ADVERTISEMENT

ಮರಳು ನೀತಿ ಶೀಘ್ರ: ಸಚಿವ ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 12:59 IST
Last Updated 29 ಡಿಸೆಂಬರ್ 2020, 12:59 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ಚಾಮರಾಜನಗರ: ರಾಜ್ಯದಲ್ಲಿ ಶೀಘ್ರವಾಗಿ ಹೊಸ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಅವರು ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಳಿನ ಸಮಸ್ಯೆ ನೀಗಿಸುವುದಕ್ಕಾಗಿ ಹೊಸ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ. ಇದು ಈ ಸರ್ಕಾರದ ಪ್ರಮುಖ ನಿರ್ಧಾರವಾಗಲಿದೆ. 1ರಿಂದ 6ನೇ ಹಂತದವರೆಗೆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಮರಳನ್ನು ಬಳಸಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಒಂದು, ಎರಡು ಮತ್ತು ಮೂರನೇ ಹಂತದಲ್ಲಿ (ಹಳ್ಳ, ತೊರೆ, ಹೊಳೆ ಇತ್ಯಾದಿ) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಮಾರಾಟಕ್ಕೆ ಅನುವು ಮಾಡಲಾಗುವುದು. ಜನರು ತಮ್ಮ ಬಳಕೆಗಾಗಿ ಇದನ್ನು ಖರೀದಿಸಬಹುದು. ಒಂದು ಟನ್‌ ಮರಳು ₹300ರಿಂದ ₹350ಗೆ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದರು.

ADVERTISEMENT

‘ನಾಲ್ಕು, ಐದು ಮತ್ತು ಆರನೇ ಶ್ರೇಣಿಯಲ್ಲಿ (ಮರಳು ಲಭ್ಯತೆ ಹೆಚ್ಚಿರುವ ಸ್ಥಳಗಳು) ಅರ್ಧ ರಾಜ್ಯಕ್ಕೆ ಮೈಸೂರು ಮಿನರಲ್‌ ಸಂಸ್ಥೆ ಹಾಗೂ ಇನ್ನರ್ಧ ರಾಜ್ಯದಲ್ಲಿ ಹಟ್ಟಿ ಚಿನ್ನದ ಗಣಿಯ ಮೂಲಕ ಮಾರಾಟ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಮರಳು ನೀತಿಯ ರೂಪುರೇಷೆಗಳು ಈಗಾಗಲೇ ಸಿದ್ಧವಾಗಿದ್ದು, ಈ ಹೊತ್ತಿಗಾಗಲೇ ಜಾರಿಗೆ ಬರಬೇಕಿತ್ತು. ಕೋವಿಡ್‌ನಿಂದಾಗಿ ವಿಳಂಬವಾಗಿದೆ’ ಎಂದು ಸಿ.ಸಿ.ಪಾಟೀಲ ಅವರು ಹೇಳಿದರು.

ಶೀಘ್ರ ಡ್ರೋನ್‌ ಸರ್ವೆ: ‘ರಾಜ್ಯದಲ್ಲಿರುವ ಗಣಿಗಳನ್ನು ಡ್ರೋನ್‌ ಮೂಲಕ ಸರ್ವೇ ಮಾಡಲು ತೀರ್ಮಾನಿಸಲಾಗಿದೆ. ಈ ಉದ್ದೇಶಕ್ಕೆ ಎರಡು ಮೂರು ಸಂಸ್ಥೆಗಳನ್ನು ಗುರುತಿಸಲಾಗಿದೆ. ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.