ADVERTISEMENT

ಚಾಮರಾಜನಗರ | ಮಳೆ ಕಣ್ಣುಮುಚ್ಚಾಲೆ, ರೈತರಲ್ಲಿ ಆತಂಕ

ಎರಡು ದಿನಗಳಲ್ಲಿ ಮಳೆಯಾಗದಿದ್ದರೆ, ಬಿತ್ತನೆ ಮಾಡಿದ ಬೆಳೆಗೆ ತೊಂದರೆ

ಸೂರ್ಯನಾರಾಯಣ ವಿ
Published 10 ಮೇ 2020, 20:00 IST
Last Updated 10 ಮೇ 2020, 20:00 IST
ಬಿತ್ತನೆ ಮಾಡಿರುವ ಅಲಸಂದೆ ಮೊಳಕೆಯೊಡೆದಿರುವುದು
ಬಿತ್ತನೆ ಮಾಡಿರುವ ಅಲಸಂದೆ ಮೊಳಕೆಯೊಡೆದಿರುವುದು   

ಚಾಮರಾಜನಗರ: ಆರಂಭದಲ್ಲಿ ಜಿಲ್ಲೆಯಾದ್ಯಂತ ಬಿರುಸಾಗಿ ಸುರಿದಿದ್ದ ‌ಮುಂಗಾರು ಪೂರ್ವ ಮಳೆ 10 ದಿನಗಳಿಂದ ದೂರವಾಗಿದ್ದು, ನೆಲ ಹದ ಮಾಡಿ ಬಿತ್ತನೆ ಆರಂಭಿಸಿದ್ದ ರೈತರಲ್ಲಿ ಆತಂಕ ಉಂಟು ಮಾಡಿದೆ.

ಏಪ್ರಿಲ್‌ 29ರಂದು ಜಿಲ್ಲೆಯ ಹಲವು ಕಡೆಗಳಲ್ಲಿ ಧಾರಾಕಾರವಾಗಿ ಸುರಿದ ವರ್ಷಧಾರೆ, ನಂತರ ಬಂದಿಲ್ಲ. ಬಿರು ಬಿಸಿಲಿನಿಂದಾಗಿ ವಾತಾವರಣದ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ವಾರದಿಂದೀಚೆಗೆ ವಿಪರೀತ ಸೆಖೆ ಇದ್ದು, ಪ್ರತಿ ದಿನ ಸಂಜೆ ತೀವ್ರ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಆದರೆ, ಮಳೆ ಬೀಳುತ್ತಿಲ್ಲ.

ಮುಂಗಾರು ಪೂರ್ವ ಮಳೆಯನ್ನೇ ನಂಬಿರುವ ಜಿಲ್ಲೆಯ ನೂರಾರು ರೈತರು ಉದ್ದು, ಹೆಸರು, ಅಲಸಂದೆ, ಹುರುಳಿ, ಸೂರ್ಯಕಾಂತಿ, ಸಿರಿಧಾನ್ಯಗಳು ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಬೀಜ ಮೊಳ‌ಕೆಯೊಡೆದು ಪೈರು ಬರುವುದಕ್ಕೆ ಆರಂಭವಾಗಿದೆ. ಬಿಸಿಲಿನ ಝಳಕ್ಕೆ ಕೆಲವು ಕಡೆಗಳಲ್ಲಿ ಪೈರು ನಿಧಾನವಾಗಿ ಬಾಡಲು ಆರಂಭಿಸಿವೆ. ಈಗ ಮಳೆ ಬಿದ್ದರೆ ಬೆಳೆಗಳು ಉಳಿಯಲಿವೆ.

