ADVERTISEMENT

ನಿಜಲಿಂಗ ಸ್ವಾಮೀಜಿ ಪೀಠತ್ಯಾಗ: ಆಧಾರ್‌ನಿಂದ ‘ನಿಜ’ಬಯಲು

ಗುಂಡ್ಲುಪೇಟೆ ಗುರುಮಲ್ಲೇಶ್ವರ ದಾಸೋಹ ಶಾಖಾ ಮಠ * ಪೂರ್ವಾಶ್ರಮದ ಹೆಸರು ಮಹಮ್ಮದ್‌ ನಿಸಾರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 22:00 IST
Last Updated 4 ಆಗಸ್ಟ್ 2025, 22:00 IST
ನಿಜಲಿಂಗ ಸ್ವಾಮೀಜಿ (ಮಹಮ್ಮದ್ ನಿಸಾರ್), ಗುರುಮಲ್ಲೇಶ್ವರ ದಾಸೋಹ ಶಾಖಾಮಠ
ನಿಜಲಿಂಗ ಸ್ವಾಮೀಜಿ (ಮಹಮ್ಮದ್ ನಿಸಾರ್), ಗುರುಮಲ್ಲೇಶ್ವರ ದಾಸೋಹ ಶಾಖಾಮಠ   

ಗುಂಡ್ಲುಪೇಟೆ (ಚಾಮರಾಜನಗರ): ಪೂರ್ವಾಶ್ರಮದಲ್ಲಿ ಮುಸ್ಲಿಂ ಆಗಿದ್ದರು ಎಂಬ ವಿಷಯ ತಿಳಿದು ಭಕ್ತರು ವಿರೋಧಿಸಿದ್ದರಿಂದ, ತಾಲ್ಲೂಕಿನ ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹದ ಶಾಖಾ ಮಠದ ನಿಜಲಿಂಗ ಸ್ವಾಮೀಜಿ ಅವರು ಪೀಠತ್ಯಾಗ ಮಾಡಿದ್ದಾರೆ.

ಬಸವತತ್ವಕ್ಕೆ ಮನಸೋತಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಮಹಮ್ಮದ್ ನಿಸಾರ್ (22) ನಿಜಲಿಂಗ ಸ್ವಾಮೀಜಿಯಾಗಿ ಹೆಸರು ಬದಲಾಯಿಸಿಕೊಂಡು ಶಾಖಾಮಠದ ಸ್ವಾಮೀಜಿಯಾಗಿದ್ದರು.

ಈಚೆಗೆ ಭಕ್ತರು ಸ್ವಾಮೀಜಿ ಮೊಬೈಲ್ ಫೋನ್ ಗಮನಿಸುವಾಗ ಆಧಾರ್ ಕಾರ್ಡ್‌ನಲ್ಲಿ ಮಹಮ್ಮದ್ ನಿಸಾರ್ ಎಂದು ಇದ್ದದ್ದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದರು. ಮುಖಂಡರು, ಪೊಲೀಸರು ವಿಚಾರಿಸಿದಾಗ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದಾಗಿ ಸ್ವಾಮೀಜಿ ಸಮಜಾಯಿಷಿ ನೀಡಿದ್ದರು.

ADVERTISEMENT

ಆದರೆ, ‘ಪೂರ್ವಾಶ್ರಮದ ಧರ್ಮ ಮುಚ್ಚಿಟ್ಟಿದ್ದರಿಂದ ಪೀಠಾಧಿಪತಿಯಾಗಿ ಮುಂದುವರಿಯುವುದು ಸರಿಯಲ್ಲ ಎಂದು ಎಲ್ಲರೂ ಒತ್ತಡ ಹಾಕಿದ್ದರು. ಹೀಗಾಗಿ ಸ್ವಾಮೀಜಿ ಪೀಠತ್ಯಾಗ ಮಾಡಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ಮೂಲತಃ ಚೌಡಹಳ್ಳಿಯ, ಸದ್ಯ ‌ಆಸ್ಟ್ರೇಲಿಯದಲ್ಲಿ ನೆಲಸಿರುವ ಮಹದೇವ ಪ್ರಸಾದ್ ಎಂಬವರು ಮಠಕ್ಕೆ ಜಾಗ ನೀಡಿ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ವರ್ಷದ ಹಿಂದೆ ಮಠ ಲೋಕಾರ್ಪಣೆಗೊಂಡಿತ್ತು. ಅಕ್ಕಮಹಾದೇವಿ ಮಾತಾಜಿ ಅವರು ಪೀಠಾಧಿಪತಿಯಾಗಿದ್ದರು. ಕಾರಣಾಂತರದಿಂದ ಅವರು ಪೀಠತ್ಯಾಗ ಮಾಡಿದ ಬಳಿಕ ನಿಜಲಿಂಗ ಸ್ವಾಮೀಜಿ ಪೀಠಾಧಿಪತಿಯಾಗಿ ನಿಯುಕ್ತಿಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.