ADVERTISEMENT

ಗುಂಡ್ಲುಪೇಟೆ | OPD ಚೀಟಿ ಪಡೆಯಲು ಹರಸಾಹಸ: ಹೆಚ್ಚುವರಿ ಕೌಂಟರ್‌ ತೆರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:27 IST
Last Updated 4 ಸೆಪ್ಟೆಂಬರ್ 2025, 2:27 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಓಪಿಡಿ ಚೀಟಿ ಪಡೆಯಲು ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಓಪಿಡಿ ಚೀಟಿ ಪಡೆಯಲು ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು   

ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಓಪಿಡಿ ಚೀಟಿಗಾಗಿ ರೋಗಿಗಳು ಮಾರುದ್ದ ಸರತಿ ಸಾಲಿನಲ್ಲಿ ಮಂಗಳವಾರ ಬೆಳಿಗ್ಗೆ ನಿಂತಿದ್ದರು. ಗಂಟೆಗಟ್ಟಲೆ ಕಾಯುವ ಸ್ಥಿತಿ ಇದ್ದರೂ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾಗಿದೆ. ಇದು ರೋಗಿಗಳ ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.‌

ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ, ಪ್ರತಿಯೊಬ್ಬರು ಓಪಿಡಿಯಲ್ಲಿ ಚೀಟಿ ಪಡೆಯುವುದು ಕಡ್ಡಾಯ. ಇದಕ್ಕೆ ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೋಗಿಗಳು ಮತ್ತು ಸಂಬಂಧಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ.

ದೊಡ್ಡಾಸ್ಪತ್ರೆ ಎಂದೆ ಹೆಸರಾದ ಸಾರ್ವಜನಿಕ ಆಸ್ಪತ್ರೆಗೆ ವಿವಿಧ ಆರೋಗ್ಯ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಿಂದ ನಾಗರಿಕರು ಬರುತ್ತಾರೆ. ಆದರೆ, ನಿಗದಿತ ಸಮಯಕ್ಕೆ ಸರಿಯಾಗಿ ಓಪಿಡಿ ಚೀಟಿ ನೀಡದೆ ಇರುವುದರಿಂದ ವೈದ್ಯರ ಬಳಿ ಸಲಹೆ ಮತ್ತು ಚಿಕಿತ್ಸೆ ಪಡೆಯಲು ವಿಳಂಬವಾಗುತ್ತಿದೆ ಎಂದು ಅಣ್ಣೂರುಕೇರಿ ರವಿ ಆರೋಪಿಸಿದ್ದಾರೆ.

ADVERTISEMENT

ಹೆಚ್ಚುವರಿ ಓಪಿಡಿ ಕೌಂಟರ್ ತೆರಯುವಂತೆ ಒತ್ತಾಯ: ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚೀಟಿ ನೀಡಲು ಒಂದು ಕೌಂಟರ್ ಮಾತ್ರ ತೆರೆಯಲಾಗಿದೆ. ಇದರಿಂದ ಪ್ರತಿನಿತ್ಯ ಬೆಳಗಿನ ಬೇಳೆ ಚೀಟಿಗಾಗಿ ಸರತಿ ಸಾಲಿನಲ್ಲಿ ಕಾದು ನಿಲ್ಲಬೇಕಾಗಿದೆ. ಜೊತೆಗೆ ಇಲ್ಲಿನ ಸಿಬ್ಬಂದಿ ಸಹ ಆಮೆಗತಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಓಪಿಡಿ ಚೀಟಿ ನೀಡಲು ತಡವಾಗುತ್ತಿದೆ. ಇದರಿಂದ ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ಕೌಂಟರ್ ತೆರೆದು ಸಮರ್ಪಕವಾಗಿ ಆರೋಗ್ಯ ಸೇವೆ ನೀಡುವಂತೆ ಕರವೇ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ವಿ.ನಾಯಕ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.