ADVERTISEMENT

ಯಳಂದೂರಿನಲ್ಲಿ ಕಟ್ಟಡ ನಿರ್ಮಾಣ ಹೆಚ್ಚಳ: ಶ್ರಮಿಕರ ಮೊಗದಲ್ಲಿ ಮೂಡಿದ ಮಂದಹಾಸ

ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಸಿಕ್ಕಿದೆ ವೇಗ

ನಾ.ಮಂಜುನಾಥ ಸ್ವಾಮಿ
Published 14 ಸೆಪ್ಟೆಂಬರ್ 2020, 19:30 IST
Last Updated 14 ಸೆಪ್ಟೆಂಬರ್ 2020, 19:30 IST
ಕಟ್ಟಡ ನಿರ್ಮಾಣ, ಮನೆಯ ಒಳಾಂಗಣಕ್ಕೆ ಬಳಸಲುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ
ಕಟ್ಟಡ ನಿರ್ಮಾಣ, ಮನೆಯ ಒಳಾಂಗಣಕ್ಕೆ ಬಳಸಲುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ   

ಯಳಂದೂರು:ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುತ್ತಿದಂತೆಯೇ ಗೃಹ, ಕಟ್ಟಡ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಜೊತೆಗೆ ಲಾಕ್‌ಡೌನ್‌ ಸಮಯದಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆಯುತ್ತಿದ್ದು ಶ್ರಮಿಕರಿಗೂ ಕೆಲಸ ಸಿಗುತ್ತಿದೆ.

ಕಟ್ಟಡ ನಿರ್ಮಾಣ ಮತ್ತು ದುರಸ್ತಿ, ಪೀಠೋಪಕರಣ ತಯಾರಿ, ವೈರಿಂಗ್, ಚರಂಡಿ ಕಾಮಗಾರಿ, ಫ್ಲೋರಿಂಗ್, ಭೂಮಿ ಸಮತಟ್ಟು.. ಸೇರಿದಂತೆ ವಿವಿಧ ಕೆಲಸಗಳು ಈಗ ನಡೆಯುತ್ತಿದ್ದು ಕುಶಲ ಕರ್ಮಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಮನೆಯ ಒಳಾಂಗಣ ನಿರ್ಮಾಣಕ್ಕೆ ಬೇಕಾದ ಕಲ್ಲು, ಅಲಂಕಾರಿಕ ಹಾಸುಶಿಲೆ, ಸಿಂಕ್ ಮತ್ತಿತರ ವಸ್ತುಗಳಿಗೆ ಬೇಡಿಕೆಯೂ ಹೆಚ್ಚಿದೆ.

ತಾಲ್ಲೂಕಿನಲ್ಲಿ ಸಾವಿರಾರು ಮಂದಿ ಕಟ್ಟಡ ಮತ್ತು ಇತರೆ ನಿರ್ಮಾಣಗಳಲ್ಲಿ ತೊಡಗಿದ್ದಾರೆ. ಆದರೆ, ಕಾರ್ಮಿಕ ಇಲಾಖೆಗಳಲ್ಲಿ ಹೆಸರು ನೋಂದಾಯಿಸಿಕೊಂಡವರು ಅತಿ ಕಡಿಮೆ. ಅನೌಪಚಾರಿಕ ಕೆಲಸಗಳಲ್ಲಿ ದುಡಿಯುವವರೇ ಹೆಚ್ಚು. ಬಹುತೇಕ ಹೋಟೆಲ್, ಆಟೋ, ವಾಹನಗಳಲ್ಲಿ ಮತ್ತು ಗ್ಯಾರೇಜ್‌ಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲಾ ಅಲ್ಪಾವಧಿ ಕೆಲಸಗಳಲ್ಲಿ ತೊಡಗಿದ್ದಾರೆ. ಈಗ ಮನೆ ನಿರ್ಮಾಣದ ಕೆಲಸಗಳು ವೇಗ ಪಡೆದುಕೊಂಡಿದ್ದು, ಕೆಲಸ ಇಲ್ಲದೆ ಬಸವಳಿದಿದ್ದ ದಿನಗೂಲಿ ನೌಕರರು ಸ್ವಲ್ಪ ನಿರಾಳರಾಗಿದ್ದಾರೆ ಎನ್ನುತ್ತಾರೆ ಮಾಲೀಕರು.

ADVERTISEMENT

‘ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಇರಲಿಲ್ಲ. ಆದರೂ, ಮಾಸಿಕ ಸಂಬಳ ನಂಬಿ ಹಾರ್ಡ್‌ವೇರ್‌ ಅಂಗಡಿಗಳಲ್ಲಿ ದುಡಿಯುತ್ತಿದ್ದವರಿಗೆ, ಮಾಲೀಕರು ನೆರವಾದರು. ಆದರೆ, ಈ ಅವಧಿಯಲ್ಲಿ ಪ್ರತಿದಿನ ಬರುತ್ತಿದ್ದ ಆದಾಯ ಇಳಿಕೆಯಾಗಿತ್ತು. ಜೀವನ ನಿರ್ವಹಣೆಗೆ ತೊಂದರೆಯಾಗಿತ್ತು. ಈಗ ಉದ್ಯಮ-ವ್ಯವಹಾರಗಳು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದು, ತುಸು ನೆಮ್ಮದಿ ಮೂಡಿಸಿದೆ’ ಎಂದು ಯಳಂದೂರಿನ ಕಾರ್ಮಿಕರಾದ ರಾಜೇಶ್ ಮತ್ತು ಗಿರೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಸ್ಥಗಿತಗೊಂಡಿದ್ದ ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತಿವೆ. ಈಗಿನ ಬೆಳವಣಿಗೆಗಳು ಆಶಾದಾಯಕವಾಗಿದೆ. ಮುಂಬರುವ ದಿನಗಳು ಶುಭಸೂಚಕ ದಿನಗಳಾಗಿವೆ. ಮನೆ ನಿರ್ಮಾಣಕ್ಕೆ ಅವಶ್ಯವಾದ ಗ್ರ್ಯಾನೈಟ್, ಅಡುಗೆ ಮನೆ ಅಲಂಕಾರಿಕ ವಸ್ತುಗಳು ಹಾಗೂ ಚಾವಣಿಗೆ ಬೇಕಾದ ಸಿಮೆಂಟ್ ಶೀಟ್‌ಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುತ್ತಿರುವುದು ಸಹ ಬೇಸಿನ್‌ ಮತ್ತು ಸಿಮೆಂಟ್ ರಿಂಗ್ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ರಾಘವೇಂದ್ರ ಟ್ರೇಡರ್ಸ್ ಮಾಲೀಕ ಶ್ರೀನಿವಾಸ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.