
ಗುಂಡ್ಲುಪೇಟೆ: ಇಲ್ಲಿನ ಪುರಸಭೆಯ 2026-27ನೇ ಸಾಲಿನ ಬಜೆಟ್ ಅಂದಾಜಿಸುವ ಸಂಬಂಧ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು. ಸ್ವಚ್ಛತೆ, ಪಾರ್ಕ್ ಅಭಿವೃದ್ಧಿ, ಎಲ್ಲಾ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಲಹೆ ಸೂಚನೆ ಕೇಳಿಬಂದವು.
ಪಟ್ಟಣ ಪುರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶವ ಸಂಸ್ಕಾರ ಮಾಡಲು ₹5 ಸಾವಿರ ನೀಡಲಾಗುತ್ತಿದ್ದು, ಇದನ್ನು ₹10 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಖಾಲಿ ನಿವೇಶನಗಳಿಗೆ ನಾಮ ಫಲಕ ಅಳವಡಿ, 6ನೇ ವಾರ್ಡ್‍ನಲ್ಲಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ ಮಳಿಗೆಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿ ಪುರಸಭೆಗೆ ಆದಾಯ ಬರುವಂತ ಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಚರಂಡಿ ಮತ್ತು ಸ್ಲಾಬ್ ಹಾಗೂ ಯು.ಜಿ.ಡಿ ಅಭಿವೃದ್ಧಿ ಪಡಿಸಲು ಸಲಹೆ ನೀಡಿದರು.
ಪುರಸಭೆ ಮಾಜಿ ಸದಸ್ಯ ನಾಗೇಶ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಸರ್ಕಲ್‍ನಿಂದ ಕೋತ್ವಾಲ್ ಚಾವಡಿ-ಎಸ್.ಆರ್.ರಸ್ತೆ ಅಭಿವೃದ್ಧಿ ಪಡಿಸಿ ಹಾಗೂ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ರಸ್ತೆಗಳನ್ನು ದುರಸ್ತಿಪಡಿಸಬೇಕು. ರಾಜ ಕಾಲುವೆಯನ್ನು ಸ್ವಚ್ಛತೆ ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕಾಮಗಾರಿಯನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಪಟ್ಟಣದ ವ್ಯಾಪ್ತಿಯ 17 ಮತ್ತು 18ನೇ ವಾರ್ಡಿನಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಬೇಕು. ರಸ್ತೆ ಚರಂಡಿ, ಪಾರ್ಕ್ ಅಭಿವೃದ್ಧಿ ಕಾಮಗಾರಿ ಮಾಡಬೇಕೆಂದು ಪುರಸಭೆ ಮಾಜಿ ಸದಸ್ಯೆ ನಿರ್ಮಲ ಕೋರಿದರು.
ಮಾಜಿ ನಾಮ ನಿರ್ದೇಶನ ಸದಸ್ಯ ಸಿದ್ದಯ್ಯ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಡಾಂಬರೀಕರಣ, ಸಿ.ಸಿ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಸರ್ಕಲ್‍ನಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಉನ್ನತೀಕರಣ ಮಾಡಿ ಸರ್ಕಲ್ ಅಭಿವೃದಿ ಪಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಮಶಾನಗಳಿಗೆ ಬೀದಿ ದೀಪ, ರಸ್ತೆ, ಕುಡಿಯುವ ನೀರು, ಇತರೆ ಮೂಲ ಸೌಕರ್ಯ ನೀಡಿ ದಲಿತರ ಹಾಗೂ ಹಿಂದುಳಿದ ವರ್ಗಗಳ ಬಡಾವಣೆಯನ್ನು ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸಿದರು.
ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಮಾತನಾಡಿ, ಅಮೃತ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲು ರಸ್ತೆಗಳನ್ನು ಆಗೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತುರ್ತಾಗಿ ದುರಸ್ತಿಪಡಿಸಬೇಕು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಪುರಸಭಾ ಜಾಗವನ್ನು ವಶಪಡಿಸಿ ಮಳಿಗೆಗಳನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಬೆ ಮಾಜಿ ಉಪಾಧ್ಯಕ್ಷರು, ಮಾಜಿ ಸದದಸ್ಯರು, ಎನ್.ಜಿ.ಓ ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹಿರಿಯ ನಾಗರಿಕರು ಹಾಜರಿದ್ದರು.
‘ಹಲವು ಅಭಿವೃದ್ಧಿ ಯೋಜನೆ’
ಪುರಸಭೆ ಮಾಜಿ ಸದಸ್ಯರು ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರ ಆಹವಾಲು ಆಲಿಸಿ ನಂತರ ಮಾತನಾಡಿದ ಮುಖ್ಯಾಧಿಕಾರಿ ಎಸ್.ಶವರಣ ಪಟ್ಟಣವನ್ನು ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ 2026-27ನೇ ಸಾಲಿನ ಆಯವ್ಯಯದಲ್ಲಿ ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ₹45 ಲಕ್ಷ ವೆಚ್ಚದಲ್ಲಿ ಆಧುನಿಕ ಗ್ರಂಥಾಲಯ ನಿರ್ಮಾಣ ₹50 ಲಕ್ಷ ವೆಚ್ಚದಲ್ಲಿ ಈಜುಕೋಳ ನಿರ್ಮಾಣ ₹50 ಲಕ್ಷದಲ್ಲಿ ಆಧುನಿಕ ಜಿಮ್ ₹4 ಕೋಟಿ ವೆಚ್ಚದಲ್ಲಿ ಶ್ವೇತಾದ್ರಿ ಬಡಾವಣೆ ಕೆ.ಎಸ್.ಎನ್ ಮತ್ತು ಜನತಾ ಕಾಲೊನಿಯಲ್ಲಿರುವ ಪಾರ್ಕ್‍ಗಳ ಅಭಿವೃದ್ಧಿ ಮಾಡಲು ಚಿಂತಿಸಲಾಗಿದೆ ಎಂದರು
₹ 3 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ₹4 ಕೋಟಿ ವೆಚ್ಚದಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ ₹50 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಕ್ಕೆ ಸೋಲಾರ್ ಪ್ಲಾಂಟೇಷನ್ ₹20 ಲಕ್ಷದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಕ್ಕೆ ಮಳೆ ನೀರು ಕೊಯ್ಲು ಕಾಮಗಾರಿ ₹7.50 ಕೋಟಿ ವೆಚ್ಚದಲ್ಲಿ ಪುರಸಭಾ ಕಚೇರಿ ಹೊಸ ಕಟ್ಟಡ ನಿರ್ಮಾಣ ಸಂಬಂಧ 2026-27ನೇ ಸಾಲಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಅಂದಾಜಿಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.