ಚಾಮರಾಜನಗರ: ನವರಾತ್ರಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂ–ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೆಲೆ ತುಸು ದುಬಾರಿಯಾದರೂ ಖರೀದಿ ಭರಾಟೆ ಜೋರಾಗಿದೆ.
ಆಯುಧ ಪೂಜೆಗೆ ವಾಹನ ಹಾಗೂ ವಾಣಿಜ್ಯ ಮಳಿಗೆಗಳ ಅಲಂಕಾರಕ್ಕೆ ಹೆಚ್ಚಾಗಿ ಬಳಕೆಯಾಗುವ ಚೆಂಡು ಹೂ ದರ ಕೆ.ಜಿಗೆ ₹50 ರಿಂದ ₹60 ಮುಟ್ಟಿದೆ. ವಾರದ ಹಿಂದೆ ಚೆಂಡು ಹೂ ದರ ಕೇವಲ ₹10 ರಿಂದ₹ 20 ಇತ್ತು. ಸೇವಂತಿಗೆ ಕೆ.ಜಿಗೆ ₹120, ಕನಕಾಂಬರ ₹600 ಸಣ್ಣ ಮಲ್ಲಿಗೆ ₹600, ಮಲ್ಲಿಗೆ ₹800, ಕಾಕಡ ₹600, ಗುಲಾಬಿ ₹400, ಸುಗಂಧರಾಜ ₹240 ದರ ಇದೆ. ವಾರದ ಹಿಂದಿದ್ದ ದರಕ್ಕೆ ಹೋಲಿಸಿದರೆ ಎಲ್ಲ ಹೂವುಗಳ ದರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯ ಹೂ ವ್ಯಾಪಾರಿ ರವಿ.
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ, ವಿಜಯದಶಮಿ ಹಾಗೂ ಆಯುಧ ಪೂಜೆಯವರೆಗೂ ದರ ಸ್ಥಿರವಾಗಿರಲಿದ್ದು ಬಳಿಕ ಇಳಿಮುಖವಾಗಲಿದೆ ಎನ್ನುತ್ತಾರೆ ಹೂ ವ್ಯಾಪಾರಿಗಳು.
ಮಾರುಕಟ್ಟೆಗೆ ಬಂದ ಬೂದುಗುಂಬಳ:
ಆಯುಧ ಪೂಜೆ ದಿನ ವಾಹನಗಳಿಗೆ ಹಾಗೂ ವಾಣಿಜ್ಯ ಮಳಿಗೆಗೆಳಿಗೆ ದೃಷ್ಟಿ ತೆಗೆದು ಒಡೆಯುವ ಬೂದುಗುಂಬಳ ದರ ದುಬಾರಿಯಾಗಿದೆ. ಕೆ.ಜಿಗೆ ₹ 40ರವರೆಗೂ ಮಾರಾಟವಾಗುತ್ತಿದ್ದು ಗ್ರಾಮಾಂತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಬೂದು ಗುಂಬಳ ನಗರದ ಮಾರುಕಟ್ಟೆ ಪ್ರವೇಶಿಸಿದೆ. ಉದ್ದನೆಯ ಹಾಗೂ ಗುಂಡು ಮಾದರಿಯ ಬೂದುಗುಂಬಳ ಬಂದಿದ್ದು ದುಂಡನೆಯ ಬೂದುಗುಂಬಳಕ್ಕೆ ಬೇಡಿಕೆ ಹೆಚ್ಚಾಗಿದೆ. ನಗರದ ಅಲಲ್ಲಿ ಬಾಳೆ ಕಂದುಗಳನ್ನು ಮಾರಾಟಕ್ಕಿಡಲಾಗಿತ್ತು.
ದಿನಸಿ ಖರೀದಿ ಜೋರು:
ನಗರದ ಅಂಗಡಿ ಬೀದಿಗಳಲ್ಲಿ ಹಬ್ಬದ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು ಗ್ರಾಹಕರ ದಟ್ಟಣೆ ಹೆಚ್ಚಾಗಿತ್ತು. ಗ್ರಾಮಾಂತರ ಭಾಗಗಳಿಂದ ಬಂದಿದ್ದ ಜನರು ಕಿರಾಣಿ ಅಂಗಡಿಗಳಲ್ಲಿ ಖರೀದಿ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ದಸರಾ ಅಂಗವಾಗಿ ಮೊಬೈಲ್ ಹಾಗೂ ಬಟ್ಟೆ ಅಂಗಡಿಗಳಲ್ಲಿ ರಿಯಾಯಿತಿ ನೀಡಲಾಗುತ್ತಿದ್ದು ಖರೀದಿ ಉತ್ಸಾಹ ಹೆಚ್ಚಾಗಿ ಕಂಡುಬಂತು. ಹೂ, ಹಣ್ಣು, ತರಕಾರಿ ಮಾರುಕಟ್ಟೆಗಳು ಗ್ರಾಹಕರಿಂದ ಗಿಜಿಗಿಡುತ್ತಿದ್ದವು.
ಹಣ್ಣುಗಳ ದರ ಅಲ್ಪ ಏರಿಕೆ:
ಹಣ್ಣುಗಳ ದರ ಅಲ್ಪ ಏರಿಕೆ ಕಂಡಿದೆ. ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ದಾಳಿಂಬೆ ಕೆಜಿಗೆ ₹ 100 ರಿಂದ ₹160, ಸೇಬು ₹120 ರಿಂದ ₹160, ಕಿತ್ತಲೆ ₹60, ಮೋಸಂಬಿ ₹60 ರಿಂದ ₹80, ದ್ರಾಕ್ಷಿ ₹160, ಪೈನಾಪಲ್ 60, ಏಲಕ್ಕಿ ಬಾಳೆಹಣ್ಣು ₹80, ಪಚ್ಚಬಾಳೆ ₹40 ದರ ಇದೆ. ಆಯುಧಪೂಜೆಯ ದಿನ ದರ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿ ಮಹದೇವ್.
ತರಕಾರಿಗಳ ದರ ಅಲ್ಪ ಏರಿಕೆ:
ತರಕಾರಿಗಳ ದರ ಅಲ್ಪ ಹೆಚ್ಚಾಗಿದೆ, ಕ್ಯಾರೆಟ್ ಕೆ.ಜಿಗೆ ₹60ಕ್ಕೆ ಏರಿಕೆಯಾಗಿದೆ, ಕಳೆದ ವಾರ₹ 40 ಇತ್ತು. ಟೊಮೆಟೊ ದರ ಕಡಿಮೆ ಇದ್ದು ಕೆ.ಜಿಗೆ 20ಕ್ಕೆ ಸಿಗುತ್ತಿದೆ. ಗುಣಮಟ್ಟದ ಟೊಮೆಟೊ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿಲ್ಲ, ಹುಳುವಿನ ಬಾಧೆ ಹೆಚ್ಚಾಗಿದೆ ಎನ್ನುತ್ತಾರೆ ಗೃಹಿಣಿ ಭಾಗ್ಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.