ADVERTISEMENT

ಕೆರೆ ಒಡಲು ಸೇರುತ್ತಿದೆ ನಗರ ತ್ಯಾಜ್ಯ

ರಾಮಸಮುದ್ರದ ಸಮೀಪದ ದೊಡ್ಡರಾಯಪೇಟೆ ಕೆರೆಯ ಅಂಗಳಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 13:46 IST
Last Updated 2 ಜೂನ್ 2019, 13:46 IST
ದೊಡ್ಡರಾಯಪೇಟೆ ಕೆರೆ ಸಮೀಪದಲ್ಲೇ ಕಸ ಬಿಸಾಕಲಾಗಿದೆ
ದೊಡ್ಡರಾಯಪೇಟೆ ಕೆರೆ ಸಮೀಪದಲ್ಲೇ ಕಸ ಬಿಸಾಕಲಾಗಿದೆ   

ಚಾಮರಾಜನಗರ: ಕೆರೆಗಳನ್ನು ರಕ್ಷಿಸುವ ಉದ್ದೇಶದಿಂದ ಕೆರೆಯ ಆವರಣದಲ್ಲಿ ಕಸ ಸುರಿಯಬಾರದು ಎಂಬ ನಿಯಮ ಇದೆ. ಆದರೆ, ಚಾಮರಾಜನಗರ ನಗರದ ತ್ಯಾಜ್ಯ ತಾಲ್ಲೂಕಿನ ದೊಡ್ಡರಾಯಪೇಟೆ ಕೆರೆಯ ಒಡಲು ಸೇರುತ್ತಿದೆ.

ನಗರದ ರಾಮಸಮುದ್ರದ ಮಹಿಳಾ ಪೊಲೀಸ್‌ ಠಾಣೆಯಿಂದ ಕೂಗಳತೆ ದೂರದಲ್ಲಿರುವ ದೊಡ್ಡರಾಯಪೇಟೆ ಕೆರೆ ಸಮೀಪದಲ್ಲೇ ನಗರ ನಿವಾಸಿಗಳು ಕಸಗಳನ್ನು ಹಾಕುತ್ತಿದ್ದಾರೆ.

‘ನಗರಸಭೆ ಆಡಳಿತವು ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿದೆ. ಕಸ ಸಂಗ್ರಹಿಸುವ ಸಿಬ್ಬಂದಿ ಒಂದೆರಡು ದಿನ ಬಾರದಿದ್ದರೆ ನಿವಾಸಿಗಳು ಕೆರೆಗೆ ಕಸ ಸುರಿದು ಹೋಗುತ್ತಾರೆ’ ಎಂದು ರಾಮಸಮುದ್ರ ನಿವಾಸಿ ಮಂಜುನಾಥ್‌ ಹೇಳಿದರು.

ADVERTISEMENT

ಕಲುಷಿತ: ಸದ್ಯ ಕೆರೆಯಲ್ಲಿ ನೀರಿಲ್ಲ.ಮಳೆಗಾಲ ಆರಂಭವಾಗಿ ಕೆರೆ ತುಂಬಿದಾಗ ಈಗ ಎಲ್ಲಿ ಎಸೆಯಲಾಗಿರುವ ಕಸ ನೀರಿಗೆ ಸೇರುವುದರಿಂದ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಕೆರೆ ಭರ್ತಿಯಾದಾಗ ಸಾಕು ಪ್ರಾಣಿಗಳು, ಪಕ್ಷಿಗಳು ನೀರು ಕುಡಿಯಲು ಬರುತ್ತವೆ. ಕಲುಷಿತ ನೀರನ್ನು ಕುಡಿದರೆ ಅವುಗಳಿಗೂ ಸಮಸ್ಯೆಯಾಗಲಿದೆ‌.

ರೋಗದ ಭೀತಿ: ‘ತ್ಯಾಜ್ಯದೊಂದಿಗೆ ಮಳೆ ನೀರು ಸೇರಿದರೆ ಕೆರೆ ಸುತ್ತಲೂ ದುರ್ವಾಸನೆ ಹೆಚ್ಚಲಿದೆ. ಕೊಳೆದ ಕಲ್ಮಶದಿಂದಾಗಿ ರೋಗ ಭೀತಿಯೂ ಎದುರಾಗಲಿದೆ’ ಎಂಬುದು ಈ ಭಾಗದ ಜನರ ಅಭಿಪ್ರಾಯ.

‘ತ್ಯಾಜ್ಯ ಕೊಳೆತರೆ ಹಂದಿ, ನಾಯಿಗಳ ಹಾವಳಿ ಹೆಚ್ಚಲಿದೆ. ಕೆರೆಯ ಅಂಗಳದಲ್ಲಿರುವ ತ್ಯಾಜ್ಯ ವಿಲೇವಾರಿಗೆ ನಗರಸಭೆ ಆಡಳಿತವೇ ಮುಂದಾಗಬೇಕು. ಇಲ್ಲವಾದರೆ, ಕೂಡ್ಲೂರು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು’ ಎಂದು ರಾಮಸಮುದ್ರ ನಿವಾಸಿ ಮಹದೇವಪ್ಪ ಅವರು ಒತ್ತಾಯಿಸಿದರು.

ಗಮನಕ್ಕೆ ಬಂದಿಲ್ಲ: ‘ಕೆರೆ ಅಂಗಳದಲ್ಲಿ ತ್ಯಾಜ್ಯ ಸಂಗ್ರಹವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಖುದ್ದು ಭೇಟಿ ನೀಡಿ ಕಸ ಯಾರು ಹಾಕುತ್ತಿದ್ದಾರೆ ಎಂದು ಪರಿಶೀಲಿಸಿ ಅವರಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಕೊಳಚೆ ನೀರು ಕೆರೆಗೆ’
ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ಕೆರೆಗೆ ಸೇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕೊಳಚೆ ನೀರು ಯಾವುದು ಮಳೆ ನೀರು ಯಾವುದು ಎಂಬುದು ಗೊತ್ತಾಗುವುದಿಲ್ಲ. ಎರಡೂ ಬೆರೆತು ಕಾಲುವೆ ಮೂಲಕ ಹರಿಯುತ್ತದೆ’ ಎಂದು ಶಿವಕುಮಾರ್‌ ಹೇಳಿದರು.

ಅಗತ್ಯ ಕ್ರಮವಹಿಸಬೇಕು: ‘ದೊಡ್ಡರಾಯಪೇಟೆ ಕೆರೆಗೆ ಈಗ ನೀರು ಬಂದಿಲ್ಲ. ಆದರೆ, ಉತ್ತಮ ಮಳೆಯಾಗಿ ನೀರು ಹರಿಯುವ ಮುನ್ನವೇ ತ್ಯಾಜ್ಯ ವಿಲೇವಾರಿಗೆ ಕೂಡ್ಲೂರು ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಆಡಳಿತ ಅಗತ್ಯಕ್ರಮ ವಹಿಸಬೇಕು. ಇಲ್ಲವಾದರೆ, ತ್ಯಾಜ್ಯದ ರಾಶಿ ಹೆಚ್ಚಾಗಿ ಪರಿಸರ ಅನೈರ್ಮಲ್ಯಉಂಟಾಗುತ್ತದೆ. ವಾತಾವರಣ ಹದಗೆಡುತ್ತದೆ’ ಎಂದುದೊಡ್ಡರಾಯಪೇಟೆ ಗ್ರಾಮದ ನಿವಾಸಿ ಮಾದೇವ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.