ಗುಂಡ್ಲುಪೇಟೆ: ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ ಮನೆಮಾಡಿದ್ದು, ನೆರೆ ರಾಜ್ಯದ ಜೊತೆಗೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಚೆಂಡು, ಮಲ್ಲಿಗೆ, ಸೇವಂತಿ ಹೂವಿನ ವ್ಯಾಪಾರ ವಾರದಿಂದ ಭರ್ಜರಿಯಾಗಿ ನಡೆದಿದೆ. ತಾಲ್ಲೂಕಿನ ರೈತರು ಸಂತಸದಲ್ಲಿದ್ದಾರೆ.
ತಾಲ್ಲೂಕಿನ ಹೆಚ್ಚಿನ ರೈತರು ಪ್ರತಿವರ್ಷ ಈ ಹಬ್ಬಕ್ಕೆ ಸರಿಯಾಗಿ ಫಸಲು ಬರುವಂತೆ ಹೂವಿನ ಬೆಳೆ ಬೆಳೆಯುತ್ತಿದ್ದು ಬೇಡಿಕೆ ಹೆಚ್ಚಿ ಕೈತುಂಬ ಲಾಭ ಪಡೆಯುತ್ತಿದ್ದಾರೆ. ಈ ವರ್ಷವೂ ಉತ್ತಮ ಫಸಲು ಹಾಗೂ ದರ ಸಿಗುವ ನಿರೀಕ್ಷೆ ಕೈಗೂಡುತ್ತಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಇಳುವರಿ ಬಂದಿದ್ದು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಕ್ಕೆಲಗಳಲ್ಲಿ, ಗೂಡಂಗಡಿಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಚೆಂಡು ಹೂ ಕೆ.ಜಿಗೆ ₹50ರಿಂದ ₹100, ಸೇವಂತಿಗೆ ₹150, ಕನಕಾಂಬರ ₹2 ಸಾವಿರ, ಮಲ್ಲಿಗೆ ₹200 ವರೆಗೆ ಧಾರಣೆಯಿದೆ. ಕೇರಳದ ವ್ಯಾಪಾರಿಗಳೂ ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ.
ಸೆ.5ರಂದು ಓಣಂ ಹಬ್ಬವಿದ್ದು, ಉತ್ಸವದ ಸಂಭ್ರಮ ಶುರುವಾಗಿದೆ. ಹಬ್ಬದ ದಿನ ಹೂವಿನ ರಂಗೋಲಿ (ಪೂಕಳಂ) ರಚಿಸಲು ಹೆಚ್ಚಿನ ಪ್ರಮಾಣದ ಹೂಗಳು ಬೇಕಿರುವುದರಿಂದ ಸಹಜವಾಗಿ ವಿಪರೀತ ಬೇಡಿಕೆ ಸೃಷ್ಟಿಯಾಗುತ್ತದೆ.
ಕೇರಳಿಗರು ಓಣಂ ಹಬ್ಬದ ಸಂದರ್ಭ ಹತ್ತು ದಿನಗಳವರೆಗೆ ಮನೆಯಲ್ಲಿ ಹೂವಿನ ರಂಗೋಲಿ ಬಿಡಿಸಿ ಸಂಭ್ರಮಿಸುತ್ತಾರೆ. ಹತ್ತು ದಿನವೂ ವಿವಿಧ ಬಣ್ಣಗಳ, ಮಾದರಿಯ ಹೂ ರಂಗೋಲಿ ಬಿಡಿಸುವುದು ಸಂಪ್ರದಾಯ. ಹಾಗಾಗಿ ಬಣ್ಣಬಣ್ಣದ ಚೆಂಡು ಹೂ, ಕಾಕಡ, ಸೇವಂತಿ, ಮಲ್ಲಿಗೆಗೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಹಬ್ಬವನ್ನೇ ಕೇಂದ್ರೀಕರಿಸಿ ತಾಲ್ಲೂಕಿನ ರೈತರು ಮೇ ಕೊನೆಯಲ್ಲಿ ಹೂವಿನ ಗಿಡಗಳ ನಾಟಿ ಮಾಡುತ್ತಾರೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ವರೆಗೆ ಹೂವಿನ ಕಟಾವು ನಡೆಯಲಿದ್ದು ಟನ್‌ಗಟ್ಟಲೆ ಹೂ ಕೇರಳಕ್ಕೆ ರವಾನೆಯಾಗುತ್ತದೆ. ಕೇರಳದಿಂದ ನೇರವಾಗಿ ವ್ಯಾಪಾರಿಗಳು ಬಂದು ಹೂ ಖರೀದಿಸಿದರೆ, ಸ್ಥಳೀಯ ವ್ಯಾಪಾರಿಗಳು ಸಹ ಹೂ ಖರೀದಿಸಿ ಕೇರಳಕ್ಕೆ ಕಳುಹಿಸಿಕೊಡುತ್ತಾರೆ.
ಉತ್ತಮ ಇಳುವರಿ ಹೂ ಬೆಳೆಗಾರರಿಗೆ ಲಾಭ ಕೇರಳದಲ್ಲಿ ಗುಂಡ್ಲುಪೇಟೆ ಹೂಗೆ ಭಾರಿ ಬೇಡಿಕೆ ಬಣ್ಣಬಣ್ಣದ ಹೂ ಖರೀದಿಸುತ್ತಿರುವ ವ್ಯಾಪಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.