ADVERTISEMENT

ಚಾಮರಾಜನಗರ | ಆರ್‌ಟಿಇ: ಮಕ್ಕಳ ದಾಖಲಾತಿಗೆ ನಿರುತ್ಸಾಹ

ನಿಯಮ ಬದಲಿದ ನಂತರ, ಖಾಸಗಿ ಶಾಲೆಗಳಲ್ಲಿ ಲಭ್ಯವಿಲ್ಲ ಸೀಟು

​ಪ್ರಜಾವಾಣಿ ವಾರ್ತೆ
Published 16 ಮೇ 2022, 3:18 IST
Last Updated 16 ಮೇ 2022, 3:18 IST
ಜಿಲ್ಲೆಯಾದ್ಯಂತ ಸೋಮವಾರ ಶಾಲೆ ಆರಂಭವಾಗಲಿದ್ದು,  ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಇತರರು ಶಾಲಾ ಆವರಣ ಸ್ವಚ್ಛಗೊಳಿಸಿತ್ತಿರುವುದು 
ಜಿಲ್ಲೆಯಾದ್ಯಂತ ಸೋಮವಾರ ಶಾಲೆ ಆರಂಭವಾಗಲಿದ್ದು,  ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಇತರರು ಶಾಲಾ ಆವರಣ ಸ್ವಚ್ಛಗೊಳಿಸಿತ್ತಿರುವುದು    

ಚಾಮರಾಜನಗರ: ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯ್ದೆಯ ನಿಯಮಗಳಿಗೆ ರಾಜ್ಯ ಸರ್ಕಾರ 2019ರಲ್ಲಿ ತಿದ್ದುಪಡಿ ತಂದ ನಂತರ ಜಿಲ್ಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ.

ನಿಯಮ ತಿದ್ದುಪಡಿಯ ಬಳಿಕ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಲಭ್ಯವಿಲ್ಲ. ಹೊಸ ನಿಯಮದಲ್ಲಿ ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಅಡಿಯಲ್ಲಿ ಮಕ್ಕಳನ್ನು ದಾಖಲಿಸಬಹುದು.

ಆರ್‌ಟಿಇ ಕಾಯ್ದೆ ಜಾರಿಗೆ ಬ‌ರುವಾಗ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ 25 ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಮೀಸಲಿಡಬೇಕು ಎಂಬ ನಿಯಮ ಜಾರಿಯಲ್ಲಿತ್ತು.

ADVERTISEMENT

ಈ ನಿಯಮಕ್ಕೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ, ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಅಥವಾ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಆರ್‌ಟಿಇ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿತ್ತು.

ಜಿಲ್ಲೆಯಲ್ಲಿ ಆರ್‌ಟಿಇ ಅಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಐದು ತಾಲ್ಲೂಕುಗಳ 20 ಅನುದಾನಿತ ಶಾಲೆಗಳಲ್ಲಿ 149 ಸೀಟುಗಳನ್ನು ಮೀಸಲಿಡಲಾಗಿದೆ. ಇದುವರೆಗೆ 51 ಅರ್ಜಿಗಳು ಮಾತ್ರ ಬಂದಿದ್ದು, 16 ಜನರು ಮಕ್ಕಳು ಮಾತ್ರ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಚಾಮರಾಜನರ ತಾಲ್ಲೂಕಿನಲ್ಲಿ ‌ಏಳು ಅನುದಾನಿತ ಶಾಲೆಗಳು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ತಲಾ ನಾಲ್ಕು, ಯಳಂದೂರಿನ ಮೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಎರಡು ಅನುದಾನಿತ ಶಾಲೆಗಳಲ್ಲಿ ಸೀಟುಗಳು ಲಭ್ಯವಿವೆ.

ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 43 ಮಂದಿ, ಎರಡನೇ ಸುತ್ತಿನಲ್ಲಿ ಎಂಟು ಮಂದಿ ಅರ್ಜಿ ಸಲ್ಲಿಸಿದ್ದರು. ಮೂರನೇ ಸುತ್ತಿನಲ್ಲಿ ಯಾರೂ ಅರ್ಜಿ ಹಾಕಿಲ್ಲ. ಮೊದಲ ಸುತ್ತಿನಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ 12 ಮಂದಿ ಹಾಗೂ ಎರಡನೇ ಸುತ್ತಿನಲ್ಲಿ ನಾಲ್ವರು ಮಕ್ಕಳು ಒಂದನೇ ತರಗತಿಗೆ ದಾಖಲಾಗಿದ್ದಾರೆ.

