ADVERTISEMENT

ಮಹದೇಶ್ವರ ಬೆಟ್ಟ: ಕಾರ್ತಿಕ ಜಾತ್ರೆಗೂ ಭಕ್ತರಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 14:44 IST
Last Updated 8 ಡಿಸೆಂಬರ್ 2020, 14:44 IST
ಮಲೆ ಮಹದೇಶ್ವರ ದೇಗುಲ
ಮಲೆ ಮಹದೇಶ್ವರ ದೇಗುಲ    

ಚಾಮರಾಜನಗರ: ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಇದೇ 12ರಿಂದ 14ರವರೆಗೆ ನಡೆಯಲಿರುವ ಕಾರ್ತಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

12ರಿಂದ 14ರವರೆಗೆ ಎಣ್ಣೆಮಜ್ಜನ ಸೇವೆ, 5ನೇ ಹಾಗೂ ಕಡೆಯ ಕಾರ್ತಿಕ ಸೋಮವಾರದ ಮಹಾಜ್ಯೋತಿ ದರ್ಶನ ಹಾಗೂ ತೆಪ್ಪೋತ್ಸವ ನಡೆಯಲಿದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ADVERTISEMENT

‘ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದರೆ, ಕೋವಿಡ್‌–19 ತಡೆ ನಿಯಮ ಪಾಲನೆ ಕಷ್ಟವಾಗಲಿದೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ದೇವಾಲಯದ ಮಟ್ಟಿಗೆ ಸಾಂಪ್ರದಾಯಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಪುನಸ್ಕಾರಗಳು ನಡೆಯಲಿವೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ಕೋವಿಡ್‌–19 ಕಾರಣಕ್ಕೆ ಈ ಬಾರಿಯ ದಸರಾ ಹಾಗೂ ದೀಪಾವಳಿ ಜಾತ್ರೆಯ ಸಮಯದಲ್ಲೂ ಭಕ್ತರ ಪ್ರವೇಶವನ್ನೂ ನಿಷೇಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.