ADVERTISEMENT

ಚಾಮರಾಜನಗರ: ನಗರಸಭೆ ಆಡಳಿತಕ್ಕೆ ‘ಬಿಸಿ’ ಮುಟ್ಟಿಸಿದ ಆಡಳಿತಾಧಿಕಾರಿ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಅಸ್ತ್ರ ಪ್ರಯೋಗ: ಪರವಾನಗಿ ರದ್ದು ಎಚ್ಚರಿಕೆ ನೀಡಿದ ಡಿಸಿ

ಎಚ್.ಬಾಲಚಂದ್ರ
Published 24 ನವೆಂಬರ್ 2025, 2:06 IST
Last Updated 24 ನವೆಂಬರ್ 2025, 2:06 IST
ಚಾಮರಾಜನಗರ ನಗರಸಭೆ ಕಚೇರಿ
ಚಾಮರಾಜನಗರ ನಗರಸಭೆ ಕಚೇರಿ   

ಚಾಮರಾಜನಗರ: ಸಾರ್ವಜನಿಕರಿಂದ ನಿರಂತರ ಟೀಕೆಗೆ ಗುರಿಯಾಗಿದ್ದ ಚಾಮರಾಜನಗರ ನಗರಸಭೆ ಆಡಳಿತ ವ್ಯವಸ್ಥೆಗೆ ನೂತನ ಆಡಳಿತಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಬಿಸಿ ಮುಟ್ಟಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂ‌ಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಚೆಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದು, ಅದರಂತೆ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆಡಳಿತ ವ್ಯವಸ್ಥೆಯ ಚಿತ್ರಣ ಬದಲಿಸಲು ಮುಂದಾಗಿದ್ದಾರೆ.

ತೆರಿಗೆ ಸಂಗ್ರಹಕ್ಕೆ ಒತ್ತು: ಚಾಮರಾಜನಗರ ನಗರಸಭೆ ತೆರಿಗೆ ಸಂಗ್ರಹದಲ್ಲಿ ತೀರಾ ಹಿಂದುಳಿದಿದ್ದು, ಪ್ರಸ್ತುತ ವಾರ್ಷಿಕ ಸಂಗ್ರಹವಾಗುವ ತೆರಿಗೆಯು ಅಲ್ಲಿನ ಸಿಬ್ಬಂದಿಗೆ ವೇತನ ಹಾಗೂ ಖರ್ಚುಗಳನ್ನು ನಿಭಾಯಿಸಲು ಸಾಲುತ್ತಿಲ್ಲ. ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬಾಕಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದೆ.

ADVERTISEMENT

ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳು ಹಾಗೂ ಉದ್ದಿಮೆದಾರರಿಗೆ ತಕ್ಷಣ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಪಟ್ಟಿಯನ್ನು ಸಿದ್ಧಪಡಿಸಿ ತತ್‌ಕ್ಷಣದಲ್ಲಿ ಶೇ 50 ತೆರಿಗೆ ಪಾವತಿಸಬೇಕು ಎಂದು ನೋಟಿಸ್ ನೀಡಲಾಗುತ್ತಿದೆ.

ಬಾಕಿ ತೆರಿಗೆ ಪಾವತಿಸಲು ವಿಫಲವಾದರೆ ಉದ್ದಿಮೆ ಪರವಾನಗಿ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಅದರಂತೆ, ತೆರಿಗೆ ಸುಸ್ತಿದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಸರ್ಕಾರಿ ಕಚೇರಿಗಳಿಂದಲೂ ತೆರಿಗೆ ಬಾಕಿ ವಸೂಲಿ ಮಾಡಲಾಗುವುದು ಎಂದು ನಗರಸಭೆಯ ಪ್ರಭಾರ ಪೌರಾಯುಕ್ತ ಪ್ರಕಾಶ್ ಮಾಹಿತಿ ನೀಡಿದರು. 

