ADVERTISEMENT

ಆಮ್ಲಜನಕ ಪೂರೈಕೆಗೆ ಮೈಸೂರು ಡಿಸಿ ಆಕ್ಷೇಪ: ವಾಟ್ಸ್‌ ಆ್ಯಪ್‌ನಲ್ಲಿ ಆರೋಪ ಬಹಿರಂಗ

​ಪ್ರಜಾವಾಣಿ ವಾರ್ತೆ
Published 5 ಮೇ 2021, 4:47 IST
Last Updated 5 ಮೇ 2021, 4:47 IST
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವೈದ್ಯಾಧಿಕಾರಿಗಳ ವಾಟ್ಸ್‌ಆ್ಯಪ್‌ ಗ್ರೂಪ್ ಚಾಟಿಂಗ್ ಮಾಹಿತಿ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವೈದ್ಯಾಧಿಕಾರಿಗಳ ವಾಟ್ಸ್‌ಆ್ಯಪ್‌ ಗ್ರೂಪ್ ಚಾಟಿಂಗ್ ಮಾಹಿತಿ   

ಚಾಮರಾಜನಗರ: ಚಾಮರಾಜನಗರ ಜಿಲ್ಲಾಡಳಿತದ ಆಕ್ಸಿಜನ್‌ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ನಡೆದ ಅಧಿಕಾರಿಗಳ ಚಾಟಿಂಗ್‌ ವೇಳೆ, ಅಧಿಕಾರಿಯೊಬ್ಬರು ಜಿಲ್ಲೆಗೆ ಆಮ್ಲಜನಕ ಪೂರೈಸಲು ಮೈಸೂರು ಜಿಲ್ಲಾಧಿಕಾರಿ ಆಕ್ಷೇಪಿಸಿದ್ದಾಗಿ ಹೇಳಿದ್ದು, ವೈದ್ಯಾಧಿಕಾರಿಗಳು ಚರ್ಚಿಸಿದ ಮಾಹಿತಿಯು ಈ ಭಾಗದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಏ.27ರಂದು ನಡೆದ ಚರ್ಚೆಯಲ್ಲಿ, ವೈದ್ಯಾಧಿಕಾರಿಯೊಬ್ಬರು ‘ ಸರ್‌, ಇಂದು ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ,ಚಾಮರಾಜನಗರಕ್ಕೆ ಆಮ್ಲಜನಕ ಪೂರೈಸುವುದಕ್ಕೆ ಆಕ್ಷೇಪಿಸಿದ್ದಾರೆ’ ಎಂದಿದ್ದು, ಇದರಿಂದ ಆಮ್ಲಜನಕ ತರಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ಹೀಗಾಗಿ, ಜಿಲ್ಲೆಯು ಎದುರಿಸುತ್ತಿರುವ ಆಮ್ಲಜನಕದ ಕೊರತೆಯ ಸಮಸ್ಯೆಯು ಕೇವಲ ಒಂದೆರಡು ದಿನಗಳದ್ದಲ್ಲ ಎಂಬುದು ಬಹಿರಂಗಗೊಂಡಿದೆ.

ಇದು ಬಹಿರಂಗಗೊಳ್ಳುತ್ತಿದ್ದಂತೆಯೇ, ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾವ ಸಮಯದಲ್ಲಿ ಮತ್ತೆ ಆಮ್ಲಜನಕ ಪೂರೈಕೆ ಸ್ಥಗಿತಗೊಳ್ಳುವುದೋ ಎಂಬ ದುಗುಡದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಹೊಸದಾಗಿ ಸೋಂಕು ಕಾಣಿಸಿಕೊಂಡವರು, ಜಿಲ್ಲಾಸ್ಪತ್ರೆಗೆ ದಾಖಲಾಗುವ ಬದಲು ಮೈಸೂರಿನ ಆಸ್ಪತ್ರೆಗಳಿಗೆ ದಾಖಲಾಗುವ ಬಗ್ಗೆಯೂ ವಿಚಾರ ಮಾಡುತ್ತಿದ್ದಾರೆ. ಇದರಿಂದ ಮೈಸೂರಿನ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಆಮ್ಲಜನಕ ಘಟಕ ಭರ್ತಿಯಾಗಿದೆ: ಡೀನ್‌

‘ಸದ್ಯ ಈಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 180 ಆಮ್ಲಜನಕ ಸಿಲಿಂಡರ್‌ಗಳು ಇವೆ. 6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ಮಂಗಳವಾರ ಭರ್ತಿ ಮಾಡಲಾಗಿದೆ’ ಎಂದು ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಹೇಳಿದರು. ‌

‘ಆಮ್ಲಜನಕ ಸೌಲಭ್ಯವಿರುವ ಬೆಡ್‌ ಸಮಸ್ಯೆಯೂ ಇಲ್ಲ. ಆದರೆ, ಪಾಸಿಟಿವ್‌ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಹೆಚ್ಚಿದೆ’‌ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸದ್ಯಕ್ಕೆ ಕೊರತೆ ಇಲ್ಲ: ‘ಸೋಂಕಿತರ ಅಗತ್ಯಕ್ಕೆ ತಕ್ಕಂತೆ ಘಟಕದಲ್ಲಿನ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಕೊರತೆ ಇಲ್ಲ’ ಎಂದು ಚಾಮರಾಜನಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.