ADVERTISEMENT

‘ಏಪ್ರಿಲ್‌ ತಿಂಗಳ ಕೊನೆಗೆ ಮಳೆ ಬಂದಿದ್ದರಿಂದ ಉಳುಮೆ ಮಾಡಿ, ಅಲಸಂದೆ, ಸಿರಿಧಾನ್ಯಗಳನ್ನು ಬಿತ್ತಿದ್ದೆ. ಅಲಸಂದೆ ಮೊಳಕೆಯೊಡೆದು ಪೈರು ಬಂದಿವೆ. ಈಗ ಅದಕ್ಕೆ ನೀರಿನ ಅಗತ್ಯವಿದೆ. ಇನ್ನು ಎರಡು ದಿನಗಳಲ್ಲಿ ಮಳೆ ಬಾರದಿದ್ದರೆ ಪೈರು ಸಾಯುತ್ತದೆ’ ಎಂದು ತಾಲ್ಲೂಕಿನ ಹೆಗ್ಗವಾಡಿಪುರದ ರೈತ ಮಹೇಶ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಪಾದ ವಾತಾವರಣ ಇದ್ದರೆ ನೆಲದಲ್ಲಿ ತೇವಾಂಶ ಇರುತ್ತದೆ. ಈಗ ಬಿಸಿಲು ವಿಪರೀತವಾಗಿದ್ದು, ಉಷ್ಣತೆ ಹೆಚ್ಚಿದೆ. ಪ್ರತಿ ದಿನ ಮೋಡ ಕವಿಯುತ್ತಾದರೂ ಮಳೆ ಬರುತ್ತಿಲ್ಲ. ಇದರಿಂದ ರೈತರು ಭಯ ಪಡುವಂತಾಗಿದೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಈ ಬಾರಿ ಬಿದ್ದಿರುವ ಮಳೆಯ ಪ್ರಮಾಣ ಹೆಚ್ಚಿದ್ದರೂ, ಕೆಲವು ದಿನಗಳಿಂದ ಮಳೆಯಾಗಿಲ್ಲ. ಬಹುತೇಕ ರೈತರು ಮುಂಗಾರು ಪೂರ್ವ ಬಿತ್ತನೆ ಮಾಡಿದ್ದಾರೆ. ಪೈರು ಬರುವ ಸಮಯ ಇದು. ಮೇ 25ರ ನಂತರ ರೋಹಿಣಿ ಮಳೆ ಖಂಡಿತವಾಗಿಯೂ ಬರುತ್ತದೆ. ಆದರೆ, ಬಿತ್ತನೆ ಮಾಡಿದ ಬೆಳೆಗೆ ಈಗ ನೀರು ಕೊಡಬೇಕು. ಹಾಗಾಗಿ ಮಳೆ ಬರಲೇ ಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೇ ತಿಂಗಳಲ್ಲಿ ಕಡಿಮೆ ಮಳೆ
ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ತಿಂಗಳ ಮೊದಲ ಎಂಟು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಮೇ1ರಿಂದ 8ರವರೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 3.5 ಸೆಂಮೀ ಮಳೆಯಾಗುತ್ತದೆ. ಈ ವರ್ಷ 1.9 ಸೆಂ.ಮೀ ಮಳೆಯಾಗಿದೆ. ಶೇ 46ರಷ್ಟು ಮಳೆ ಕೊರತೆಯಾಗಿದೆ. ಕಳೆದ ಎರಡು ದಿನವೂ ಜಿಲ್ಲೆಯಲ್ಲಿ ಎಲ್ಲೂ ಮಳೆಯಾಗಿಲ್ಲ.

ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಏಪ್ರಿಲ್‌ನಲ್ಲಿ ವಾಡಿಕೆಯಾಗಿ 6.7 ಸೆಂ.ಮೀ ಮಳೆ ಬಿದ್ದರೆ, ಈ ವರ್ಷ 7.9 ಸೆಂ.ಮೀ ಮಳೆಯಾಗಿದೆ.

ಜನವರಿ 1ರಿಂದ ಮೇ 8ರವರೆಗೆ ವಾಡಿಕೆಯಲ್ಲಿ12.4 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷವೂ ಇಷ್ಟೇ ಮಳೆ ಬಿದ್ದಿದೆ.

***
ಗ್ರಾಮೀಣ ಭಾಗದ ಕೆಲವು ಕಡೆ ಸ್ವಲ್ಪ ಮಳೆಯಾಗಿದೆ. ಬಿತ್ತನೆ ಮಾಡಿರುವ ಬೆಳೆಗೆ ನೀರಿನ ಅಗತ್ಯವಿದೆ. ಒಂದೆರಡು ದಿನಗಳಲ್ಲಿ ಮಳೆ ಬರ‌ಲಿದೆ ಎಂದು ಹವಾಮಾನ ಮುನ್ಸೂಚನೆ ಹೇಳಿದೆ.
-ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

**
ಮೋಡದ ವಾತಾವರಣ ಇದ್ದರೂ ಮಳೆಯಾಗುತ್ತಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಮಳೆ ಬಾರದಿದ್ದರೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ ರೈತರು ತೊಂದರೆ ಅನುಭವಿಸಬೇಕಾಗುತ್ತದೆ.
-ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.