ADVERTISEMENT

ಪತ್ರಿಕಾ ವಿತರಕರ ದಿನಾಚರಣೆ: ಮಳೆ, ಚಳಿಗೆ ಜಗ್ಗದ ಕಾಯಕಯೋಗಿಗಳು

ಬಾಲಚಂದ್ರ ಎಚ್.
Published 4 ಸೆಪ್ಟೆಂಬರ್ 2025, 2:22 IST
Last Updated 4 ಸೆಪ್ಟೆಂಬರ್ 2025, 2:22 IST
   

ಚಾಮರಾಜನಗರ: ಮಳೆ, ಗಾಳಿ, ಚಳಿ ಸಹಿತ ಹವಾಮಾನ ವೈಪರೀತ್ಯ‌ಗಳು ಎದುರಾದರೂ ಜಗತ್ತಿನ ವಿದ್ಯಮಾನ ಹಾಗೂ ಮಾಹಿತಿಯ ಹೂರಣವನ್ನು ಪ್ರತಿದಿನ ಓದುಗರ ಮನೆಗಳಿಗೆ ತಲುಪಿಸುವ ಕಾಯಕಯೋಗಿಗಳು ಪತ್ರಿಕಾ ವಿತರಕರು. ವೃತ್ತಿ ಅಭದ್ರತೆ, ಆರ್ಥಿಕ ಸಂಕಷ್ಟ ಸಹಿತ ಹಲವು ಸವಾಲುಗಳು ಎದುರಾದರೂ ವೃತ್ತಿಗೆ ಬೆನ್ನುಮಾಡದೆ ಗಟ್ಟಿಯಾಗಿ ನಿಂತಿರುವ ಪತ್ರಿಕಾ ವಿತರಕರ ಶ್ರಮ ಶ್ಲಾಘನೀಯ.

ಜಗತ್ತು ನಸುಕಿನ ಸಿಹಿ ನಿದ್ದೆಯಲ್ಲಿರುವಾಗಲೇ ಪತ್ರಿಕಾ ವಿತರಕರ ವೃತ್ತಿ ಆರಂಭವಾಗುತ್ತದೆ. ಮುದ್ರಣಾಲಯದಿಂದ ಮುದ್ರಿತಗೊಂಡು ಮಾರುಕಟ್ಟೆಗೆ ಬರುವ ಪತ್ರಿಕೆಗಳನ್ನು ರಸ್ತೆಗಳ ಬದಿ, ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳ ಮುಂಭಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಒಪ್ಪ ಓರಣವಾಗಿ ಜೋಡಿಸಿಕೊಂಡು ಓದುಗರ ಮನೆಗಳಿಗೆ ಮುಟ್ಟಿಸುತ್ತಾರೆ.

ಜೋರು ಮಳೆ ಇರಲಿ, ಮೈಕೊರೆಯುವ ಚಳಿ ಇರಲಿ, ಅನಾರೋಗ್ಯ ಕಾಡಲಿ ವೃತ್ತಿ ನಿಲ್ಲುವುದಿಲ್ಲ. ಪ್ರತಿದಿನ ಸೂರ್ಯ ಉದಯಿಸುವ ಹೊತ್ತಿಗೆ ಪ್ರತಿ ಮನೆಗೂ ಪತ್ರಿಕೆಗಳನ್ನು ವಿತರಿಸಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಪತ್ರಿಕಾ ವಿತರಕರು. ಸವಾಲು, ಸಮಸ್ಯೆಗಳಿಗೆ ಕುಗ್ಗದೆ ವೃತ್ತಿ ನಿರ್ವಹಿಸುತ್ತಿರುವ ವಿತರಕರ ಶ್ರಮವನ್ನು ಪತ್ರಿಕಾ ವಿತರಕರ ದಿನವಾದ ಇಂದು ಸ್ಮರಿಸುವುದು ಸಮಾಜದ ಕರ್ತವ್ಯ.

