
ಗುಂಡ್ಲುಪೇಟೆ: ‘ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಮಾತೃಭಾಷೆ ಮತ್ತಷ್ಟು ಎತ್ತರಕ್ಕೆ ಏರಲು ಸಾಧ್ಯ’ ಎಂದು ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಸವರಾಜ ತಳವಾರ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕನ್ನಡದ ಮೇಲೆ ಹೆಚ್ಚಿನ ಅಭಿಮಾನ, ಪ್ರೀತಿ ಹೊಂದಿದ್ದರೆ ಮಾತ್ರ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಹುದು. ಆದ್ದರಿಂದ ಕನ್ನಡಿಗರು ಹೆಚ್ಚು ಭಾಷಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೇರಳ, ತಮಿಳುನಾಡು ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಸಹಜವಾಗಿಯೇ ಪರಭಾಷಿಕರ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಕನ್ನಡಿಗರು ಅಧಿಕವಾಗಿ ಮಾತೃ ಭಾಷೆ ಮಾತನಾಡಬೇಕು. ಜೊತೆಗೆ ಕನ್ನಡದಲ್ಲೆ ವ್ಯವಹರಿಸಲು ಮುಂದಾಗಬೇಕು. ಈ ರೀತಿಯಾದರೆ ಮಾತ್ರ ಕನ್ನಡ ಗಟ್ಟಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಟಿ.ದೀಪು ಮಾತನಾಡಿ, ‘ಪರಭಾಷೆಯ ಮೇಲಿನ ಮೋಹ ಕಡಿಮೆಯಾದಾಗ ಮಾತ್ರ ನಮ್ಮ ಭಾಷೆಯ ಮೇಲಿನ ಅಭಿಮಾನ ಹೆಚ್ಚುತ್ತದೆ’ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಿರೀಶ್, ವೃತ್ತ ನಿರೀಕ್ಷಕ ಜಯಕುಮಾರ್ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶಬ್ಬೀರ್ ಅಲಿ, ರಾಘವೇಂದ್ರ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಸ್.ವೆಂಕಟೇಶ್, ವಕೀಲ ಮನು ಶ್ಯಾನುಭೋಗ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.