ADVERTISEMENT

ಚಾಮರಾಜನಗರ: ಸಂಕಷ್ಟದ ನಡುವೆಯೂ ಛಲ ಬಿಡದ ತ್ರಿವಿಕ್ರಮರು

ಇಂದು ಪತ್ರಿಕಾ ವಿತರಕರ ದಿನ, ಕೋವಿಡ್‌ ಕಾಲದಲ್ಲೂ ವೃತ್ತಿ ಧರ್ಮ ಪಾಲನೆ

ಸೂರ್ಯನಾರಾಯಣ ವಿ
Published 4 ಸೆಪ್ಟೆಂಬರ್ 2020, 1:46 IST
Last Updated 4 ಸೆಪ್ಟೆಂಬರ್ 2020, 1:46 IST
ಕೋವಿಡ್‌ ಕಾಲದಲ್ಲೂ ಪತ್ರಿಕೆ ವಿತರಣೆಯಲ್ಲಿ ನಿರತರಾಗಿದ್ದ ವಿತರಕರು
ಕೋವಿಡ್‌ ಕಾಲದಲ್ಲೂ ಪತ್ರಿಕೆ ವಿತರಣೆಯಲ್ಲಿ ನಿರತರಾಗಿದ್ದ ವಿತರಕರು   

ಚಾಮರಾಜನಗರ: ಕೋವಿಡ್‌–19 ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರವನ್ನು ಕಾಡಿದ ಕೊರೊನಾ ವೈರಸ್‌ ಪತ್ರಿಕೋದ್ಯಮವನ್ನೂ ಬಿಟ್ಟಿಲ್ಲ. ಇಷ್ಟೆಲ್ಲ ಕಷ್ಟದ ನಡುವೆಯೇ ಪ್ರತಿದಿನ ದಿನಪತ್ರಿಕೆಗಳು ಮುದ್ರಣಗೊಂಡು ‌ಓದುಗರ ಕೈ ಸೇರುತ್ತಿve. ಸವಾಲು, ಸಂಕಷ್ಟಗಳ ನಡುವೆ ಪತ್ರಿಕಾ ವಿತರಕರು ಛಲ ಬಿಡದೆ, ತಮ್ಮ ಕಾರ್ಯವನ್ನು ಮುಂದುವರಿಸುತ್ತಾ ಬಂದಿದ್ದಾರೆ.

ಪತ್ರಿಕೆಗಳಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಸುಳ್ಳು ಸುದ್ದಿ ಹರಡಿದ ನಂತರ, ‘ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ’ ಎಂದು ಓದುಗರ ಮನವೊಲಿಸುವುದರಲ್ಲಿ ವಿತರಕರು ಯಶಸ್ವಿಯಾಗಿದ್ದರು. ಮಾಸ್ಕ್‌, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು ತಮ್ಮ ಕೆಲಸ ಮಾಡಿದ್ದರು.

ಲಾಕ್‌ಡೌನ್ ಹಾಗೂ ಕೋವಿಡ್‌ ಕಾಲದಲ್ಲಿ ತಾವು ಎದುರಿಸಿದ ಕಷ್ಟಗಳು ಹಾಗೂ ಸವಾಲುಗಳನ್ನು ಏಜೆಂಟರು ಮತ್ತು ವಿತರಕರು ‘ಪ್ರಜಾವಾಣಿ’ ಮುಂದೆ ತೆರೆದಿಟ್ಟರು.

ADVERTISEMENT

‘ನನ್ನ ಪತ್ರಿಕಾ ವಿತರಣೆಯ ಅನುಭವದಲ್ಲಿ ಇದುವರೆಗೆ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಭಾರಿ ಕಷ್ಟ ಆಯಿತು. ನಮ್ಮಲ್ಲೂ ಭಯ ಇತ್ತು. ಆದರೆ, ನನ್ನ ಕೆಲಸವನ್ನು ಮಾಡಲೇಬೇಕಿತ್ತು. ಮನೆ ಮನೆಗೆ ಪತ್ರಿಕೆಗಳನ್ನು ಹಾಕಲು ಹುಡುಗರು ಬರುತ್ತಿರಲಿಲ್ಲ. ಅವರ ಪೋಷಕರು ಬಿಡುತ್ತಿರಲಿಲ್ಲ. ನಾನೇ ಹಾಕಬೇಕಾಯಿತು. ನನ್ನ ಮನೆಯ ಸದಸ್ಯರು ಕೂಡ ಕೆಲಸ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಕೊಳ್ಳೇಗಾಲದ ಏಜೆಂಟ್‌ ಹಾಗೂ ವಿತರಕ ಶಾಂತರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕೆಲಸ ನನಗೆ ಅನ್ನ ಹಾಕಿದೆ. ಅದನ್ನು ಕೈ ಬಿಡಲು ಸಾಧ್ಯವೇ ಇಲ್ಲ. ಎಷ್ಟು ಕಷ್ಟ ಆದರೂ ಮಾಡೇ ಮಾಡುತ್ತೇನೆ ಎಂದು ನಿರ್ಧರಿಸಿದ್ದೆ. ಅದರಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಪತ್ರಿಕೆಗಳನ್ನು ಹಂಚಿದೆ’ ಎಂದು ಅವರು ಹೇಳಿದರು.