ADVERTISEMENT

ಸಂಘಟಿತ ಕಾರ್ಮಿಕರಿಗೆ ಸಿಗುವ ಯಾವುದೇ ಸೌಲಭ್ಯಗಳು ಇಲ್ಲದೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಪತ್ರಿಕಾ ವಿತರಕರ ಬದುಕಿಗೆ ಭದ್ರತೆ ದೊರೆಯಬೇಕು. ಕನಿಷ್ಠ ಆರೋಗ್ಯ ವಿಮೆ, ಇಎಸ್‌ಐ ಸೌಲಭ್ಯ, ಅಪಘಾತ ಪರಿಹಾರ ನಿಧಿ ಸಹಿತ ಇತರೆ ಸೌಲಭ್ಯಗಳು ಸರ್ಕಾರದಿಂದ ಸಿಗಬೇಕು ಎಂದು ಒತ್ತಾಯಿಸುತ್ತಾರೆ ಪತ್ರಿಕಾ ವಿತರಕರು.

ಆಶ್ರಯ ಮನೆ ಕೊಡಿ:

ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ವಿತರಕರನ್ನೂ ಕಾರ್ಮಿಕರು ಎಂದು ಪರಿಗಣಿಸಿ ಇಎಸ್‌ಐ, ಆರೋಗ್ಯ ವಿಮೆ ಸಹಿತ ಸೌಲಭ್ಯಗಳನ್ನು ನೀಡಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಿಧಿಯಲ್ಲಿ ವಿತರಕರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಬೇಕು ಎಂದು ಒತ್ತಾಯಿಸುತ್ತಾರೆ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಿಕಾ ವಿತರಕ ಎನ್.ಅಕ್ಷಯ್‌.

ಪತ್ರಿಕಾ ವಿತರಕರಿಗೆ ಸರ್ಕಾರ ಪ್ರತ್ಯೇಕ ಕ್ಷೇಮನಿಧಿ ಮೀಸಲಿಡಬೇಕು, ಅಪ‍ಘಾತಗಳಾದ ವೈದ್ಯಕೀಯ ವೆಚ್ಚ ಭರಿಸಬೇಕು, ಮರಣ ಹೊಂದಿರೆ ಕುಟುಂಬಕ್ಕೆ ಪರಿಹಾರ ವಿತರಿಸಬೇಕು, ಜಿಲ್ಲಾಡಳಿತದಿಂದ ಪತ್ರಿಕಾ ವಿತರಕರ ದಿನಾಚರಣೆ ಆಚರಿಸಬೇಕು ಎಂದು ಒತ್ತಾಯಿಸುತ್ತಾರೆ ಕಳೆದ 25 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ‌ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಸಿ.ಪುರುಷೋತ್ತಮ್‌.

ವಿತರಕರ ಬೇಡಿಕೆಗಳು

ಸ್ವನಿಧಿ ಗೊಂದಲ ಪರಿಹರಿಸಿ

ಪತ್ರಿಕಾ ವಿತರಕರಿಗೆ ಪಿಎಂ ಸ್ವನಿಧಿ ಯೋಜನೆಯ ಗರಿಷ್ಠ ಹಂತದ ಆರ್ಥಿಕ ಸೌಲಭ್ಯ ದೊರೆಯುತ್ತಿಲ್ಲ. ಮೊದಲ ಎರಡು ಹಂತದ ಸಾಲ ಮರುಪಾವತಿ ಮಾಡಿ ಮೂರನೇ ಹಂತದ ಸಾಲ ಸಿಗದೆ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರಸರ್ಕಾರ ಸಮಸ್ಯೆ ಬಗೆಹರಿಸಬೇಕು. ‌