ಗುಂಡ್ಲುಪೇಟೆಯಲ್ಲಿ ಹೆಚ್ಚು: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆರ್‌ಟಿಇ ಅಡಿಯಲ್ಲಿ ಎರಡು ಶಾಲೆಗಳಲ್ಲಿ 15 ಸೀಟುಗಳು ಲಭ್ಯವಿವೆ. ನಿಗದಿತ ಮಿತಿಗಿಂತ ಎರಡು ಹೆಚ್ಚು ಅರ್ಜಿಗಳು ಬಂದಿವೆ. ಅಂದರೆ 17 ಮಂದಿ ಪೋಷಕರು ಅರ್ಜಿ ಹಾಕಿದ್ದು, ಈಗಾಗಲೇ 10 ಮಕ್ಕಳು ಶಾಲೆಗೆ ಸೇರಿದ್ದಾರೆ. ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳ ಎಂಟು ಶಾಲೆಗಳಲ್ಲಿ 56 ಸೀಟುಗಳು ಇದ್ದರೂ, ಯಾರೊಬ್ಬರೂ ಶಾಲೆಗೆ ಸೇರಿಲ್ಲ. ಹನೂರಿನಲ್ಲಿ ಒಂದು ಅರ್ಜಿಯೂ ಬಂದಿಲ್ಲ. ಕೊಳ್ಳೇಗಾಲದಲ್ಲಿ 12 ಅರ್ಜಿಗಳು ಬಂದಿವೆ.

ಚಾಮರಾಜನಗರ ತಾಲ್ಲೂಕಿನ ಏಳು ಶಾಲೆಗಳಲ್ಲಿ56 ಸೀಟುಗಳು ಲಭ್ಯವಿದ್ದರೂ, 17 ಅರ್ಜಿಗಳಷ್ಟೇ ಬಂದಿವೆ. ಇಬ್ಬರು ಮಕ್ಕಳು ಶಾಲೆಗೆ ಸೇರ್ಪಡೆಯಾಗಿದ್ದಾರೆ.

ಪೋಷಕರಲ್ಲಿ ನಿರಾಸಕ್ತಿ: ಕಾಯ್ದೆ ಜಾರಿಗೆ ಸಂದರ್ಭದಲ್ಲಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಸಿಗುತ್ತಿದ್ದುದರಿಂದ ಪೋಷಕರು ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ಈಗ ಅನುದಾನಿತ ಶಾಲೆಗಳನ್ನು ಖಾಸಗಿ ಆಡಳಿತ ನಿರ್ವಹಿಸುತ್ತಿದ್ದರೂ, ಹೆಚ್ಚಿನ ಅನುದಾನಿತ ಶಾಲೆ ಕನ್ನಡ ಮಾಧ್ಯಮ ಹಾಗೂ ರಾಜ್ಯ ‍ಪಠ್ಯಕ್ರಮವನ್ನು ಅನುಸರಿಸುತ್ತವೆ. ಅಲ್ಲಿನ ಶುಲ್ಕವೂ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಪೋಷಕರಿಗೆ ಹೆಚ್ಚು ಹೊರೆಯಾಗುವುದಿಲ್ಲ. ಹೀಗಾಗಿ, ಪೋಷಕರು ಆರ್‌ಟಿಇ ಅಡಿಯಲ್ಲಿ ಅರ್ಜಿ ಹಾಕಲು ಉತ್ಸಾಹ ತೋರುತ್ತಿಲ್ಲ.