‘ಕೋವಿಡ್‌ ಹಾವಳಿ ಆರಂಭವಾದ ನಂತರ ಒದುಗರಲ್ಲಿ ಭಯ ಇತ್ತು.ಎರಡು–ಮೂರು ತಿಂಗಳು ಪತ್ರಿಕೆ ಹಾಕಬೇಡಿ ಎಂದು ಕೆಲವರು ಹೇಳಿದ್ದರು. ನಾನು ಪ್ರತಿ ದಿನ ಹಲವು ಪತ್ರಿಕೆಗಳನ್ನು ಮುಟ್ಟುತ್ತೇನೆ, ಎಲ್ಲ ಕಡೆಗೆ ಹಂಚುತ್ತೇನೆ ನನಗೆ ಏನೂ ಆಗಿಲ್ಲ, ಹಾಗಿರುವಾಗ ನಿಮಗೇನಾಗುತ್ತದೆ ಎಂದು ಒದುಗರನ್ನು ಮನವೊಲಿಸಿದ್ದೆ. ನಮ್ಮಲ್ಲಿ ಯಾರೂ ಪತ್ರಿಕೆ ಬೇಡ ಅಂದಿಲ್ಲ’ ಎಂದು ಗುಂಡ್ಲುಪೇಟೆಯ ಸೋಮಶೇಖರ್‌ ಹೇಳಿದರು.

‘ಸ್ವಲ್ಪ ಕಷ್ಟವಾಗಿದ್ದು ನಿಜ. ಆದರೆ ಇದು ನಮ್ಮ ವೃತ್ತಿ ಧರ್ಮ. ಅದನ್ನು ಬಿಡುವುದಕ್ಕೆ ಆಗುವುದಿಲ್ಲ. ಕಷ್ಟದ ನಡುವೆಯೇ ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಪತ್ರಿಕೆ ವಿತರಿಸುತ್ತೇನೆ’ ಎಂದು ಅವರು ಹೇಳಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಹುಡುಗರು ಬರುತ್ತಿರಲಿಲ್ಲ. ಯಾವುದಾದರೂ ಪ್ರದೇಶ ಸೀಲ್‌ ಡೌನ್‌ ಆಗಿದ್ದರೆ, ಅತ್ತ ಕಡೆಯೂ ಅವರೇ ಸುಳಿಯುತ್ತಿರಲಿಲ್ಲ. ನಾನೇ ಸಂಬಂಧಿಕರನ್ನು ಕರೆದುಕೊಂಡು ಪತ್ರಿಕೆ ಹಂಚುತ್ತಿದ್ದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌, ಸ್ಯಾನಿಟೈಸರ್‌ ಬಳಸುತ್ತಿದ್ದೆವು. ಹುಡುಗರಿಗೂ ನೀಡಿ ಎಲ್ಲ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಕೊಂಡು ಕೆಲಸ ಮಾಡಿದ್ದೆವು’ ಎಂದು ಚಾಮರಾಜನಗರದ ವಿತರಕ ನವೀನ್‌ ಅವರು ಹೇಳಿದರು.

‘ಕೋವಿಡ್‌ ಕಾರಣದಿಂದ ಹೆಚ್ಚು ತೊಂದರೆಯಾಗಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪತ್ರಿಕೆಗಳನ್ನು ಹಂಚಿದ್ದೇವೆ’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ವಿತರಕ ಸಿದ್ದನಾಯಕ ಅವರು ತಿಳಿಸಿದರು.

ಮನೆ ಮನೆಗೆ ಹಾಕಿದೆ: ಯಳಂದೂರಿನ ಗೋವಿಂದರಾಜು ಅವರು ಮಾತನಾಡಿ, ‘ಕೋವಿಡ್‌ ಹಾವಳಿಯಿಂದಾಗಿ ಕೆಲಸ ಮಾಡಲು ತುಂಬಾ ಕಷ್ಟವಾಗಿದೆ. ದಶಕಗಳಿಂದಲೂ ಪತ್ರಿಕೆ ವಿತರಣೆ ಮಾಡಿಕೊಂಡು ಬಂದಿದ್ದೇನೆ. ಕೆಲವು ವರ್ಷಗಳಿಂದೀಚೆಗೆ ನಾನು ಮನೆ ಮನೆಗೆ ಹೋಗಿ ಪತ್ರಿಕೆ ಹಾಕುತ್ತಿರಲಿಲ್ಲ. ಹುಡುಗರು ಹಾಕುತ್ತಿದ್ದರು. ಮಾರ್ಚ್‌ ನಂತರ ಅವರೂ ಬರುತ್ತಿಲ್ಲ. ಹಾಗಾಗಿ, ನಾನೇ ಮನೆಗಳಿಗೆ ಪತ್ರಿಕೆಗಳನ್ನು ಹಾಕುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.