ADVERTISEMENT

ನಿಸರ್ಗ ಚಿಕಿತ್ಸೆಗೆ ವೈಜ್ಞಾನಿಕ ಮನ್ನಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 11:29 IST
Last Updated 19 ನವೆಂಬರ್ 2018, 11:29 IST
ಕಾರ್ಯಕ್ರಮವನ್ನು ಡಾ. ಮಲ್ಲಣ್ಣ ತೋಟದ ಅವರು ಉದ್ಘಾಟಿಸಿದರು
ಕಾರ್ಯಕ್ರಮವನ್ನು ಡಾ. ಮಲ್ಲಣ್ಣ ತೋಟದ ಅವರು ಉದ್ಘಾಟಿಸಿದರು   

ಚಾಮರಾಜನಗರ: ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಯು ಮನುಷ್ಯನ ದೇಹವನ್ನು ರೋಗಗಳಿಂದ ಕಾಪಾಡುತ್ತದೆ’ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮಲ್ಲಣ್ಣ ತೋಟದ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಮುಖ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾಗಿರುವ ಇದಕ್ಕೆ ಈಗ ವೈಜ್ಞಾನಿಕ ಮನ್ನಣೆ ನೀಡಲಾಗಿದೆ. ಆಯುಷ್ ಇಲಾಖೆಯ ಅಡಿಯಲ್ಲಿ ಅನುದಾನ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

‘ನಗರದಲ್ಲಿ ಸರ್ಕಾರ ಹಾಗೂ ಧರ್ಮಸ್ಥಳ ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ತೆರೆಯಲಾಗಿದೆ. ಪ್ರಕೃತಿ ಚಿಕಿತ್ಸಾ ಪದ್ದತಿ ಅತ್ಯಂತ ಸುಲಭ ಹಾಗೂ ಆರೋಗ್ಯಕರವಾದುದು. ನಮ್ಮ ಆಹಾರ ಪದ್ಧತಿ ತಿಳಿಸಿ ಹಾಗೂ ಪ್ರಕೃತಿದತ್ತವಾದ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದರು.

ಜಿಲ್ಲಾ ಸರ್ಕಾರಿ ಆರ್ಯುವೇದ ಆಸ್ಪತ್ರೆಯ ಡಾ. ಶೋಭಾ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಲಿಂಗರಾಜು, ಬಸವರಾಜಪ್ಪ ಇದ್ದರು.

ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಮಲ್ಲಯ್ಯನಪುರ ಬಳಿ ಇರುವ ಆದರ್ಶ ಶಾಲೆಯಲ್ಲಿ ಗಿಡಗಳನ್ನು ನೆಡಲಾಯಿತು.

‘ಗಾಂಧೀಜಿಯ ನೆಚ್ಚಿನ ಚಿಕಿತ್ಸೆ’

ಆಸ್ಪತ್ರೆಯ ವೈದ್ಯೆ ಡಾ. ಮಾನಸ ಮಾತನಾಡಿ, ‘ಪ್ರಕೃತಿ ಚಿಕಿತ್ಸೆ ಮಹಾತ್ಮ ಗಾಂಧೀಜಿ ಅವರಿಗೆ ಅತ್ಯಂತ ಪ್ರಿಯವಾದ ಚಿಕಿತ್ಸೆಯಾಗಿತ್ತು. 1945ರಲ್ಲಿ ಅಖಿಲ ಭಾರತ ಪ್ರಕೃತಿ ಚಿಕಿತ್ಸೆ ಫೆಡರೇಷನ್‌ಗೆ ಸಹಿ ಮಾಡಿ, ಈ ಪದ್ಧತಿಯನ್ನು ದೇಶದಾದ್ಯಂತಹೆಚ್ಚು ಪ್ರಚುರ ಪಡಿಸುವಂತೆ ತಿಳಿಸಿದ್ದರು’ ಎಂದರು.

‘ಆರ್ಯುವೇದದಂತೆ ಇದು ಕೂಡ ಅತ್ಯಂತ ಹಳೆಯ ಪದ್ದತಿ. ಗ್ರಾಮೀಣ ಜನರು ಪ್ರಕೃತಿ ಜೊತೆ ಹೆಚ್ಚು ಒಡನಾಟ ಇಟ್ಟುಕೊಟ್ಟಿದ್ದರಿಂದ ಅವರು ನೂರಾರು ಕಾಲ ಆರೋಗ್ಯದಿಂದ ಬಾಳುತ್ತಿದ್ದರು. ಆಹಾರದ ಪದ್ದತಿಯಲ್ಲಿ ಆದ ವ್ಯತ್ಯಾಸಗಳಿಂದಾಗಿಯೇ ರೋಗ ರುಜಿನಗಳು ಹೆಚ್ಚಾದವು. ಇವು ಬರದಂತೆ ತಡೆಯುವುದೇ ಪ್ರಕೃತಿ ಚಿಕಿತ್ಸೆ. ನಮ್ಮ ದೇಶದ ಪದ್ಧತಿಯಾದ ಇದಕ್ಕೆಹೊರ ದೇಶದಲ್ಲಿ ಆಪಾರವಾದ ಬೇಡಿಕೆ ಇದೆ’ ಎಂದರು.

‘ಗಾಂಧೀಜಿಯವರ ಹುಟ್ಟು ಹಬ್ಬವಾದ ಅ.2ರಂದೇ ಪ್ರಕೃತಿ ಚಿಕಿತ್ಸೆ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಈ ವರ್ಷದಿಂದ ನ.18 ಅನ್ನುಪ್ರಕೃತಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.