ADVERTISEMENT

ರಾ.ಹೆ.- 948ರ ಮೇಲ್ಸೇತುವೆ ಕಾಮಗಾರಿ ಕಳಪೆ ಆರೋಪ, ಪುನರ್ ನಿರ್ಮಾಣಕ್ಕೆ ಒತ್ತಾಯ

ಮೇಲ್ಸೇತುವೆ ತಡೆಗೋಡೆ ಕುಸಿತ: ಸ್ಥಳಕ್ಕೆ ಎನ್.ಮಹೇಶ್, ಎಸ್.ಬಾಲರಾಜು ಭೇಟಿ ನೀಡಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:55 IST
Last Updated 26 ಆಗಸ್ಟ್ 2025, 2:55 IST
ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ- 948ರ ಮೇಲ್ಸೇತುವೆ ಕುಸಿದ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು ವೀಕ್ಷಿಸಿದರು
ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ- 948ರ ಮೇಲ್ಸೇತುವೆ ಕುಸಿದ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು ವೀಕ್ಷಿಸಿದರು   

ಕೊಳ್ಳೇಗಾಲ: ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ- 948ರ ಮೇಲ್ಸೇತುವೆ ಕುಸಿದ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಗೂ ಮಾಜಿ ಶಾಸಕ ಎಸ್.ಬಾಲರಾಜು ಸೋಮವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್, ‘ಸೇತುವೆ ಕಾಮಗಾರಿ ಮುಕ್ತಾಯವಾಗಿ ಒಂದು ವರ್ಷ ಕಳೆದಿಲ್ಲ ಅಷ್ಟರಲ್ಲಿ ಇಂತಹ ದುರ್ಘಟನೆ ನಡೆದಿದೆ. ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಈ ಬಗ್ಗೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ’ ಎಂದರು.

‘ಆದರೆ, ಯಾವ ಅಧಿಕಾರಿಯು ಇದರ ಬಗ್ಗೆ ಗಮನ ಹರಿಸಲಿಲ್ಲ. ಗುತ್ತಿಗೆದಾರರು ರಸ್ತೆ ಕಾಮಗಾರಿಯಲ್ಲಿ ಕೋಟ್ಯಂತರ ಹಣ ನುಂಗಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಸಂಸದರು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಮೇಲ್ಸೇತುವೆ ತಡೆಗೋಡೆ ಕುಸಿದು ಒಂದು ದಿನ ಕಳೆದರೂ, ಜಿಲ್ಲಾಧಿಕಾರಿಯಾಗಲಿ, ಸಂಬಂಧಪಟ್ಟ ಅಧಿಕಾರಿಗಳು ಯಾರು ಭೇಟಿ ನೀಡಿಲ್ಲ. ಈ ಬಗ್ಗೆ ಅನುಮಾನ ಮೂಡುತ್ತಿದೆ. ರಸ್ತೆ ಕಾಮಗಾರಿಗೆ ಕಳಪೆ ಮಣ್ಣನ್ನು ಹಾಕಿರುವ ಕಾರಣ ಇಂತಹ ಘಟನೆ ಸಂಭವಿಸಿದೆ’ ದೂರಿದರು.

ADVERTISEMENT

‘ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಅವರು ಕೆಲಸ ಅಚ್ಚುಕಟ್ಟಾಗಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಆದರೂ ಇಂತಹ ಕಳಪೆ ಕಾಮಗಾರಿ ನಾನು ಎಲ್ಲೂ ನೋಡಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಕೂಡಲೇ ಕಳಪೆ ಮೇಲ್ಸೇತುವೆ ಕಿತ್ತುಹಾಕಿ, ಪುನರ್ ನಿರ್ಮಾಣದೊಂದಿಗೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬಾಲರಾಜು ಮಾತನಾಡಿ, ‘ಕಳಪೆ ಕಾಮಗಾರಿ ಮಾಡಿರುವುದು ನಿಜಕ್ಕೂ ದುರಂತದ ವಿಷಯ. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಖು. ಜೊತೆಗೆ ಅಧಿಕಾರಿಗಳನ್ನು ಅಮಾನತು ಮಾಡಬೇಕು.  ಈ ವಿಷಯವನ್ನು ಸಂಸದ ಸುನಿಲ್ ಬೊಸ್ ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡ ಆಗಸ್ಟೀನ್, ವರದರಾಜ್, ನಟರಾಜ್, ಸೋಮಣ್ಣ ಉಪ್ಪಾರ್, ಕೆ.ಕೆ ಮೂರ್ತಿ, ಮಹಾದೇವಸ್ವಾಮಿ, ಶಿವಣ್ಣ ಇದ್ದರು.

‘ಜಿಲ್ಲೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’

‘ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಭೇಟಿ ನೀಡಿಲ್ಲ. ಇವರಿಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ದೂರಿದರು. ಬೆಳಿಗ್ಗೆ ಬೇಗ ಎದ್ದೇಳಿ: ‘ಸಂಸದ ಸುನಿಲ್ ಬೋಸ್ ಅವರು ಬೆಳಿಗ್ಗೆ ಬೇಗ ಎದ್ದೇಳಬೇಕು. ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುವುದಕ್ಕೆ ಕೇವಲ 40 ನಿಮಿಷ ಸಾಕು. ಮೇಲ್ಸೇತುವೆ ತಡೆಗೋಡೆ ಕುಸಿದು ಒಂದು ದಿನ ಕಳೆದರೂ ಇದುವರೆಗೂ ಬಂದಿಲ್ಲ. ನಾನು ಬಾಗಲಕೋಟೆಯಿಂದ ವಿಷಯ ತಿಳಿದು ಬಂದಿದ್ದೇನೆ. ಬಾಲರಾಜು ಅವರು ಬೆಂಗಳೂರಿನಿಂದ ಬಂದಿದ್ದಾರೆ. ಆದರೆ ನಮ್ಮ ಸಂಸದರಿಗೆ ಬರುವಷ್ಟು ಸಮಯವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.