ADVERTISEMENT

ಹೆಣ್ಣುಮಕ್ಕಳ ರಕ್ಷಣೆ ಸಮಾಜದ ಜವಾಬ್ದಾರಿ

ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ‌ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 5:54 IST
Last Updated 31 ಜನವರಿ 2026, 5:54 IST
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು   

ಚಾಮರಾಜನಗರ: ಹೆಣ್ಣುಮಗುವಿನ ರಕ್ಷಣೆ, ಜವಾಬ್ದಾರಿ ಪ್ರಜ್ಞಾವಂತ ನಾಗರಿಕ ಸಮಾಜದ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನದಡಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿದ್ದರು. ಸಾಕಷ್ಟು ದೌರ್ಜನ್ಯಗಳನ್ನು ಅನುಭವಿಸುತ್ತಿದ್ದರು. ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯ ಹೆಚ್ಚಾಗಿತ್ತು, ಸಾಮಾಜಿಕ ತಾತ್ಸಾರಕ್ಕೆ ಒಳಗಾಗಿದ್ದ ಹೆಣ್ಣುಮಕ್ಕಳು ಬದಲಾದ ಕಾಲಘಟ್ಟದಲ್ಲಿ ಸಂವಿಧಾನ ಜಾರಿಯಾದ ಬಳಿಕ ಸಮಾನ ಸ್ಥಾನಮಾನ ಪಡೆದುಕೊಂಡಿದ್ದಾರೆ.

ADVERTISEMENT

ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಗೆ ಹಲವು ಕಾನೂನುಗಳು ಜಾರಿಯಾಗಿದ್ದು ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕು. ಮಕ್ಕಳ ರಕ್ಷಣೆಗೆ ಸರ್ಕಾರ 54 ಹಕ್ಕುಗಳನ್ನು ಜಾರಿಗೊಳಿಸಿದ್ದು ಅವುಗಳಲ್ಲಿ ಬದುಕುವ, ಅಭಿವೃದ್ಧಿ ಹೊಂದುವ, ಭಾಗವಹಿಸುವ, ದೌರ್ಜನ್ಯದಿಂದ ರಕ್ಷಣೆ ಪಡೆಯುವ, ಮಾನವ ಕಳ್ಳ ಸಾಗಣೆ ತಡೆಯುವ ಹಕ್ಕುಗಳು ಪ್ರಮುಖವಾಗಿವೆ. ಹೆಣ್ಣುಮಕ್ಕಳು ಬಾಲ್ಯವಿವಾಹ ಆಗಬಾರದು. ಮಕ್ಕಳಿಗೆ 18 ವರ್ಷ ತುಂಬಿದ ನಂತರ ಉನ್ನತ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು, ನಂತರ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ ‘2018ರಲ್ಲಿ ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮ ಜಾರಿಯಾಗಿದ್ದು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಹಲವು ಕಾಯ್ದೆಗಳು ಜಾರಿಗೆ ಬಂದಿವೆ. ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಇದ್ದರೂ ದೌರ್ಜನ್ಯಗಳು ಪೂರ್ಣ ನಿಂತಿಲ್ಲ. ಹೆಣ್ಣುಮಕ್ಕಳ ಆಲೋಚನೆ, ಚಿಂತನೆ ಹಾಗೂ ನಿರ್ಧಾರಗಳು ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎಂದರು.

ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ‘ಹೆಣ್ಣು ಮತ್ತು ಗಂಡಿನ ನಡುವೆ ಜೈವಿಕ ಬದಲಾವಣೆಯ ವ್ಯತ್ಯಾಸ ಹೊರತಾಗಿ ಇಬ್ಬರೂ ಸಮಾನರು. ಪ್ರಸ್ತುತ ಎಲ್ಲ ಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಮಂಚೂಣಿಯಲ್ಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಗೌರವಧನದ ಚೆಕ್ ವಿತರಿಸಿ ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಆರ್. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಕೃಷಿ ಇಲಾಖೆ ಉಪನಿರ್ದೇಶಕಿ ಸುಷ್ಮಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಪುಟ್ಟಗೌರಮ್ಮ, ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕಿ ತ್ರಿವೇಣಿ, ಮಕ್ಕಳ ಕಲ್ಯಾಣ ಸಮಿತಿಯ ಲತಾ, ಸ್ವಯಂ ಸೇವಾ ಸಂಸ್ಥೆಯ ಗಂಗಾಧರ್, ಜಿಲ್ಲಾ ನಿರೂಪಣಾಧಿಕಾರಿ ಮಂಜುಳಾ ಕಾರ್ಯಕ್ರಮದಲ್ಲಿ ಇರಿದ್ದರು.

‘ಹಕ್ಕು ಕಾನೂನುಗಳ ಅರಿವು ಅಗತ್ಯ’ ಸಂವಿಧಾನದಡಿ ಎಲ್ಲರಿಗೂ ಸಮಾನ ಅವಕಾಶಗಳಿದ್ದು ಬಳಸಿಕೊಳ್ಳಬೇಕು. ಮಹಿಳೆಯರು ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಅರಿವು ಪಡೆದು ಅಗತ್ಯ ಸಂದರ್ಭಗಳಲ್ಲಿ ರಕ್ಷಣೆ ಪಡೆದುಕೊಳ್ಳಬೇಕು. ಹೆಣ್ಣುಮಕ್ಕಳೇ ಬಾಲ್ಯ ವಿವಾಹವನ್ನು ವಿರೋಧಿಸಿದರೆ ಸಾಮಾಜಿಕ ಪಿಡುಗು ಕಡಿಮೆಯಾಗುತ್ತದೆ. ಹೆಣ್ಣುಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ದವಿದ್ದು ಕಾನೂನು ನೆರವು ನೀಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.