ಚಾಮರಾಜನಗರ: ನಗರ, ಪಟ್ಟಣ ವ್ಯಾಪ್ತಿಯ ಹೊಸ ಬಡಾವಣೆಗಳು ಸಮರ್ಪಕ ರಸ್ತೆ, ಚರಂಡಿ ಸಹಿತ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಪರಿಣಾಮ ಈ ವರ್ಷವೂ ಮಳೆಗಾಲದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಜಿಲ್ಲೆಯಲ್ಲಿ ಮಳೆ ನಿಧಾನವಾಗಿ ಬಿರುಸು ಪಡೆದುಕೊಳ್ಳುತ್ತಿದ್ದು ಆರಂಭದಲ್ಲಿಯೇ ಜನಜೀವನ ಅಸ್ತವ್ಯಸ್ತವಾಗುತ್ತಿದೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಹೊಸ ಬಡಾವಣೆಗಳ ಸ್ಥಿತಿ ಶೋಚನೀಯವಾಗಿದೆ. ನಗರಸಭೆಯ ವ್ಯಾಪ್ತಿ ವಿಸ್ತಾರವಾಗುತ್ತಿದ್ದು ನಗರಕ್ಕೆ ಹೊಂದಿಕೊಂಡಂತೆ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ, ಸ್ಥಳೀಯ ಆಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ರಸ್ತೆ, ಚರಂಡಿ ಸಹಿತ ಮೂಲಸೌಕರ್ಯಗಳನ್ನು ಒದಗಿಸದಿರುವುದರಿಂದ ಪ್ರತಿ ಮಳೆಗಾಲದಲ್ಲಿ ನಾಗರಿಕರು ಸಮಸ್ಯೆ ಅನುಭವಿಸುವಂತಾಗಿದೆ.
ವಿವೇಕ ನಗರ, ಪ್ರಗತಿನಗರ, ಕರಿನಂಜನಪುರ ಹೊಸ ಬಡಾವಣೆ, ಕಲ್ಯಾಣ ಬಸವೇಶ್ವರ ನಗರ, ಬುದ್ಧ ನಗರ, ಎಲ್‌ಐಸಿ ಕಾಲೋನಿ, ಪ್ರಶಾಂತ ನಗರ, ಸೇಂಟ್ ಫ್ರಾನ್ಸಿಸ್ ಶಾಲೆ ಸುತ್ತಮುತ್ತಲಿನ ಜನವಸತಿ ಪ್ರದೇಶ, ಚೆನ್ನಾಪುರದ ಮೋಳೆ ರಸ್ತೆಯ ಆಸುಪಾಸಿನ ಬಡಾವಣೆ, ಸೋಮವಾರ ಪೇಟೆ, ಸೋಮಣ್ಣ ಲೇಔಟ್, ಕ್ರಿಶ್ಚಿಯನ್ ಬಡಾವಣೆಗಳಿಗೆ ಸಮರ್ಪಕ ರಸ್ತೆಗಳು ಇಲ್ಲದೆ ನಾಗರಿಕರು ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಮಳೆ ಬಿರುಸಾದರೆ ಬಡಾವಣೆಯ ಮುಖ್ಯರಸ್ತೆಯ ಸಂಪರ್ಕವೇ ಕಡಿತವಾಗುತ್ತದೆ. ನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಬಡಾವಣೆಯ ಜನರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಾರೆ. ಮಣ್ಣಿನ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.
ಭೀತಿ ಹುಟ್ಟಿಸಿದ ಮಳೆಗಾಲ:
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಪ್ರತಿ ಮಳೆಗಾಲ ನಾಗರಿಕರಿಗೆ ಸಂಕಷ್ಟ ತಂದೊಡ್ಡುತ್ತದೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಾರೆ. ಮಳೆಗೆ ಮಣ್ಣಿನ ರಸ್ತೆಗಳು ಕೆಸರು ಗದ್ದೆಗಳಾಗಿ ಪರಿವರ್ತನೆಗೊಂಡು ಜನ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ.
ಚರಂಡಿಗಳು ತುಂಬಿ ತ್ಯಾಜ್ಯ ರಸ್ತೆಗೆ ಹರಿದು ಅಸಹನೀಯ ವಾತಾವರಣ ನಿರ್ಮಾಣವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಸ್ಥಳೀಯ ಆಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳದಿರುವುದರಿಂದ ಸಮಸ್ಯೆ ಗಂಭೀರವಾಗುತ್ತದೆ.
ಹೊಸ ಬಡಾವಣೆಗಳಲ್ಲಿ ನರಕಯಾತನೆ:
ನಗರದ ಹೊಸ ಬಡಾವಣೆಗಳಲ್ಲಿ ವಾಸವಿರುವ ನಾಗರಿಕರು ಪ್ರತಿ ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತಾರೆ. ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಚರಂಡಿ ಹಾಗೂ ರಸ್ತೆ ಇಲ್ಲದೆ ಮಳೆಯ ನೀರಿನಲ್ಲೇ ನಿವಾಸಿಗಳು ನಡೆಯಬೇಕಾಗಿದೆ. ಮನೆಯಿಂದ ಹೊರಹೋಗಲು, ಮನೆಗೆ ಮರಳಲು ಹರಸಾಹಸ ಮಾಡಬೇಕು.
