ADVERTISEMENT

30 ಕಾಯಂ ಬೋಧಕರ ನೇಮಕಾತಿ: ಪ್ರಸ್ತಾವ ಕಳುಹಿಸಲು ನಿರ್ಣಯ

ಡಾ.ಬಿ.ಆರ್.ಅಂಬೇಡ್ಕರ್‌ ಕೇಂದ್ರದಲ್ಲಿ ಮೈಸೂರು ವಿವಿ ಸಿಂಡಿಕೇಟ್‌ ಸಭೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 15:30 IST
Last Updated 23 ಫೆಬ್ರುವರಿ 2021, 15:30 IST
ಪ್ರೊ.ಜಿ.ಹೇಮಂತ್‌ ಕುಮಾರ್‌
ಪ್ರೊ.ಜಿ.ಹೇಮಂತ್‌ ಕುಮಾರ್‌   

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರಕ್ಕೆ 30 ಮಂದಿ ಕಾಯಂ ಬೋಧಕರನ್ನು ನೇಮಕಾತಿ ಮಾಡಲೇಬೇಕು ಎಂದು ಸರ್ಕಾರಕ್ಕೆ ಶಾಸನ ರೂಪದ (ಸ್ಟ್ಯಾಚ್ಯೂಟ್‌) ಪ್ರಸ್ತಾವ ಸಲ್ಲಿಸುವ ನಿರ್ಣಯವನ್ನು ವಿವಿ ಸಿಂಡಿಕೇಟ್‌ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ವಿವಿ ಸಿಂಡಿಕೇಟ್‌ ಸಭೆಯ ನಂತರ ಮಾತನಾಡಿದ ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಅವರು, ‘ಈ ಕೇಂದ್ರಕ್ಕೆ ಕನಿಷ್ಠ 30 ಕಾಯಂ ಬೋಧಕರ ಅವಶ್ಯಕತೆ ಇದೆ. ಈಗಾಗಲೇ ನಾವು ಎರಡು ಬಾರಿ ಸರ್ಕಾರಕ್ಕೆ ಶಾಸನ ರೂಪದ ಪ್ರಸ್ತಾವ ಕಳುಹಿಸುತ್ತಿದ್ದೆವು. ಸರ್ಕಾರ ಅದನ್ನು ವಾಪಸ್‌ ಕಳುಹಿಸಿದೆ. ಆದರೆ, ನಮಗೆ ಕಾಯಂ ಬೋಧಕರು ಅಗತ್ಯವಾಗಿ ಬೇಕಾಗಿದ್ದಾರೆ. ಕಟ್ಟಡಗಳು ಹಾಗೂ ಇತರ ಸೌಲಭ್ಯಗಳಿದ್ದರೂ, ಕಾಯಂ ಬೋಧಕ ಸಿಬ್ಬಂದಿ ಇಲ್ಲದಿದ್ದರೆ ಅದು ಸರಿಯಾಗುವುದಿಲ್ಲ’ ಎಂದು ಹೇಳಿದರು.

‘ಉನ್ನತ ಶಿಕ್ಷಣ ಸಚಿವರ ಜೊತೆ ಈಗಾಗಲೇ ಈ ಬಗ್ಗೆ ಮಾತನಾಡಿದ್ದೇನೆ. ಕೋವಿಡ್‌ ಕಾರಣದಿಂದ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಗಡಿ ಹಾಗೂ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, 30 ಕಾಯಂ ಬೋಧಕರನ್ನು ನೇಮಕಾತಿ ಮಾಡುವುದು ನಮ್ಮ ಉದ್ದೇಶ’ ಎಂದು ಅವರು ಹೇಳಿದರು.

ADVERTISEMENT

ಸ್ವಾಯತ್ತತೆ ಮುಂದುವರಿಕೆ: ವಿವಿ ವ್ಯಾಪ್ತಿಯಲ್ಲಿ ಬರುವ ಒಂಬತ್ತು ಕಾಲೇಜುಗಳ ಸ್ವಾಯತ್ತತೆಯನ್ನು ಮುಂದುವರಿಸಲೂ ಸಭೆ ತೀರ್ಮಾನಿಸಿದೆ.

‘ನಮ್ಮ ವಿವಿ ವ್ಯಾಪ್ತಿಯಲ್ಲಿ ಬರುವ ಒಂಬತ್ತು ಸ್ವಾಯತ್ತ ಕಾಲೇಜುಗಳಿಗೆ ಪರಾಮರ್ಶನ ಸಮಿತಿ ಭೇಟಿ ನೀಡಿ ವರದಿ ನೀಡಿದೆ. ಸಭೆಯಲ್ಲಿ ಅದನ್ನು ಮಂಡಿಸಲಾಗಿದ್ದು, ಮುಂದಿನ ವರ್ಷಕ್ಕೆ ಸ್ವಾಯತ್ತತೆ ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಕುಲಪತಿ ಅವರು ಮಾಹಿತಿ ನೀಡಿದರು.

ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಸರ್ಕಾರಿ ಮಹಾವಿದ್ಯಾಲಯ ಕಾಲೇಜು, ಮೈಸೂರಿನ ಬಿ.ಎನ್‌.ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮತ್ತು ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್‌ ಮಹಿಳಾ ಕಾಲೇಜು, ಮೈಸೂರಿನ ಬನ್ನಿಮಂಟಪದಲ್ಲಿರುವ ಸೇಂಟ್‌ ಫಿಲೋಮಿನಾ ಕಾಲೇಜು, ಮೈಸೂರು ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜುಗಳ ಸ್ವಾಯತ್ತತೆ ಮುಂದುರಿಸಲಾಗಿದೆ.