ಕಳ್ಳಾಟಕ್ಕೆ ಬ್ರೇಕ್‌: ನಗರಸಭೆಯಲ್ಲಿ ಧೀರ್ಘಕಾಲೀನ ರಜೆಯಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಎಚ್ಚೆತ್ತುಕೊಳ್ಳದ ಅಧಿಕಾರಿಗಳಿಗೆ ‘ವರ್ಗಾವಣೆ ಹಾಗೂ ಅಮಾನತು ಶಿಕ್ಷೆ’ ಕಾದಿದೆ. ಪ್ರತಿಯೊಬ್ಬರೂ ಕಚೇರಿಗೆ ಬಂದು ಬಯೋಮೆಟ್ರಿಕ್‌ ಹಾಜರಾತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ನಗರಸಭೆಯ ಹಿರಿಯ ಅಧಿಕಾರಿಗಳು ತಿಳಿಸಿದರು.

ವಾರ್ಡ್‌ಗಳಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಸಮರ್ಪಕವಾಗಿ ನಡೆಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ, ವಾರಕ್ಕೆ 5 ದಿನ ಬಡಾವಣೆಗಳಿಗೆ ಭೇಟಿ ನೀಡಿ ನಗರದ ಸ್ವಚ್ಛತೆಯ ಉಸ್ತುವಾರಿ ನೋಡಿಕೊಳ್ಳಬೇಕು. ದೂರುಗಳು ಕೇಳಿಬಂದ ಕೂಡಲೇ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದಾರೆ.

ನಗರದಲ್ಲಿ ಹೆಚ್ಚು ಕಸ ತಂದು ಸುರಿಯಲಾಗುತ್ತಿರುವ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಅವುಗಳ ಮೇಲೆ ನಿಗಾ ಇರಿಸಬೇಕು. ಕಸ ತಂದು ಸುರಿಯುವ ಸಾರ್ವಜನಿಕರಿಗೆ ಎಚ್ಚರಿಕೆ ಹಾಗೂ ದಂಡ ವಿಧಿಸಬೇಕು. ಅದಕ್ಕೂ ಮುನ್ನ ಎಲ್ಲ ಬಡಾವಣೆಗಳಿಂದ ಪ್ರತಿನಿತ್ಯ ಕಸ ಸಂಗ್ರಹ ಮಾಡಬೇಕು ಎಂದು ಆರೋಗ್ಯ ಶಾಖೆಯ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ.

ಇ ಖಾತಾ ವಿತರಣೆಗೆ ವೇಗ ನೀಡಬೇಕು, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಸರ್ಕಾರದ ಸೇವೆಗಳನ್ನು ಪಡೆಯಲು ಕಚೇರಿಗೆ ಬರುವ ನಾಗರಿಕರನ್ನು ಅಲೆಸದೆ ಸೌಲಭ್ಯ ಒದಗಿಸಬೇಕು ಎಂದು ಈಚೆಗೆ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದ್ದಾರೆ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಪ್ರಕಾಶ್ ತಿಳಿಸಿದ್ದಾರೆ.

ಸಿ.ಟಿ.ಶಿಲ್ಪಾನಾಗ್‌

ಆಡಳಿತಾಧಿಕಾರಿಗಳ ನೇಮಕ

ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಗೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಸರ್ಕಾರ ನಿಯೋಜಿಸಿದೆ. ಹಾಗೆಯೇ ಗುಂಡ್ಲುಪೇಟೆ ಪುರಸಭೆಗೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಹಾಗೂ ಯಳಂದೂರು ಪಟ್ಟಣ ಪಂಚಾಯಿತಿಗೆ ಯಳಂದೂರು ತಹಶೀಲ್ದಾರ್ ಎಸ್.ಎಲ್‌.ನಯನಾ ಅವರನ್ನು ನಿಯೋಜಿಸಲಾಗಿದೆ.

ಹಂತ ಹಂತವಾಗಿ ಸಮಸ್ಯೆ ಇತ್ಯರ್ಥ

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹ ವಿಲೇವಾರಿ ಶುಚಿತ್ವ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಸ್ವಚ್ಛತೆ ಕಸ ಸಂಗ್ರಹ ವಿಲೇವಾರಿ ಸುಸೂತ್ರವಾಗಿ ನಡೆಯವಂತೆ ಕ್ರಮ ವಹಿಸಲಾಗಿದೆ. ನಗರದ ಶುಚಿತ್ವಕ್ಕೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು. –ಸಿ.ಟಿ.ಶಿಲ್ಪಾನಾಗ್ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.