ಚರಂಡಿ ಸೌಲಭ್ಯ ಇಲ್ಲದೆ ರಸ್ತೆಗೆ ತ್ಯಾಜ್ಯ ಹರಿಯುತ್ತಿದ್ದು ನಗರಸಭೆಯವರು ಗಮನಹರಿಸುತ್ತಿಲ್ಲ. ಪ್ರತಿ ಮಳೆಗಾಲದಲ್ಲಿ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಗೋಳು ತಪ್ಪುವುದಿಲ್ಲ. ಬಡಾವಣೆಗಳಿಗೆ ಕನಿಷ್ಠ ರಸ್ತೆ, ಚರಂಡಿ ಸಹಿತ ಮೂಲಸೌಕರ್ಯ ನೀಡಬೇಕು ಎಂದು ಒತ್ತಾಯಿಸುತ್ತಾರೆ ಶಿವಕುಮಾರ ಸ್ವಾಮೀಜಿ ಬಡಾವಣೆಯ ನಿವಾಸಿ ಶಿವರಾಜು.
ಜಲಾವೃತವಾಗುವ ರಸ್ತೆಗಳು:
ನಗರದ ಪ್ರಮುಖ ರಸ್ತೆಗಳಾದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜಕುಮಾರ್ ರಸ್ತೆ ಮಳೆಗಾಲದಲ್ಲಿ ಕೆರೆಯಂತಾಗುತ್ತದೆ. ಸಾರ್ವಜನಿಕರು ವಾಹನ ಸವಾರರು ಜಲಾವೃತಗೊಂಡ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಸಾಗಬೇಕು. ಪ್ರಮುಖ ರಸ್ತೆಗಳ ಒಳ ಚರಂಡಿ ವ್ಯವಸ್ಥೆ ಹಾಳಾಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆ ಗಂಭೀರವಾಗುತ್ತದೆ ಎನ್ನುತ್ತಾರೆ ದಿಲ್ ಖುಷ್ ಟೀ ಸ್ಟಾಲ್ ಮಾಲೀಕ ಕಲೀಂ ಉಲ್ಲಾ.
ಕರೆಯಂತಾಗುವ ರಸ್ತೆ:
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಕೃತಕ ಕೆರೆಗಳು ನಿರ್ಮಾಣವಾಗಿದ್ದು ಬೊಮ್ಮಲಾಪುರ ಭಾಗದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಶಿವಪುರ ಗ್ರಾಮದಿಂದ ಬೊಮ್ಮಲಪುರ ಸಂಚರಿಸುವ ರಸ್ತೆಯ ಮಾರ್ಗ ಮಧ್ಯೆ ಡಾಂಬರೀಕರಣವಾಗದೆ 300 ಮೀ ಉದ್ದದ ರಸ್ತೆ ಜಲಾವೃತಗೊಂಡು ಕೆರೆಯಂತಾಗುತ್ತದೆ. ದ್ವಿಚಕ್ರ ವಾಹನಗಳು ಪ್ರಯಾಸದಿಂದ ಸಂಚರಿಸಬೇಕು.
ಅಂಕಹಳ್ಳಿ, ಕುಂದುಕೆರೆ, ಯರಿಯೂರು, ಕರಕಲಮಾದಳ್ಳಿ, ವಡ್ಡಗೆರೆ, ಬೊಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ನಿತ್ಯ ಓಡಾಡುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳೆಗಾಲದಲ್ಲಿ ಓಡಾಡುವುದೇ ಸವಾಲಾಗುತ್ತದೆ. ಜಲಾವೃತವಾಗುವ ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದು ವಾಹನ ಸವಾರರು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ.
ಶಾಸಕರು ಗಮನ ಹರಿಸಿ ರಸ್ತೆ ದುರಸ್ತಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ. ರಸ್ತೆ ನಿರ್ಮಾಣ ಮಾಡಲು 3 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದರೂ ಭೂಮಿ ಕಳೆದುಕೊಳ್ಳುವ ಭೀತಿಯಿಂದ ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಶಿವಪುರ ಮಂಜಪ್ಪ ತಿಳಿಸಿದರು.
ಚರಂಡಿ ಹೊಲಸು ಕಿರಿಕಿರಿ:
ಯಳಂದೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಪಂಚಾಯಿತಿಗಳು ಮಳೆಗಾಲಕ್ಕೂ ಮುನ್ನ ಚರಂಡಿ ಸ್ವಚ್ಛಗೊಳಿಸದಿರುವುದು ಸಮಸ್ಯೆಗೆ ಕಾರಣ ಎನ್ನುತ್ತಾರೆ ಗ್ರಾಮೀಣ ಭಾಗದ ಜನರು.
