ಕೊಳ್ಳೇಗಾಲ: ಬೇಕರಿ, ಹೋಟೆಲ್, ರೆಸ್ಟೋರೆಂಟ್, ಚಿಪ್ಸ್ ಅಂಗಡಿ ಮತ್ತು ಜ್ಯೂಸ್ ಅಂಗಡಿಗಳಲ್ಲಿ ಬುಧವಾರ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 5 ಅಂಗಡಿಗಳಿಗೆದಂಡ ವಿಧಿಸಿದ್ದಾರೆ.
ನಗರಸಭೆ ಪೌರಾಯುಕ್ತ ರಮೇಶ್, ಪರಿಸರ ಎಂಜಿನಿಯರ್ ಪ್ರಸನ್ನ, ಆರೋಗ್ಯ ನಿರೀಕ್ಷಕ ಚೇತನ್ , ಸಿಬ್ಬಂದಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕವರ್, ಕೃತಕ ಬಣ್ಣಗಳು, ಟೆಸ್ಟಿಂಗ್ ಪೌಡರ್ ಮುಂತಾದವುಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಅಂಗಡಿಗಳ ವ್ಯವಹಾರ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
ಪೌರಾಯುಕ್ತ ರಮೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿ, ‘ನಗರದ ಅನೇಕ ಅಂಗಡಿಗಳಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ಚೀಲ, ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಲವು ಅಂಗಡಿಗಳಲ್ಲಿ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲದೆ ಅಡುಗೆ ಮಾಡಿ, ತಿಂಡಿ–ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೋಟೆಲ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ತಿಂಡಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿಕೊಡುವಂತಿಲ್ಲ. ಊಟ, ತಿಂಡಿ ಸೇವಿಸಲು ಬಂದ ಗ್ರಾಹಕರಿಗೆ ತಟ್ಟೆ ಮೇಲೆ ಪ್ಲಾಸ್ಟಿಕ್ ಹಾಳೆ ಬಳಕೆ ಮಾಡುವಂತಿಲ್ಲ ಎಂಬುದಾಗಿ ಸಿಬ್ಬಂದಿಗೆ ತಿಳಿಸಿದ್ದೇವೆ’ ಎಂದು ತಿಳಿಸಿದರು.
‘ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ, ಚಿಪ್ಸ್ ಅಂಗಡಿ ಮಾಲೀಕರಿಗೆತಲಾ ₹5 ಸಾವಿರ ದಂತೆ ₹25 ಸಾವಿರ ದಂಡ ಮೊತ್ತವನ್ನು ತುಂಬಿಸಿದ್ದೇವೆ. ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಕೃತಕ ಬಣ್ಣಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬ ದೂರುಗಳೂ ಬಂದಿವೆ. ಈ ಬಾರಿ, ಕೆಲವೇ ಹೋಟೆಲ್ ಹಾಗೂ ಬೇಕರಿಗಳಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ನಾಳೆಯಿಂದ ಎಲ್ಲಾ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ, ತಪ್ಪಿದ್ದಲ್ಲಿ ದಂಡ ವಿಧಿಸುತ್ತೇವೆ’ ಎಂದು ಪೌರಾಯುಕ್ತರು ತಿಳಿಸಿದರು.
ನಗರಸಭೆಯ ಸ್ಯಾನಿಟರಿ ಸೂಪರ್‌ವೈಸರ್ ಪುನೀತ್, ವಿನೋದ್, ಪ್ರದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
‘ಪರವಾನಗಿ ಕಡ್ಡಾಯ’
ಪ್ರತಿ ಅಂಗಡಿ ಹೋಟೆಲ್ ಮಾಲೀಕರು ಕಡ್ಡಾಯವಾಗಿ ನಗರಸಭೆಯಿಂದ ಅಂಗಡಿ ಪರವಾನಗಿಯನ್ನು ಪಡೆದುಕೊಂಡಿರಬೇಕು. ಇಲ್ಲದಿದ್ದರೆ ಅಂಗಡಿಯನ್ನು ವ್ಯವಹಾರ ಬಂದ್ ಮಾಡುತ್ತೇವೆ. ಪ್ಲಾಸ್ಟಿಕ್ ಕವರ್ ಕೃತಕ ಬಣ್ಣಗಳನ್ನು ಬಳಸಿ ಗ್ರಾಹಕರಿಗೆ ತಿಂಡಿ ತಿನಿಸುಗಳನ್ನು ನೀಡಿದರೆ ಅಂಗಡಿಗಳನ್ನು ಶಾಶ್ವತವಾಗಿ ಬಂದ್ ಮಾಡಲು ನಗರಸಭೆಯಿಂದ ತೀರ್ಮಾನವನ್ನು ಕೈಗೊಂಡಿದ್ದೇವೆ. ನಾಳೆಯಿಂದ ಎರಡು-ಮೂರು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಪೌರಾಯುಕ್ತ ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.