ADVERTISEMENT

newsPaper distributors day: ಪತ್ರಿಕಾ ವಿತರಕರು: ಕೋವಿಡ್‌ ಕಾಲದ ಯೋಧರು

ಇಂದು ಪತ್ರಿಕಾ ವಿತರಕರ ದಿನ, ಕಷ್ಟದಲ್ಲೂ ಬಿಡದ ಕಾಯಕ ನಿಷ್ಠೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 16:52 IST
Last Updated 3 ಸೆಪ್ಟೆಂಬರ್ 2021, 16:52 IST
ಕೊಳ್ಳೇಗಾಲದಲ್ಲಿ ನಿತ್ಯ ಬೆಳಿಗ್ಗೆ ಪತ್ರಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವ ವಿತರಕರು
ಕೊಳ್ಳೇಗಾಲದಲ್ಲಿ ನಿತ್ಯ ಬೆಳಿಗ್ಗೆ ಪತ್ರಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವ ವಿತರಕರು   

ಚಾಮರಾಜನಗರ: ಕೋವಿಡ್‌ ಸಂಕಷ್ಟದ ಸಮಯದಲ್ಲೂ ಸೋಂಕಿಗೆ ಹೆದರದೆ, ಕುಗ್ಗದೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿದ ಪತ್ರಿಕಾ ವಿತರಕರು ಕೂಡ ಕೋವಿಡ್‌ ಯೋಧರೇ.

ಪತ್ರಿಕಾ ವಿತರಕರು ದಿನ ಪತ್ರಿಕೆಗಳು ಹಾಗೂ ಓದುಗರ ನಡುವಿನ ಕೊಂಡಿ. ಕೊರೊನಾ ವೈರಸ್‌ ಕಾಟದಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದ ಕಾಲದಲ್ಲಿ, ಮಳೆ–ಚಳಿಯನ್ನು ಲೆಕ್ಕಿಸದೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲೂ ಪ್ರತಿ ದಿನವೂ ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ವಾಹನಗಳ ಅಲಭ್ಯತೆ, ಬಸ್‌ಗಳ ಕೊರತೆ, ಹುಡುಗರ ಗೈರು... ಹೀಗೆ ಯಾವೊಂದೂ ನೆಪ ಹೇಳದೆ, ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮುಂಜಾನೆ ಸಮಯಕ್ಕೆ ಸರಿಯಾಗಿ ಓದುಗರ ಕೈಗೆ ಪತ್ರಿಕೆಗಳನ್ನು ಕೊಡುತ್ತಿದ್ದ ವಿತರಕರು ಎರಡು ವರ್ಷದ ಅವಧಿಯಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ.

ADVERTISEMENT

‘ಪತ್ರಿಕೆಗಳಿಂದ ಕೊರೊನಾ ವೈರಸ್‌ ಹರಡುತ್ತದೆ’ ಎಂಬ ಸುಳ್ಳು ಸುದ್ದಿ ಹರಡಿದ ಸಂದರ್ಭದಲ್ಲಿ ವಿತರಕರು ದೊಡ್ಡ ಸವಾಲು ಎದುರಿಸಿದ್ದರು. ಕೆಲವು ಓದುಗರು ಪತ್ರಿಕೆ ಬೇಡ ಎಂದು ತರಿಸುವುದನ್ನು ನಿಲ್ಲಿಸಲು ಮುಂದಾದಾಗ, ಪತ್ರಿಕಾ ಸಂಸ್ಥೆಗಳು ಅನುಸರಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಅವರಿಗೆ ವಿವರಿಸಿ, ತಮ್ಮನ್ನೇ ಉದಾಹರಣೆಯನ್ನಾಗಿ ಕೊಟ್ಟು ಓದುಗರನ್ನು ಮನವೊಲಿಸುವಲ್ಲಿ ಪತ್ರಿಕಾ ವಿತರಕರು ಮಹತ್ವದ ಪಾತ್ರ ವಹಿಸಿದ್ದರು.

ಜಿಲ್ಲೆಯಲ್ಲಿ ಈಗ ಕೋವಿಡ್‌ ಪ್ರಕರಣ ಇಳಿಮುಖವಾಗಿದೆ. ಹಾಗಿದ್ದರೂ ವಿತರಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಸರ್ಕಾರ ಗಮನ ಹರಿಸಬೇಕು: ‘ಗಾಳಿ, ಮಳೆ, ಚಳಿ, ಕೋವಿಡ್‌ ಭಯವನ್ನು ಲೆಕ್ಕಿಸದೆ ಬೆಳಿಗ್ಗೆ 4 ಗಂಟೆಗೆ ನಮ್ಮ ಕೆಲಸವನ್ನು ಆರಂಭಿಸುತ್ತೇವೆ. ಪತ್ರಿಕೆ ವಿತರಣಾ ಕಾರ್ಯದಲ್ಲಿ ಹುಡುಗರು ಕೂಡ ನೆರವಾಗುತ್ತಿದ್ದಾರೆ.ಕೋವಿಡ್‌ ಸಮಯದಲ್ಲಿ ಪತ್ರಿಕೆ ಬಿಲ್‌ ಸಂಗ್ರಹಿಸುವುದು ಕಷ್ಟವಾಗಿದ್ದರೂ ಈಗ ಸೋಂಕು ಕಡಿಮೆ ಇರುವುದರಿಂದ ಪರಿಸ್ಥಿತಿ ಸುಧಾರಿಸಿದೆ.’

