ADVERTISEMENT

ಇಂದು ವಿಶ್ವ ಮಣ್ಣಿನ ದಿನ: ಮಣ್ಣಿನ ಫಲವತ್ತತೆಗೆ ಸಾವಯವ ಕೃಷಿಯೇ ದಾರಿ...

ಯಳಂದೂರು: 350 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮಣ್ಣಿನ ಆರೋಗ್ಯ ವೃದ್ಧಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 4:36 IST
Last Updated 5 ಡಿಸೆಂಬರ್ 2025, 4:36 IST
   

ಯಳಂದೂರು: ಸಸ್ಯಲೋಕದ ಜೀವ ತಂತುಗಳಿಗೆ ಆಸರೆಯಾಗಿರುವ ಮಣ್ಣು ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಸಾರ ಕಳೆದುಕೊಳ್ಳುತ್ತಿದೆ. ತಾಲ್ಲೂಕಿನ ಶೇ 90ಕ್ಕೂ ಹೆಚ್ಚಿನ ಭಾಗದ ಕೃಷಿ ಭೂಮಿಯು ಸಮಸ್ಯೆಯಲ್ಲಿದ್ದು, ಬೆರಳೆಣಿಕೆ ರೈತರು ಮಾತ್ರ ಮಣ್ಣಿನ ಫಲವತ್ತತೆಗೆ ಪೂರಕವಾದ ಸಾವಯವ ಕೃಷಿ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಶೇ 90 ಭಾಗ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಆವೃತವಾಗಿದ್ದರೆ, ಉಳಿದಂತೆ ಜೇಡಿಮಣ್ಣು, ಜಂಬಿಟ್ಟಿಗೆ, ಮೆಕ್ಕಲು ಮಣ್ಣು ಅಲ್ಪ ಪ್ರಮಾಣದಲ್ಲಿ ಇದೆ. 10,500 ಹೆಕ್ಟೇರ್ ಪ್ರದೇಶ ಕೃಷಿಗೆ ಒಳಪಟ್ಟಿದ್ದು, ಬಹುತೇಕ ಸಾಗುವಳಿದಾರರು ರಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡುತ್ತಿದ್ದು, ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ.

‘ಕಾಡಂಚಿನ ಪ್ರದೇಶಗಳಲ್ಲಿ ಇಟ್ಟಿಗೆ, ಕಲ್ಲುಗಣಿ, ಕೆರೆ, ಕಾಲುವೆ ಒತ್ತುವರಿಯಿಂದ ಮಣ್ಣಿನ ಜೀವ ಸತ್ವ ಹಾಳಾಗುತ್ತಿದೆ. ಅರಣ್ಯ ಹಾಗೂ ಜಲಮೂಲಗಳ ನಾಶವೂ ಸಮಸ್ಯೆಯನ್ನು ತೀವ್ರಗೊಳಿಸಿದೆ. ಚರಂಡಿ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಮಾಲಿನ್ಯ ಹೆಚ್ಚಾಗುತ್ತದೆ’ ಎನ್ನುತ್ತಾರೆ ಪರಿಸರ ಪ್ರಿಯ ಕೆಸ್ತೂರು ಪ್ರಸನ್ನ ಕುಮಾರ್.

ADVERTISEMENT

350 ಹೆಕ್ಟೇರ್ ಪ್ರದೇಶದಲ್ಲಿ ಪ್ರಯೋಗ: ತಾಲ್ಲೂಕಿನ ಹೊನ್ನೂರು, ಕೆಸ್ತೂರು, ಗೌಡಹಳ್ಳಿ, ಮದ್ದೂರು, ಯರಗಂಬಳ್ಳಿ ಹಾಗೂ ಬಿಳಿಗಿರಿಬೆಟ್ಟ ಪಂಚಾಯಿತಿಗಳ 350 ಹೆಕ್ಟೇರ್ ಪ್ರದೇಶದಲ್ಲಿ ಮಣ್ಣಿನ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಈ ವ್ಯಾಪ್ತಿಯ 150 ಕೃಷಿಕರನ್ನು ಆಯ್ಕೆ ಮಾಡಿ, ಮಣ್ಣಿನ ಮೇಲಿನ ಜೀವ ಮಂಡಲದ ಬದುಕನ್ನು ಉದ್ದೀಪಿಸಲು ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗಿದೆ.