‘ಹೊಸ ನಿಯಮದಿಂದಾಗಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಲಭ್ಯವಿಲ್ಲ. ನಮ್ಮಲ್ಲಿ ನಿಗದಿಪಡಿಸಿರುವ ಶಾಲೆಗಳೆಲ್ಲವೂ ಅನುದಾನಿತ ಶಾಲೆಗಳು. ವರ್ಷದಿಂದ ವರ್ಷಕ್ಕೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಜಿಲ್ಲೆಯಲ್ಲಿ ಮಾತ್ರವಲ್ಲ. ಎಲ್ಲ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಸರ್ಕಾರಕ್ಕೆ ಹಣ ಉಳಿತಾಯ: ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ದಾಖಲಾದ ಒಂದು ಮಗುವಿಗೆ ಗರಿಷ್ಠ ಎಂದರೆ ವರ್ಷಕ್ಕೆ ₹16 ಸಾವಿರ ಸರ್ಕಾರ ಖರ್ಚು ಮಾಡುವುದಕ್ಕೆ ಅವಕಾಶ ಇತ್ತು. ಬಹುತೇಕ ಅನುದಾನಿತ ಶಾಲೆಗಳ ಶುಲ್ಕ ಸರ್ಕಾರಿ ಶಾಲೆಗಳಷ್ಟೇ ಇರುತ್ತದೆ. ಕೆಲವು ಕಡೆಗಳಲ್ಲಿ ಸ್ವಲ್ಪ ಹೆಚ್ಚು ಇರಬಹುದು. ಆರ್‌ಟಿಇ ಅಡಿಯಲ್ಲಿ ವಿದ್ಯಾರ್ಥಿಗೆ ನಿಗದಿ ಪಡಿಸಿದ ಶುಲ್ಕವನ್ನು ಸರ್ಕಾರ ಪಾವತಿಸುತ್ತದೆ. ಆದರೆ, ಆ ಮೊತ್ತ ಹೆಚ್ಚಿರುವುದಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಅರಿವಿನ ಕೊರತೆ: ಜಿಲ್ಲೆಯಲ್ಲಿ ಗ್ರಾಮೀಣ ಭಾಗ ಹೆಚ್ಚು. ಅದರಲ್ಲೂ ಕಾಡಂಚಿನ ಪ್ರದೇಶಗಳೇ ಹೆಚ್ಚಾಗಿವೆ. ಆರ್‌ಟಿಇ ಬಗ್ಗೆ ಅರಿವಿನ ಕೊರತೆಯೂ ಇದೆ. ಇದಲ್ಲದೇ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಪೋಷಕರು ನಗರ, ಪಟ್ಟಣ ಪ್ರದೇಶಗಳಿಗೆ ಬಂದು ಸೈಬರ್‌ ಸೆಂಟರ್‌ಗಳಲ್ಲಿಯೋ ಅಥವಾ ಅರ್ಜಿ ಸಲ್ಲಿಸಲು ಗೊತ್ತಿರುವವರನ್ನೋ ಹುಡುಕಾಡಬೇಕು. ಈ ಕಾರಣಕ್ಕೂ ಆರ್‌ಟಿಇ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಅಧಿಕಾರಿಗಳು, ಪೋಷಕರ ಮಾತು...

ಸದ್ಬಳಕೆ ಮಾಡಿಕೊಳ್ಳಬೇಕು
ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಆರಂಭವಾಗಿವೆ. ಪೋಷಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ತಾಲ್ಲೂಕಿನಲ್ಲಿ ಮೂರು ಶಾಲೆಗಳಿಗೆ ಮಾತ್ರ ಆರ್‌ಟಿಇ ಅಡಿ ಅರ್ಜಿ ದಾಖಲೀಕರಣಕ್ಕೆ ಅವಕಾಶ ಕಲ್ಪಿಸಿದ್ದು ಈಗಾಗಲೇ ದಾಖಲಿಸಿಕೊಂಡ ಮಕ್ಕಳ ಶುಲ್ಕವನ್ನು 2021022ನೇ ಸಾಲಿನಲ್ಲಿ ಸರ್ಕಾರ ಭರಿಸುತ್ತಿದೆ.
–ಕೆ.ಕಾಂತರಾಜ್, ಯಳಂದೂರು, ಬಿಇಒ

ಕನ್ನಡ ಮಾಧ್ಯಮ ನೆಪ
ನಮ್ಮಲ್ಲಿ ಎರಡು ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಲಭ್ಯವಿವೆ. ಕನ್ನಡ ಮಾದ್ಯಮ ಶಾಲೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಆರ್‌ಟಿಇ ಕಾಯ್ದೆಯಡಿ ಶಾಲೆಗೆ ಸೇರಿಸಲು ಉತ್ಸಾಹ ತೋರುತ್ತಿಲ್ಲ.
– ಎಸ್.ಸಿ.ಶಿವಮೂರ್ತಿ, ಗುಂಡ್ಲುಪೇಟೆ ಬಿಇಒ