‘ಎಲ್ಲರೂ ಮನೆಯಲ್ಲಿದ್ದರೂ ನಾವು ನಮ್ಮ ಕೆಲಸ ಬಿಟ್ಟಿಲ್ಲ. ಕೋವಿಡ್‌ ಸಮಯದಲ್ಲಿ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಪತ್ರಿಕಾ ವಿತರಕರು ಹಾಗೂ ಮನೆ ಮನೆಗಳಿಗೆ ಪತ್ರಿಕೆ ಹಾಕುವ ಹುಡುಗರ ಕಷ್ಟವನ್ನು ಅರಿತು ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಚಾಮರಾಜನಗರದ ವಿತರಕ ಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತ್ರಿಕಾ ವಿತರಕರಿಗೆ ಹತ್ತು ಹಲವು ಸಮಸ್ಯೆಗಳು ಈಗಲೂ ಇವೆ. ಪ್ರತಿ ತಿಂಗಳು ಶುಲ್ಕ ವಸೂಲಿ ಹಾಗೂ ಮನೆಮನೆಗೆ ತೆರಳಿ ಪತ್ರಿಕೆ ಹಂಚುವಾಗ ಮುಂಜಾನೆಯೇ ಎದ್ದು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ‌ ಮತ್ತು ಅವರಿಗೆ ಲಭಿಸಬೇಕಾದ ಎಲ್ಲ ನೆರವನ್ನು ಕಲ್ಪಿಸಬೇಕು. ಜಿಲ್ಲೆಯ ವಿವಿಧೆಡೆ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಿ ಪ್ರೋತ್ಸಾಹಿಸಬೇಕು’ ಎಂದು ಯಳಂದೂರಿನ ಗೋವಿಂದರಾಜು ಹೇಳಿದರು.

***

‘ವೃತ್ತಿ ಧರ್ಮಕ್ಕೆ ದ್ರೋಹ ಬಗೆಯಲ್ಲ’

ನಮ್ಮ ಜೀವನ ನಡೆಯುತ್ತಿರುವುದೇ ಪತ್ರಿಕೆಯಿಂದ. ಹಾಗಾಗಿ, ವೃತ್ತಿ ಧರ್ಮಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಕೋವಿಡ್ ಕಾಲದಲ್ಲಿ ನಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡಿದ್ದೇವೆ. ಕೆಲವರು ಪತ್ರಿಕೆಯನ್ನು ನಿಲ್ಲಿಸಿದ್ದರು. ಕಾರಣ ಕೇಳಿದರೆ ಪತ್ರಿಕೆಯಿಂದ ಕೋವಿಡ್ ಹಬ್ಬುತ್ತದೆ ಎಂದು ಹೇಳುತ್ತಿದ್ದರು. ಆಗ ನಾವು ಅವರ ಮನೆ ಬಾಗಿಲಿಗೆ ಹೋಗಿ ಪತ್ರಿಕೆಯನ್ನು ಹಾಕಿಸಿಕೊಳ್ಳಿ. ಅದರಿಂದ ಯಾವುದೇ ರೋಗ ಬರುವುದಿಲ್ಲ ಎಂದು ಮನವರಿಕೆಯನ್ನು ಮಾಡಿದ್ದೆವು.

–ಶಾಂತರಾಜು, ಪತ್ರಿಕೆ ವಿತರಕ

***

ಹಿಂದಿರುಗಿ ನೋಡಿದರೆ ಅಚ್ಚರಿ...

ಕೋವಿಡ್ ಸಂದರ್ಭದಲ್ಲಿ ತಿಂಗಳ ಹಣ ಪಡೆಯಲು ಹೋದರೆ, ‘ಮುಂದಿನ ತಿಂಗಳು ಬನ್ನಿ ಎನ್ನುತ್ತಿದ್ದರು’. ಇದರಿಂದ ಎರಡು ತಿಂಗಳು ಬಿಲ್ ಕಟ್ಟುವುದೇ ಕಷ್ಟವಾಗಿತ್ತು. ಇಡೀ ಊರೆಲ್ಲ ಕೊರೊನಾ ಭಯದಿಂದ ಹೊರಗೆ ಬರದೇ ಕುಳಿತಿದ್ದ ಸಂದರ್ಭದಲ್ಲಿ ರಾಜ್ಯದ ಆಗು ಹೋಗುಗಳ‌ ಮಾಹಿತಿ ನೀಡುವ ಪತ್ರಿಕೆಗಳನ್ನು ವಿತರಿಸಿದ್ದೇವೆ. ಈಗ ಆ ಸಂದರ್ಭವನ್ನು ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ

- ಜೆ.ಶಿವರಾಜು,ಹನೂರು

***

ಗ್ರಾಮಗಳಿಗೆ ವಿತರಿಸಲು ಸಮಸ್ಯೆ...

ಗ್ರಾಮೀಣ ಭಾಗಗಳಿಗೆ ಪತ್ರಿಕೆಗಳನ್ನು ವಿತರಿಸಲು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗದೇ ಇರುವುದರಿಂದ ಗ್ರಾಮಗಳಿಗೆ ಪತ್ರಿಕೆ ತಲುಪಿಸಲು ಸಮಸ್ಯೆಯಾಗಿದೆ. ಲಾಕ್‌ಡೌನ್‌ ನಂತರ ಕೆಲವರು ಪತ್ರಿಕೆಗಳನ್ನು ತರಿಸುವುದು ನಿಲ್ಲಿಸಿದ್ದಾರೆ. ಅವರನ್ನು ಮನವೊಲಿಸುತ್ತಿದ್ದೇವೆ.

- ಎಸ್‌.ಸಿದ್ದನಾಯಕ ತೆರಕಣಾಂಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.