ರಸ್ತೆ ಇಲ್ಲ, ಚರಂಡಿ ಇಲ್ಲ
ಚಾಮರಾಜನಗರದ ಬಸವ ಕಲ್ಯಾಣ ನಗರ ಬಡಾವಣೆಗೆ ರಸ್ತೆ ನಿರ್ಮಿಸಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಮೂಲಸೌಕರ್ಯ ಒದಗಿಸಲು ಜನಪ್ರತಿನಿಧಿಗಳಿಗೆ, ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗಿ ನಾಗರಿಕರು ತೊಂದರೆ ಅನುಭವಿಸುತ್ತಾರೆ. ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು, ಸ್ಥಳೀಯರು ನಿತ್ಯದ ಕೆಲಸ ಕಾರ್ಯಗಳಿಗೆ ಹೋಗಲು ಕಿರಿಕಿರಿ ಅನುಭವಿಸುತ್ತಾರೆ.ರಾಜೇಂದ್ರ ಪ್ರಸಾದ್, ನಾಗರೀಕರು, ಚಾಮರಾಜನಗರ
‘ನಿತ್ಯ ಅವಘಡ’
ಬಸವೇಶ್ವರ ಬಡಾವಣೆಯ ಸ್ಥಿತಿ ತೀರಾ ಶೋಚನೀಯವಾಗಿದೆ. ಮಳೆಗಾಲದಲ್ಲಿ ಬಡಾವಣೆಯ ನಾಗರಿಕರು ರಸ್ತೆಗಳಲ್ಲಿ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳನ್ನು ಶಾಲೆಗಳಿಗೆ ಕಳಿಸಲು, ಆಟವಾಡಲು ಬಿಡಲು ಭಯವಾಗುತ್ತದೆ. ಬಡಾವಣೆಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಪಿ.ವಸಂತ ಕುಮಾರಿ, ಸ್ಥಳೀಯರು
‘ಕೆಸರುಗದ್ದೆಯಾದ ರಸ್ತೆ’
ಮಳೆ ಬಂದರೆ ರಸ್ತೆಯೆಲ್ಲ ಕೆಸರುಗದ್ದೆಯಾಗಿ ಬದಲಾಗುತ್ತದೆ. ನಾಗರಿಕರಿಂದ ತೆರಿಗೆ ಕಟ್ಟಿಸಿಕೊಳ್ಳುವ ನಗರಸಭೆ ಕನಿಷ್ಠ ಮೂಲಸೌಕರ್ಯ ನೀಡದಿರುವುದು ಬೇಸರದ ಸಂಗತಿ. ನಗರಸಭೆ ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.ಪೂರ್ಣಿಮಾ, ಕೊಳ್ಳೇಗಾಲ
‘ಚರಂಡಿ ಅನೈರ್ಮಲ್ಯ’
ಕಂದಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನಂತರ ಚರಂಡಿಗಳು ಕೆಳಗೆ ಇಳಿದಿವೆ. ಸಕಾಲದಲ್ಲಿ ಚರಂಡಿ ಸ್ವಚ್ಛ ಮಾಡದೆ ಸೊಳ್ಳೆಗಳ ಆವಾಸಸ್ಥಾನವಾಗಿ ಬದಲಾಗಿದೆ. ಸಂಬಂಧಪಟ್ಟವರು ಚರಂಡಿ ಅಥವಾ ಡಕ್ ನಿರ್ಮಿಸಿ ನೈರ್ಮಲ್ಯ ಕಾಪಾಡಬೇಕು.ರಮೇಶ್ ಕಂದಹಳ್ಳಿ ಯಳಂದೂರು
‘ಶೀಘ್ರ ರಸ್ತೆ ನಿರ್ಮಾಣ’
ಚಾಮರಾಜನಗರದ ಬುದ್ಧನಗರಕ್ಕೆ ಭಾಗಶಃ ರಸ್ತೆ ನಿರ್ಮಾಣ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಹೊಸ ಬಡಾವಣೆಗಳಿಗೆ ರಸ್ತೆ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.ಎಸ್.ಸುರೇಶ್, ನಗರಸಭೆ ಅಧ್ಯಕ್ಷ
‘ಮಳೆಗಾಲ ತಂದ ಸಂಕಷ್ಟ’
ಮಳೆಗಾಲ ಮುಂಚಿತವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಮಳೆಗಾಲದಲ್ಲಿ ಬಡಾವಣೆಗಳಲ್ಲಿ ನೀರು ನಿಂತು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಚರಂಡಿಯಲ್ಲಿ ಹೂಳು ತೆಗೆಸಬೇಕು. ಸ್ಥಳೀಯ ಆಡಳಿತ ಇದರ ಬಗ್ಗೆ ಗಮನ ಹರಿಸಬೇಕು.ನಾಗೇಂದ್ರ, ಸಂತೇಮರಹಳ್ಳಿ
‘ತಾತ್ಕಾಲಿಕ ರಸ್ತೆ ದುರಸ್ತಿ’
ಚಾಮರಾಜನಗರದ ಬುದ್ಧನಗರಕ್ಕೆ ಭಾಗಶಃ ರಸ್ತೆ ನಿರ್ಮಾಣ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಹೊಸ ಬಡಾವಣೆಗಳಿಗೆ ರಸ್ತೆ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.ಎಸ್.ಸುರೇಶ್, ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.