಿಸುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಬಿತ್ತನೆ ನಿಧಾನವಾಗಿದೆ.

ADVERTISEMENT

ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕೃಷಿಕರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದಾರೆ.

ಮಳೆ ಕೊರತೆ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಅವಧಿಯಲ್ಲಿ ಮಳೆ ಕೊರತೆಯಾಗಿದೆ. ಜನವರಿ 1ರಿಂದ ಮೇ 31ರವರೆಗೆ 15.8 ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ ಈ ಅವಧಿಯಲ್ಲಿ 20.8 ಸೆಂ.ಮೀ ಮಳೆಯಾಗುತ್ತಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಈ ಸಲ ಶೇ 22ರಷ್ಟು ಮಳೆ ಕಡಿಮೆಯಾಗಿದೆ. ಜೂನ್‌ ತಿಂಗಳ ಮೊದಲ ಐದು ದಿನಗಳಲ್ಲಿಯೂ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ, ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದು ಕೃಷಿಗೆ ಅನುಕೂಲವಾಗಲಿದೆ.

ಚಾಮರಾಜನಗರದಲ್ಲಿ ಹೆಚ್ಚು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 0.71 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ಮತ್ತು ಹನೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚೆನ್ನಾಗಿ ವರ್ಷಧಾರೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 1.3 ಸೆಂ.ಮೀ ಮಳೆಯಾಗಿದ್ದರೆ, ಹನೂರು ವ್ಯಾಪ್ತಿಯಲ್ಲಿ 0.8 ಸೆಂ.ಮೀ ಮಳೆ ಬಿದ್ದಿದೆ. ಉಳಿದಂತೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 0.4 ಸೆಂ.ಮೀ, ಕೊಳ್ಳೇಗಾಲದಲ್ಲಿ 0.3 ಸೆಂ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 0.2 ಸೆಂ.ಮೀ ಮಳೆಯಾಗಿದೆ.

ಶನಿವಾರವೂ ಸುರಿದ ವರ್ಷಧಾರೆ

ಶನಿವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ದಟ್ಟ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12.30ರ ಸುಮಾರಿಗೆ ಚಾಮರಾಜನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಆ ಬಳಿಕ, ಸಂಜೆಯವರೆಗೂ ಆಗಾಗ ತುಂತುರು ಮಳೆಯಾಗುತ್ತಿತ್ತು. ತಾಲ್ಲೂಕಿನ ಗ್ರಾಮೀಣ ಭಾಗಗಳು ಹಾಗೂ ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸಂಜೆ ಕೂಡ ಚೆನ್ನಾಗಿ ಮಳೆ ಸುರಿದಿದೆ.

ಬಿಳಿಗಿರಿರಂಗನಬೆಟ್ಟ ಸೇರಿದಂತೆ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮವಾಗಿ ವರ್ಷಧಾರೆಯಾಗಿದೆ. ಕೊಳ್ಳೇಗಾಲ, ಹನೂರು ವ್ಯಾಪ್ತಿಯಲ್ಲಿ ದಟ್ಟೈಸಿದ ಮೋಡ ಇದ್ದರೂ, ತುಂತುರು ಮಳೆಯಷ್ಟೇ ಆಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿಲ್ಲ. ಲಕ್ಕೂರು, ತೆರಕಣಾಂಬಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.