ಮಾಹಿತಿ ಕೊರತೆ ಕಾರಣ
ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶದ ಜನರಿಗೆ ಮಕ್ಕಳನ್ನು ಆರ್‌ಟಿಇ ಅಡಿ ದಾಖಲಿಸಲು ಮಾಹಿತಿಯ ಕೊರತೆ ಇದೆ. ಖಾಸಗಿ ಶಾಲೆಗಳಲ್ಲಿ ಈಗ ಸೀಟು ಇಲ್ಲದಿರುವುದರಿಂದ ಬಹುತೇಕರು ಸಮೀಪದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ.
– ಜೆ.ರಂಗಸ್ವಾಮಿ,ಕೆಸ್ತೂರು, ಯಳಂದೂರು ತಾಲ್ಲೂಕು

ಆಸಕ್ತಿ ತೋರುತ್ತಿಲ್ಲ
ತಾಲ್ಲೂಕಿನಲ್ಲಿ ಆರ್‌ಟಿಇ ಕಾಯ್ದೆಯ ಪ್ರಕಾರ, ಅನುದಾನಿತ ಶಾಲೆಗಳಿಗೆ ಮಾತ್ರ ದಾಖಲಿಸಲು ಪೋಷಕರಿಗೆ ಅವಕಾಶ ಇದೆ. ಸೀಟುಗಳಿಗೆ ಸ್ಥಾನಗಳಿಗೆ ನಾಲ್ವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದ 2 ಶಾಲೆಗಳಿಗೆ ಅರ್ಜಿ ಸಲ್ಲಿಸಲು ಯಾರೂ ಆಸಕ್ತಿ ತೋರುತ್ತಿಲ್ಲ.
–ಎಸ್.ಶಿವಕುಮಾರ್,ಮುಖ್ಯ ಶಿಕ್ಷಕ,ಲಯನ್ಸ್ ಕಾನ್ವೆಂಟ್, ಯಳಂದೂರು ದೂರು

ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ
ಗ್ರಾಮೀಣ ಭಾಗದಲ್ಲಿ ಆರ್‌ಟಿಇ ಅಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಬಹುತೇಕ ಪೋಷಕರು ಆರ್.ಟಿ ಇ ಅಡಿ ನಗರ ಪ್ರದೇಶಗಳಲ್ಲಿ ತಮ್ಮ ಮಕ್ಕಳಿಗೆ ಸೀಟು ಸಿಗಬೇಕು ಎಂದು ಬಯಸುತ್ತಾರೆ. ಆದರೆ, ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ.
–ರಾಜು, ಹನೂರು

ಉಚಿತ ಶಿಕ್ಷಣ ನೀಡುವ ಉದ್ದೇಶ
ಆರ್‌ಟಿಇ ಕಾಯ್ದೆಯ ಉದ್ದೇಶ ಎಲ್ಲ ಮಕ್ಕಳಿಗೂ ಉಚಿತವಾಗಿ ಶಿಕ್ಷಣ ನೀಡುವುದು. ಆದರೆ, ಆರ್‌ಟಿಇ ಎಂದರೆ ಖಾಸಗಿ ಶಾಲೆಗಳಿಗೆ ಸೇರುವುದು ಎಂಬ ನಂಬಿಕೆ ಜನರಲ್ಲಿದೆ. 2019ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿದ್ದರೆ ಖಾಸಗಿ ಶಾಲೆಗಳಿಗೆ ಸೇರುವುದಕ್ಕೆ ಅವಕಾಶ ಇಲ್ಲ.ಜಿಲ್ಲೆಯಲ್ಲಿ ಈಗ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಲಭ್ಯವಿವೆ. ಅನುದಾನಿತ ಶಾಲೆಗಳಿಗೆ ಸೇರಿದ ಮಕ್ಕಳ ಶುಲ್ಕವನ್ನು ಇಲಾಖೆ ಭರಿಸಲಿದೆ.
–ಎಸ್‌.ಎನ್‌.ಮಂಜುನಾಥ್‌, ಡಿಡಿಪಿಐ

**

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ. ಬಿ.ಬಸವರಾಜು, ಅವಿನ್‌ ಪ್ರಕಾಶ್‌ ವಿ., ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.