₹250 ಕೋಟಿಗೆ ಬೇಡಿಕೆ: ‘ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಗೆ ₹340 ಕೋಟಿ ಮೊತ್ತದ ಬಜೆಟ್‌ ಸಿದ್ಧಪಡಿಸಲಾಗಿದೆ. ₹250 ಕೋಟಿಗಾಗಿ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ₹90 ಕೋಟಿಯನ್ನು ಶುಲ್ಕದ ಮೂಲಕ ಸಂಗ್ರಹಿಸುತ್ತೇವೆ. ವೇತನ ಮತ್ತು ಪಿಂಚಣಿಗಾಗಿ ₹250 ಕೋಟಿ ಅಗತ್ಯವಿದ್ದು, ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು’ ಎಂದು ಹೇಳಿದರು.

ಕುಲಸಚಿವ ಆರ್‌.ಶಿವಪ್ಪ, ಮೌಲ್ಯಮಾಪನ ಕುಲಸಚಿವ ಜ್ಞಾನ ಪ್ರಕಾಶ್‌, ಹಣಕಾಸು ಅಧಿಕಾರಿ ಪ್ರೊ.ಟಿ.ಎಸ್‌.ದೇವರಾಜ ಮತ್ತು ಸಿಂಡಿಕೇಟ್‌ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಎರಡನೇ ಬಾರಿ: ಚಾಮರಾಜನಗರದ ಹೊರವಲಯದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರದಲ್ಲಿ ವಿವಿ ಸಿಂಡಿಕೇಟ್‌ ಸಭೆ ನಡೆಯುತ್ತಿರುವುದು ಇದು ಎರಡನೇ ಬಾರಿ.

‘ಪ್ರತ್ಯೇಕ ವಿ.ವಿ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು’

ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೇಮಂತ್‌ ಕುಮಾರ್‌ ಅವರು, ‘ಅಂತಹ ಚರ್ಚೆ ನಡೆಯುತ್ತಿದೆ. ಆದರೆ, ಈ ಬಗ್ಗೆ ನಾವು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕು. ಹಿಂದೊಮ್ಮೆ ಉನ್ನತ ಶಿಕ್ಷಣ ಸಚಿವರು ಜಿಲ್ಲೆಗೊಂದು ವಿವಿ ಮಾಡಿದರೆ ಹೇಗೆ ಎಂದು ಕೇಳಿದ್ದರು. ಒಳ್ಳೆಯ ಯೋಚನೆ ಎಂದು ಹೇಳಿದ್ದೆ’ ಎಂದರು.

‘ಪ್ರತ್ಯೇಕ ವಿವಿ ಮಾಡಬೇಕು ಎಂದು ನಾವು ಪ್ರಸ್ತಾವ ಸಲ್ಲಿಸಲು ಆಗುವುದಿಲ್ಲ. ಸರ್ಕಾರವೇ ಈ ಬಗ್ಗೆ ಮನಸ್ಸು ಮಾಡಬೇಕು. ಸರ್ಕಾರ ಸಲಹೆ ಕೇಳಿದರೆ ನಾವು ನೀಡಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಸಾಕಷ್ಟು ಜಾಗ ಇದೆ. ಶೈಕ್ಷಣಿಕ ಸಾಧನೆಯೂ ಉತ್ತಮವಾಗಿದೆ. ಹೆಚ್ಚು ಹೆಣ್ಣು ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಗಡಿ ಜಿಲ್ಲೆಯಾಗಿರುವುದರಿಂದ ಇಲ್ಲಿಗೆ ಪ್ರತ್ಯೇಕ ವಿವಿ ಸ್ಥಾಪನೆಯಾದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

₹5 ಕೋಟಿ ಸಿಕ್ಕಿದರೆ ಶೀಘ್ರ ವಿಜ್ಞಾನ ಬ್ಲಾಕ್‌

ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ಬ್ಲಾಕ್‌ ನಿರ್ಮಾಣಕ್ಕೆ ₹5 ಕೋಟಿ ಮಂಜೂರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಲಪತಿ ಅವರು, ‘₹5 ಕೋಟಿ ಮಂಜೂರಾಗಿರುವುದು ನಿಜ. ಜೆಡಿಎಸ್‌ ಸರ್ಕಾರದ ಸಮಯದಲ್ಲಿ ಆ ಹಣವನ್ನು ಭೂ ಸೇನಾ ನಿಗಮಕ್ಕೆ ವರ್ಗಾಯಿಸಲಾಗಿದೆ. ತಾಂತ್ರಿಕ ಕಾರಣದಿಂದ ಟೆಂಡರ್‌ ಕರೆಯುವುದಕ್ಕೆ ಆಗಿಲ್ಲ. ಆ ಹಣ ಹಾಗೆಯೇ ಇದೆ. ಅದನ್ನು ನಮಗೆ ಕೊಟ್ಟರೆ, ವಿವಿಯಿಂದಲೂ ಸ್ವಲ್ಪ ದುಡ್ಡು ಹಾಕಿ ವಿಜ್ಞಾನ ಬ್ಲಾಕ್‌ ನಿರ್ಮಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.