‘ಗಿಡಗಳು ಆರೋಗ್ಯವಾಗಿರಲು ಮಣ್ಣಿಗೆ ವಿವಿಧ ರೂಪದ ಪೋಷಕಾಂಶಗಳನ್ನು ಪೂರೈಸಬೇಕು. ಹಸಿರಿಲೆ, ಕೊಟ್ಟಿಗೆ ಗೊಬ್ಬರ ಮತ್ತಿತರ ಸಾವಯವ ಅಂಶಗಳನ್ನು ಸೇರಿಸಿ ಮಣ್ಣಿನ ಜೀವಾಣುಗಳನ್ನು ಬೆಳೆಸಬೇಕು. ಮಣ್ಣಿನಲ್ಲಿ ಬೆರೆತ ಪೋಷಕಾಂಶಗಳನ್ನು ಸಸಿಗಳಿಗೆ ನೀಡುವ ಕೆಲಸವನ್ನು ಮಾಡುವುದು ಕಾರ್ಯಕ್ರಮದ ಉದ್ದೇಶ’ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.

4 ಸಾವಿರ ಪ್ರೋತ್ಸಾಹಧನ:‘ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶೇ 40 ಸಾರಜನಕ, ಶೇ 20 ರಂಜಕ, ಶೇ 20 ಪೊಟ್ಯಾಷ್ ಸಾಕು. ಆದರೆ, ರೈತರು ಇವುಗಳ 4 ರಿಂದ 5 ಪಟ್ಟು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಸವಕಳಿ ಹೆಚ್ಚಾಗಿ, ಮಣ್ಣಿನ ಜೀವಾಣುಗಳ ಸಂಖ್ಯೆ ಕುಸಿಯುತ್ತಿದೆ, ಪರಿಣಾಮ ಮಣ್ಣು ಆರೋಗ್ಯ ಕಳೆದುಕೊಳ್ಳುತ್ತದೆ. ಇದನ್ನು ತಪ್ಪಿಸಲು ನೈಸರ್ಗಿಕ ಕೃಷಿ ಮಾಡುವವರಿಗೆ ₹ 4 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಅಮೃತೇಶ್ವರ. 

‘ಇಂದು ವಿಶ್ವ ಮಣ್ಣಿನ ದಿನ’

ಪ್ರತಿವರ್ಷ ಡಿ.5 ರಂದು ವಿಶ್ವ ಮಣ್ಣು ದಿನಾಚರಣೆ ಆಚರಿಸಲಾಗುತ್ತದೆ. ನಗರೀಕರಣದ ಪ್ರಭಾವದಿಂದ ಪಟ್ಟಣ ಪ್ರದೇಶಗಳಲ್ಲಿ ಮಣ್ಣು ವೇಗವಾಗಿ ಕಲುಷಿತವಾಗುತ್ತಿದೆ. ಮಣ್ಣಿನ ಕಣಕಣಕ್ಕೂ ಪ್ಲಾಸ್ಟಿಕ್, ತ್ಯಾಜ್ಯ, ರಾಸಾಯನಿಕಗಳು ಸೇರಿವೆ. ಇದರಿಂದ ತಾಪಮಾನ ಹೆಚ್ಚಿ, ಇಂಗಾಲ ಸಂಗ್ರಹವಾಗಿ, ಆಹಾರ ಉತ್ಪಾದನೆಯ ಪರಿಸರ ವ್ಯವಸ್ಥೆಯನ್ನು ಹಾಳಾಗುತ್ತದೆ. ಈ ದೆಸೆಯಲ್ಲಿ ನಗರಗಳನ್ನು ಹೆಚ್ಚು ಹಸಿರು ಮತ್ತು ಸುಸ್ಥಿರ ಬೆಳವಣಿಗೆ ಹೊಂದಲು 2025ರಲ್ಲಿ ವಿಶ್ವಸಂಸ್ಥೆ ‘ಕೃಷಿ ಮತ್ತು ಆಹಾರ ಸಂಸ್ಥೆ’,  ‘ಆರೋಗ್ಯಕರ ನಗರಗಳಿಗೆ ಸ್ವಾಸ್ಥ್ಯ ಸಮೃದ್ಧ ಮಣ್ಣು’ ಧ್ಯೇಯವಾಗಿ ಜಾಗೃತಿ ಮೂಡಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.