ಸಿ.ಪುರುಷೋತ್ತಮ್‌, ಪತ್ರಿಕಾ ವಿತರಕ ದೊಡ್ಡರಾಯಪೇಟೆ

ಅಕ್ಷಯ್‌

ಆಶ್ರಯ ಮನೆ ಯೋಜನೆಗೆ ಪರಿಗಣಿಸಿ

ಮಳೆಗಾಲದಲ್ಲಿ ಪತ್ರಿಕೆಯ ಬಂಡಲ್‌ಗಳು ಮಳೆಗೆ ಸಿಕ್ಕು ಒದ್ದೆಯಾಗಿ ಹಾಳಾಗುತ್ತಿವೆ. ಬಂಡಲ್‌ಗಳನ್ನು ಇರಿಸಲು ಸೂಕ್ತ ಸ್ಥಳ ನೀಡಬೇಕು.  ಕ್ಷೇಮಾಭಿವೃದ್ಧಿ ನಿಧಿ ಪತ್ರಿಕಾ ವಿತರಕರಿಗೂ ಸಿಗಬೇಕು, ಆಶ್ರಯ ಮನೆಗಳನ್ನು ಹಂಚುವಾಗ ಪರಿಗಣಿಸಬೇಕು, 60 ವರ್ಷ ದಾಟಿದವರಿಗೆ ಪಿಂಚಣಿ ನೀಡಿ ಸಂಧ್ಯಾಕಾಲದಲ್ಲಿ ಸ್ವಾವಲಂಬಿಯಾಗಿ ಬದುಕಲು ಆರ್ಥಿಕ ನೆರವು ನೀಡಬೇಕು.

ಅಕ್ಷಯ್, ಪತ್ರಿಕಾ ವಿತರಕ ಚಾ.ನಗರ

ಸಹಾಯಧನ ನೀಡಿ

ಪತ್ರಿಕಾ ವಿತರಕರಿಗೆ ಆರೋಗ್ಯ ಹಾಗೂ ವೈಯಕ್ತಿಕ ವಿಮಾ ಸೌಲಭ್ಯ ಕಲ್ಪಿಸಬೇಕು. ಸರ್ಕಾರದ ಯೋಜನೆಗಳಡಿ ಸಹಾಯ ಧನ ನಿಡಬೇಕು, ವಿದ್ಯುತ್ ಚಾಲಿತ ಸ್ಕೂಟರ್ ವಿತರಿಸಬೇಕು, ಪತ್ರಿಕಾ ವಿತರಣೆಗೆ ಪರಿಕರಗಳನ್ನು ವಿತರಿಸಬೇಕು. 

ಇರ್ಫಾನ್, ಪತ್ರಿಕಾ ವಿತರಕ ಯಳಂದೂರು

ಇರ್ಫಾನ್

ನಿವೇಶನ ಹಂಚಿಕೆ ಮಾಡಿ

ಮಳೆ, ಚಳಿ, ಗಾಳಿ ಲೆಕ್ಕಿಸದೆ ಪ್ರತಿನಿತ್ಯ ಪತ್ರಿಕೆಗಳನ್ನು ವಿತರಿಸುವುದು ಸವಾಲಿನ ಕೆಲಸ. ಅಡ್ಡಿ ಆತಂಕಗಳು ಎದುರಾದರೂ ವೃತ್ತಿಗೆ ಚ್ಯುತಿಬಾರದಂತೆ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ವಿತರಕರಿಗೆ ವಿಮೆ ಹಾಗೂ ನಿವೇಶನ ಸಹಿತ ಸವಲತ್ತುಗಳನ್ನು ನೀಡಬೇಕು.

ಶಾಂತರಾಜು, ಪತ್ರಿಕಾ ವಿತರಕ ಕೊಳ್ಳೇಗಾಲ

ಶಾಂತರಾಜು

ಬಸ್ ಪಾಸ್ ಸೌಲಭ್ಯ ಕೊಡಿ

ರಾಜ್ಯ ಸರ್ಕಾರ ಪತ್ರಿಕಾ ವಿತರಕರಿಗೆ ಗ್ರಾಮೀಣ ಬಸ್ ಪಾಸ್ ಸೌಲಭ್ಯ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಸಹಾಯಧನ ನೀಡಬೇಕು, ವಿತರಕರಿಗೆ ಪಿಎಫ್, ಜೀವ ವಿಮೆ ನೀಡಬೇಕು.

ಸೋಮಶೇಖರ್, ಗುಂಡ್ಲುಪೇಟೆ ಪತ್ರಿಕಾ ವಿತರಕ

ಸಂಗ್ರಹ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.