ಚಾಮರಾಜನಗರ: ತಳಸಮುದಾಯದವರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಕರೆದೊಯ್ದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಬ್ರಹ್ಮಶ್ರೀ ನಾರಾಯಣಗುರು ಜಯಂತಿ’ ಉದ್ಘಾಟಿಸಿ ಮಾತನಾಡಿದ ಸಚಿವರು, ನಾರಾಯಣಗುರುಗಳ ಮಾನವೀಯ ಮೌಲ್ಯ, ಆದರ್ಶಗಳು ಪ್ರಸ್ತುತ’ ಎಂದರು.
‘ಜಾತೀಯತೆ ತಾಂಡವಾಡುತ್ತಿದ್ದ ದಿನಗಳಲ್ಲಿ ತಳಸಮುದಾಯಗಳಿಗೆ ಸಮಾನತೆ ಹಾದಿ ತೋರಿದವರು ನಾರಾಯಣ ಗುರುಗಳು. ಅವರ ತತ್ವ, ಸಿದ್ದಾಂತ, ಮಾನವೀಯ ಮೌಲ್ಯಗಳಿಂದ ಪ್ರೇರಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಮಟ್ಟದಲ್ಲಿ ನಾರಾಯಣಗುರುಗಳ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರುತ್ತಿದ್ದಾರೆ’ ಎಂದರು.
‘ನಾರಾಯಣಗುರುಗಳ ವಿಚಾರಧಾರೆಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ತಳ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವೇ ಶಕ್ತಿಯಾಗಿದ್ದು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ನೆರೆಯ ಕೇರಳ ರಾಜ್ಯ ಸಾಕ್ಷರತೆಯಲ್ಲಿ ಶೇ 99ರಷ್ಟು ಪ್ರಗತಿ ಸಾಧಿಸಲು ನಾರಾಯಣ ಗುರುಗಳ ತತ್ವ, ಸಿದ್ಧಾಂತ ಪಾಲನೆಯೇ ಕಾರಣವಾಗಿದೆ’ ಎಂದು ಹೇಳಿದರು.
‘ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ದೇವಸ್ಥಾನಗಳ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಗಂಟೆಯ ಸದ್ದು ಹೆಚ್ಚಾಗಿ ಕೇಳಬೇಕು. ಅಭಿವೃದ್ಧಿಗೆ ಶಾಲೆಗಳು, ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗಬೇಕು. ಎಲ್ಲ ಸಮುದಾಯಗಳು ಸುಶಿಕ್ಷಿತರಾಗಬೇಕು’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಕ್ರಾಂತಿಕಾರಕ ಬದಲಾವಣೆ ತಂದರೆ, ಅವರ ಮಾದರಿಯಲ್ಲೇ ನಾರಾಯಣಗುರುಗಳು ಕೇರಳದಲ್ಲಿ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು. ಬಾಲ್ಯವಿವಾಹ ನಿರ್ಮೂಲನೆಗೆ ಚಳವಳಿ ನಡೆಸಿದರು’ ಎಂದರು.
ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರಿಸಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ರಾಜ್ಯದೆಲ್ಲೆಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದೆ. ಜಿಲ್ಲೆಯಲ್ಲಿ ಹೊಸ ಶಾಲಾಕಟ್ಟಡಗಳ ನಿರ್ಮಾಣಕ್ಕೆ, ನವೀಕರಣಕ್ಕೆ ಎಂ.ಎಸ್.ಐ.ಎಲ್ ಹಾಗೂ ಇತರೆ ಕಂಪೆನಿಗಳ ಸಿ.ಎಸ್.ಆರ್ ನಿಧಿ ಬಳಸಿಕೊಳ್ಳಲಾಗುತ್ತಿದೆ. ತಳ ಸಮುದಾಯಗಳು ಉನ್ನತ ಶಿಕ್ಷಣ ಪಡೆದು ಸಂಘಟಿತವಾಗಬೇಕು’ ಎಂದು ಹೇಳಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಜಾತಿ ಆಧಾರಿತ ತಾರತಮ್ಯ ವಿರೋಧಿಸಿದ ಶ್ರೇಷ್ಠ ವ್ಯಕ್ತಿ ನಾರಾಯಣ ಗುರುಗಳು. ಸ್ವಾತಂತ್ರ್ಯಪೂರ್ವದಲ್ಲಿ ತುಳಿತಕ್ಕೊಳಗಾದ ತಳ ಸಮುದಾಯಗಳಿಗೆ ಶಿಕ್ಷಣ ಹಾಗೂ ಸಮಾನತೆ ನೀಡಲು ಶ್ರಮಿಸಿದ ನಾರಾಯಣಗುರುಗಳು ಜಾತಿಯ ಸಂಕೋಲೆಗಳಿಂದ ಮುಕ್ತರಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು. ಮನುಷ್ಯತ್ವದ ಸಮಾಜ ನಿರ್ಮಾಣಕ್ಕೆ ಒತ್ತು ನಾರಾಯಣಗುರುಗಳು ತೋರಿದ ಹಾದಿಯಲ್ಲಿ ಮುನ್ನೆಡೆದು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು’ ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಅವರಂತೆ ನಾರಾಯಣಗುರುಗಳು ಕೇರಳದಲ್ಲಿ ಸಾಮಾಜಿಕ ಸುಧಾರಣೆ ಮಾಡಿದರು. ತಳಸಮುದಾಯದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಜೀವನವನ್ನೆ ಮುಡಿಪಿಟ್ಟರು ಎಂದರು.
ಶಿವಮೊಗ್ಗ ತೀರ್ಥಹಳ್ಳಿ ತಾಲ್ಲೂಕು ಗರ್ತಿಕೆರೆಯ ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ರಾಜು, ಮುಖಂಡರಾದ ಚಿನ್ನೇಗೌಡ, ಪೋತರಾಜು ಕಾರ್ಯಕ್ರಮದಲ್ಲಿ ಇದ್ದರು.
‘ಮಾನವತೆಯ ಪ್ರತಿರೂಪ ನಾರಾಯಣಗುರು’
ಮಾನವತೆ ಮೈಗೂಡಿಸಿಕೊಂಡು ಜಾತಿಯತೆಯನ್ನು ತೀವ್ರವಾಗಿ ವಿರೋಧಿಸಿದ ನಾರಾಯಣಗುರುಗಳು ಮೌನಕ್ರಾಂತಿಯ ಮೂಲಕ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಮೌಢ್ಯ ಕಂದಾಚಾರಗಳನ್ನು ತೊಡೆದುಹಾಕಲು ಶ್ರಮಿಸಿದರು. ತತ್ವಶಾಸ್ತ್ರ ಜ್ಯೋತಿಷ್ಯ ಶಾಸ್ತ್ರ ಯೋಗಸಿದ್ಧಗಳ ಅಪಾರ ಪಾಂಡಿತ್ಯ ಪಡೆದಿದ್ದ ನಾರಾಯಣಗುರುಗಳು ಕರ್ಮಯೋಗದ ಬಗ್ಗೆ ದೂರದೃಷ್ಟಿತ್ವ ಹೊಂದಿದ್ದ ತಪಸ್ವಿಯಾಗಿದ್ದರು. ದೇವಸ್ಥಾನಗಳ ಬದಲು ಗ್ರಂಥಾಲಯಗಳನ್ನು ಸ್ಥಾಪಿಸಿ ಎಂದು ಶಿಕ್ಷಣದ ಅರಿವು ಮೂಡಿಸಿದರು. ಬಾಲ್ಯವಿವಾಹ ನಿರ್ಮೂಲನೆಗೆ ಚಳವಳಿ ನಡೆಸಿದರು. ಮದ್ಯಪಾನ ಮುಕ್ತ ಅರಿವು ಶಿಬಿರ ಏರ್ಪಡಿಸಿದರು. ಬಹುಪತ್ನಿತ್ವ ಖಂಡಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಶ್ರಮಿಸಿದರು’ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.